ಲಂಡನ್/ನವದೆಹಲಿ: ಭಾರತವು ಹೊಸ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿಯೊಬ್ಬರೂ ಸಡಗರದಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಆಗಲಿದೆ. ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇರುವ ಕಾರಣ ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ನರೇಂದ್ರ ಮೋದಿ (Narendra Modi) ಅವರು ಹ್ಯಾಟ್ರಿಕ್ ಸಾಧನೆ ಮೇಲೆ ಕಣ್ಣಿಟ್ಟಿದ್ದಾರೆ. ಪ್ರತಿಪಕ್ಷಗಳು ಕೂಡ ಗೆಲುವಿಗಾಗಿ ಇಂಡಿಯಾ ಒಕ್ಕೂಟ (INDIA Bloc) ರಚಿಸಿವೆ. ಇದರ ಬೆನ್ನಲ್ಲೇ, “ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುವುದು ನಿಶ್ಚಿತ” ಎಂದು ಬ್ರಿಟನ್‌ನ ಖ್ಯಾತ ಪತ್ರಿಕೆಯೊಂದು ಲೇಖನ ಪ್ರಕಟಿಸಿದೆ.
ಹೌದು ಬ್ರಿಟನ್‌ನ ದಿ ಗಾರ್ಡಿಯನ್ ಪತ್ರಿಕೆಯಲ್ಲಿ ಹನ್ನಾಹ್ ಎಲಿಸ್ ಪೀಟರ್‌ಸನ್ ಎಂಬುವರು ಬರೆದ ಲೇಖನದಲ್ಲಿ ನರೇಂದ್ರ ಮೋದಿ ಅವರ ಗೆಲುವಿನ ಕುರಿತು ಪ್ರಸ್ತಾಪಿಸಿದ್ದಾರೆ. “ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ಇದು ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನುಕೂಲವಾಗಲಿದೆ. ನರೇಂದ್ರ ಮೋದಿ ಅವರಂತೂ ಹ್ಯಾಟ್ರಿಕ್ ಗೆಲುವು ಸಾಧಿಸುವುದು ನಿಶ್ಚಿತ” ಎಂದು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಇಂಡಿಯಾ ಒಕ್ಕೂಟದ ಕುರಿತೂ ಪ್ರಸ್ತಾಪ
ಶತಾಯ ಗತಾಯ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಸೇರಿ ಇಂಡಿಯಾ ಎಂಬ ಒಕ್ಕೂಟವನ್ನು ರಚಿಸಿರುವ ಕುರಿತು ಕೂಡ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. “ಇಂಡಿಯಾ ಒಕ್ಕೂಟದ ಪಕ್ಷಗಳು ಎಲ್ಲ ಆಂತರಿಕ ಬಿಕ್ಕಟ್ಟುಗಳನ್ನು ಶಮನ ಮಾಡಿಕೊಳ್ಳಬೇಕು. ಹಾಗೆಯೇ, ಅವರು ಇನ್ನಷ್ಟು ಒಗ್ಗೂಡಬೇಕು. ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ಸ್ಪರ್ಧಿಸಿದರೆ ಮಾತ್ರ ಬಿಜೆಪಿಗೆ ಸವಾಲು ಒಡ್ಡಲು ಸಾಧ್ಯವಾಗುತ್ತದೆ. ಇಷ್ಟಾದರೂ, ಬಿಜೆಪಿಯ ಗೆಲುವನ್ನು ತಡೆಯಲು ಸಾಧ್ಯವಿಲ್ಲ. ಎಷ್ಟು ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬುದೇ ಕುತೂಹಲ” ಎಂದು ಹನ್ನಾಹ್ ಎಲಿಸ್ ಪೀಟರ್‌ಸನ್ ಅವರು ಲೇಖನ ಬರೆದಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಮಹಿಳೆಯೊಬ್ಬರ ಮನೆಗೆ ತೆರಳಿ ಟೀ ಕುಡಿದ ಮೋದಿ; ಯಾರಿವರು ಮೀರಾ ಮಾಂಝಿ?
“ನರೇಂದ್ರ ಮೋದಿ ಅವರು ಅಪಾರ ಜನಪ್ರಿಯತೆ ಹೊಂದಿರುವ ಜತೆಗೆ ಬಲಿಷ್ಠ ನಾಯಕರಾಗಿದ್ದಾರೆ. ಅವರು ಉತ್ತಮ ಆಡಳಿತದ ಜತೆಗೆ ಹಿಂದು ರಾಷ್ಟ್ರೀಯವಾದದಿಂದ ಅವರು ಉತ್ತರ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಜನಬೆಂಬಲ ಹೊಂದಿದ್ದಾರೆ. ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ದೇಶದಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸುವ ಜತೆಗೆ ಬಿಜೆಪಿ ವರ್ಚಸ್ಸನ್ನೂ ಹೆಚ್ಚಿಸಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ. ಕೆಲವೇ ತಿಂಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಹಲವು ಸಮೀಕ್ಷೆಗಳ ಪ್ರಕಾರ ಮೋದಿ ಅವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ