ನವದೆಹಲಿ: ಕೇಂದ್ರ ಸರ್ಕಾರವು ಇಂಡಿಯಾ ಎಂಬ ಹೆಸರನ್ನು ಭಾರತ ಎಂಬುದಾಗಿ ಬದಲಿಸುತ್ತದೆ, ಮುಂಬರುವ ಸಂಸತ್ ವಿಶೇಷ ಅಧಿವೇಶನದಲ್ಲಿಯೇ ಈ ಕುರಿತು ವಿಧೇಯಕ ಮಂಡಿಸುತ್ತದೆ ಎಂಬ ಚರ್ಚೆಗಳು ಜೋರಾಗಿವೆ. ಭಾರತ ಎಂಬುದಾಗಿ ಬದಲಿಸಲಿ ಎಂದು ಕೆಲವರು, ಬದಲಾಯಿಸಬಾರದು ಎಂದು ಪ್ರತಿಪಕ್ಷಗಳ ನಾಯಕರು ಸೇರಿ ಹಲವರು ವಾದ ಮಂಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಇಂಡಿಯಾ ಹಾಗೂ ಭಾರತ ಚರ್ಚೆಯಲ್ಲಿ ಪಾಲ್ಗೊಳ್ಳದಿರಿ ಎಂದು ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಖಡಕ್ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಸಚಿವರೊಂದಿಗೆ ಸಭೆ ನಡೆಸಿದ ಮೋದಿ, ಸಚಿವರಿಗೆ ಹಲವು ಸೂಚನೆ ನೀಡಿದ್ದಾರೆ. “ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದವರು, ಹೇಳಿಕೆಯನ್ನು ಬೆಂಬಲಿಸಿದವರಿಗೆ ಸರಿಯಾದ ತಿರುಗೇಟು ನೀಡಿ. ಆದರೆ, ಇಂಡಿಯಾ ಹಾಗೂ ಭಾರತ ವಿವಾದದ ಕುರಿತು ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದು, ಹೇಳಿಕೆ ನೀಡುವುದನ್ನು ಮಾಡದಿರಿ” ಎಂಬುದಾಗಿಸ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲೇ ಇರಿ, ಉಸ್ತುವಾರಿ ನೋಡಿಕೊಳ್ಳಿ
ಭಾರತದ ಅಧ್ಯಕ್ಷತೆಯಲ್ಲಿ, ದೆಹಲಿಯಲ್ಲಿಯೇ ಸೆಪ್ಟೆಂಬರ್ 9 ಹಾಗೂ 10ರಂದು ಜಿ-20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ಮಾಡಲಾಗುತ್ತಿದೆ. ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ಇದರ ಬೆನ್ನಲ್ಲೇ, ಸಚಿವರು ದೆಹಲಿಯಲ್ಲೇ ಇದ್ದು, ವಿದೇಶದಿಂದ ಬಂದ ಗಣ್ಯರಿಗೆ ಯಾವುದೇ ತೊಂದರೆ, ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಿ. ಆ ಮೂಲಕ ಜಿ-20 ಶೃಂಗಸಭೆಯು ಯಶಸ್ವಿಯಾಗಲು ಕಾರಣರಾಗಿ ಎಂಬುದಾಗಿಯೂ ಮೋದಿ ಸೂಚಿಸಿದ್ದಾರೆ ಎನ್ನಲಾಗಿದೆ.
ಜಿ 20 ಸಭೆಗೆ ಭಾರತ ಸಿದ್ಧ
ಇದನ್ನೂ ಓದಿ: Udhayanidhi Stalin: ಸನಾತನ ಧರ್ಮ ಕುರಿತು ‘ಅದೇ ಮಾತು’ ಮತ್ತೆ ಮತ್ತೆ ಹೇಳುವೆ! ಉದಯನಿಧಿ ಸ್ಟಾಲಿನ್ ಭಂಡತನ
ಇಂಡಿಯಾ ಎಂಬ ಹೆಸರನ್ನು ಭಾರತ ಎಂಬುದಾಗಿ ಬದಲಾಯಿಸುವ ಕುರಿತು ಹಬ್ಬಿರುವ ಸುದ್ದಿ ಕೇವಲ ವದಂತಿ ಎಂದು ಈಗಾಗಲೇ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಆದರೆ, ಜಿ-20 ನಾಯಕರಿಗೆ ರಾಷ್ಟ್ರಪತಿ ಅವರಿಂದ ಭೋಜನಕೂಟಕ್ಕೆ ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂಬುದಾಗಿ ನಮೂದಿಸಿದ ಬಳಿಕ ಭಾರತ ಎಂಬುದಾಗಿ ಹೆಸರು ಬದಲಾಯಿಸಲಾಗುತ್ತದೆ ಎಂಬ ಚರ್ಚೆಗಳು ಶುರುವಾಗಿವೆ. ಚರ್ಚೆಗಳು ಈಗಲೂ ಮುಂದುವರಿದಿವೆ.