Site icon Vistara News

PM Modi US Visit: ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದ ಯೋಗ ಕಾರ್ಯಕ್ರಮ ಗಿನ್ನಿಸ್‌ ದಾಖಲೆಗೆ ಭಾಜನ

Yoga Day Event At UN Creates Guinness World Record

ನ್ಯೂಯಾರ್ಕ್‌: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಮೋದಿ ನೇತೃತ್ವದಲ್ಲಿ (PM Modi US Visit) ನಡೆದ ಯೋಗ ಕಾರ್ಯಕ್ರಮವು ಹಲವು ದಾಖಲೆಗಳಿಗೆ ಪಾತ್ರವಾಗಿದೆ. ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ನೇತೃತ್ವ ವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದರ ಬೆನ್ನಲ್ಲೇ, ವಿಶ್ವಸಂಸ್ಥೆ ಯೋಗ ಕಾರ್ಯಕ್ರಮವು ಗಿನ್ನಿಸ್‌ ದಾಖಲೆ ಬರೆದಿದೆ. ಆ ಮೂಲಕ ಸಾಲು ಸಾಲು ದಾಖಲೆಗಳಿಗೆ ಯೋಗ ಕಾರ್ಯಕ್ರಮ ಸಾಕ್ಷಿಯಾಗಿದೆ.

ಹೌದು, ಯೋಗ ಕಾರ್ಯಕ್ರಮವೊಂದರಲ್ಲಿ ಅತಿ ಹೆಚ್ಚು ದೇಶಗಳ ಜನ ಭಾಗಿಯಾಗಿರುವುದು ಈಗ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ. 180ಕ್ಕೂ ಅಧಿಕ ದೇಶಗಳ ಜನರು ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವು ಗಿನ್ನಿಸ್‌ ದಾಖಲೆ ಬರೆದಿದೆ ಎಂದು ತಿಳಿದುಬಂದಿದೆ. ಇದೇ ವೇಳೆ, ಗಿನ್ನಿಸ್‌ ದಾಖಲೆ ಕುರಿತ ಪ್ರಮಾಣಪತ್ರವನ್ನೂ ವಿತರಿಸಲಾಯಿತು.

ಯೋಗದ ಮಹತ್ವ ಸಾರಿದ ಮೋದಿ

ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ ಮಹತ್ವ ಸಾರಿದ್ದಾರೆ. “ಯೋಗ ಎಂದರೆ ಬರೀ ವ್ಯಾಯಾಮ ಪದ್ಧತಿ ಅಲ್ಲ, ಅದೊಂದು ಜೀವನ ವಿಧಾನ. ಯೋಗವು ಜನರನ್ನು ಒಗ್ಗೂಡಿಸುವ ಜತೆಗೆ ಆರೋಗ್ಯವಾಗಿಡುವಂತೆ ಮಾಡುತ್ತದೆ” ಎಂದು ಹೇಳಿದರು.

“ಯೋಗವು ಆರೋಗ್ಯದ ಗುಟ್ಟಾಗಿದ್ದು, ಯೋಗವು ಎಲ್ಲರಿಗೂ ಮುಕ್ತವಾಗದೆ. ಯೋಗಕ್ಕೆ ಯಾವುದೇ ಪೇಟೆಂಟ್‌ ಇಲ್ಲ. ಯೋಗವನ್ನು ಯಾರು ಬೇಕಾದರೂ ಮಾಡಬಹುದು. ಇದರಿಂದ ದೇಹವು ಆರೋಗ್ಯದಿಂದ ಇರುವ ಜತೆಗೆ ಮನಸ್ಸು ಯಾವಾಗಲೂ ಉಲ್ಲಾಸದಿಂದ ಇರುತ್ತದೆ. ಹಾಗಾಗಿ, ಯೋಗ ಎಂದರೆ ಒಗ್ಗಟ್ಟು, ಯೋಗ ಎಂದರೆ ಜೀವನ ಶೈಲಿ, ಯೋಗ ಎಂದರೆ ಆರೋಗ್ಯ, ಯೋಗ ಎಂದರೆ ಶಾಂತಿ” ಎಂದು ಯೋಗದ ಮಹತ್ವ ಸಾರಿದರು.

ಇದನ್ನೂ ಓದಿ: PM Modi US Visit: ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದಲ್ಲಿ ಯೋಗ; ಇತಿಹಾಸ ಬರೆದ ದೇಶದ ಪ್ರಧಾನಿ

Exit mobile version