ನವದೆಹಲಿ: ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ (Ram Mandir) ನಡೆದ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಘೋಷಿಸಿದ ಮೊದಲ ಯೋಜನೆ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನ (PM Suryodaya Yojana). ಸೌರಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಯೋಜನೆ ಇದಾಗಿದ್ದು, 1 ಕೋಟಿ ಮನೆಗಳಿಗೆ ಲಾಭ ದೊರೆಯಲಿದೆ. ಈ ಯೋಜನೆಯ ಮೂಲಕ ದೇಶಾದ್ಯಂತ ಒಂದು ಕೋಟಿ ಮನೆಗಳ ಚಾವಣಿಯಲ್ಲಿ ಸೌರ ವಿದ್ಯುತ್ ಫಲಕ ಅಳವಡಿಸುವ ಗುರಿ ಹೊಂದಲಾಗಿದ್ದು, ಅನುಷ್ಠಾನಕ್ಕೆ ಅನುಕೂಲವಾಗುವಂತೆ ಹಲವು ರಾಜ್ಯಗಳು ಸಬ್ಸಿಡಿಗಳನ್ನು ನೀಡಲಿವೆ. ಇದು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲಿದೆ.
ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಚಾವಣಿ ಸೌರ ಫಲಕಗಳ ಅಳವಡಿಕೆ ಈಗಾಗಲೇ ಪ್ರಾರಂಭವಾಗಿದೆ. ಆದರೆ ಇದಕ್ಕೆ ಸಾರ್ವಜನಿಕರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಸಬ್ಸಿಡಿ ಎಷ್ಟು?
ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಡಿ ಕೇಂದ್ರ ಸರ್ಕಾರವು 3 ಕಿಲೋವ್ಯಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಸ್ಥಾಪಿಸಲು ಶೇ. 40ರಷ್ಟು ಸಬ್ಸಿಡಿಯನ್ನು ಒದಗಿಸುತ್ತಿದೆ. 10 ಕಿಲೋವ್ಯಾಟ್ ಮತ್ತು ಹೆಚ್ಚಿನ ಸಾಮರ್ಥ್ಯವನ್ನು ಆರಿಸಿಕೊಳ್ಳುವವರಿಗೆ ಶೇ. 20ರಷ್ಟು ರಿಯಾಯಿತಿ ದೊರೆಯಲಿದೆ.
ʼʼಮನೆಗಳಲ್ಲಿ 640 ಗಿಗಾವ್ಯಾಟ್‌ಗಿಂತ ಹೆಚ್ಚು ಸಾಮರ್ಥ್ಯದ ಸೌರ ಫಲಕಗಳನ್ನು ಸ್ಥಾಪಿಸಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಪ್ರಸ್ತುತ ಸುಮಾರು 7ರಿಂದ 8 ಲಕ್ಷ ಕುಟುಂಬಗಳು ಈಗಾಗಲೇ ಮೇಲ್ಛಾವಣಿ ಸೌರ ಫಲಕಗಳನ್ನು ಅಳವಡಿಸಿಕೊಂಡು ಸರ್ಕಾರದ ಸಬ್ಸಿಡಿಯ ಪ್ರಯೋಜನ ಪಡೆಯುತ್ತಿವೆʼʼ ಎಂದು ಇಂಧನ, ಪರಿಸರ ಮತ್ತು ನೀರಿನ ಮಂಡಳಿಯ ಹಿರಿಯ ಅಧಿಕಾರಿ ನೀರಜ್ ಕುಲದೀಪ್ ತಿಳಿಸಿದ್ದಾರೆ. ʼʼಭಾರತದಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸೌರ ಶಕ್ತಿಯ ಗರಿಷ್ಠ ಉಪಯೋಗ ಪಡೆದುಕೊಳ್ಳಬೇಕುʼʼ ಎಂದು ಅವರು ಕರೆ ನೀಡಿದ್ದಾರೆ. ʼʼಸೌರ ವಿದ್ಯುತ್ ಬಳಕೆ ಪರಿಸರಕ್ಕೆ ಪೂರಕ. ಅದನ್ನೂ ಮೀರಿ ರಾಜ್ಯಗಳ ವಿದ್ಯುತ್ ಸಬ್ಸಿಡಿಗಳನ್ನು ಉಳಿಸಲು ಇದು ಸಹಾಯ ಮಾಡುತ್ತದೆ. ವಿದ್ಯುತ್ ವಿತರಣಾ ಕಂಪೆನಿಗಳ ಆರ್ಥಿಕತೆಯನ್ನು ಸುಧಾರಿಸಲು ಕೊಡುಗೆ ನೀಡುತ್ತದೆʼʼ ಎಂದು ಅವರು ವಿವರಿಸಿದ್ದಾರೆ.
सूर्यवंशी भगवान श्री राम के आलोक से विश्व के सभी भक्तगण सदैव ऊर्जा प्राप्त करते हैं।
— Narendra Modi (@narendramodi) January 22, 2024
आज अयोध्या में प्राण-प्रतिष्ठा के शुभ अवसर पर मेरा ये संकल्प और प्रशस्त हुआ कि भारतवासियों के घर की छत पर उनका अपना सोलर रूफ टॉप सिस्टम हो।
अयोध्या से लौटने के बाद मैंने पहला निर्णय लिया है कि… pic.twitter.com/GAzFYP1bjV
ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆ ಆರಂಭಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 2022ರಿಂದ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಲಭ್ಯ. ಅರ್ಜಿ ಸಲ್ಲಿಸುವಾಗ ರಾಜ್ಯದ ಹೆಸರು, ವಿದ್ಯುತ್ ಬಿಲ್ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ವಿದ್ಯುತ್ ವಿತರಣಾ ಕಂಪನಿಯ ಹೆಸರು ಮುಂತಾದ ಅಗತ್ಯ ವಿವರಗಳನ್ನು ಒದಗಿಸಬೇಕಾಗುತ್ತದೆ. ವಾರ್ಷಿಕ ಆದಾಯ 1-1.5 ಲಕ್ಷ ರೂ.ಗಳನ್ನು ಮೀರದವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ಹೋಮ್ ಪೇಜ್ನ ಎಡ ಭಾಗದ ಮೇಲೆ ಕಾಣಿಸುವ APPLY ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿ.
- ಅಗತ್ಯ ಮಾಹಿತಿಗಳನ್ನು ತುಂಬಿ.
- ನಿಮ್ಮ ವಿದ್ಯುತ್ ಬಿಲ್ ಸಂಖ್ಯೆ ನಮೂದಿಸಿ.
- ಸೋಲಾರ್ ಪ್ಯಾನಲ್ ಮಾಹಿತಿ ನೀಡಿ.
- ನಿಮ್ಮ ಮನೆಯ ಚಾವಣಿಯ ಅಳತೆ ನೀಡಿ.
- ನಿಮ್ಮ ಚಾವಣಿಯ ಅನುಗುಣವಾಗಿ ಸೌರ ಫಲಕವನ್ನು ಆಯ್ಕೆ ಮಾಡಿ.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆ ಬಳಿಕ ಮೋದಿ ಘೋಷಿಸಿದ ಯೋಜನೆಯಿಂದ 1 ಕೋಟಿ ಮನೆಗಳಿಗೆ ಲಾಭ!