ನವದೆಹಲಿ: ಶೀಘ್ರದಲ್ಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (Pakistan-occupied Kashmir – POK) ಭಾರತದೊಂದಿಗೆ (India) ವಿಲೀನಗೊಳಿಸಲಾಗುವುದು ಭಾರತೀಯ ಸೇನಾ ಮಾಜಿ ಮುಖ್ಯಸ್ಥರೂ ಆಗಿರುವ ಕೇಂದ್ರ ಸಚಿವ ವಿ ಕೆ ಸಿಂಗ್ (Union Minister VK Singh) ಅವರು ಹೇಳಿದ್ದಾರೆ. ಭಾರತದ ಗಡಿ ಪ್ರವೇಶಕ್ಕೆ ಶಿಯಾ ಮುಸ್ಲಿಮರು ಕಾರ್ಗಿಲ್ ಮೂಲಕ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆಯ ಕುರಿತು ಪ್ರತಿಕ್ರಿಯಿಸುವಾಗ ಕೇಂದ್ರ ಸಚಿವರು, ಈ ಕ್ಲೇಮ್ ಮಾಡಿದ್ದಾರೆ.
ಸ್ವಲ್ಪ ದಿನ ಕಾಯಿರಿ. ಪಾಕ್ ಆಕ್ರಮಿತ ಕಾಶ್ಮೀರವೂ ತಾನಾಗಿಯೇ ಭಾರತದೊಂದಿಗೆ ವಿಲೀನವಾಗಲಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ಮುಂದಿನ ನಡೆಯ ಬಗ್ಗೆ ಸುಳಿವು ಬಿಟ್ಟುಕೊಟ್ಟರು. ರಾಜಸ್ಥಾನದ ದೌಸಾ ಎಂಬಲ್ಲಿ ಭಾರತೀಯ ಜನತಾ ಪಾರ್ಟಿಯ ಪರಿವರ್ತನ್ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯವನ್ನು ತಿಳಿಸಿದರು.
#WATCH | Dausa, Rajasthan | "PoK will merge with India on its own, wait for some time," says Union Minister Gen VK Singh (Retd.) when asked that people in PoK have demanded that they be merged with India. (11.09.2023) pic.twitter.com/xG2qy7hXEm
— ANI (@ANI) September 12, 2023
ಕಳೆದ ಮೂರು ವರ್ಷಗಳಿಂದ ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯು ಚೀನಾದ ಸೈನಿಕರೊಂದಿಗೆ ತೊಡಗಿಸಿಕೊಂಡಿರುವ ಕಾರಣ ಈ ಬೆಳವಣಿಗೆ ನಡೆದಿದೆ. ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದ ಅಕ್ಸಾಯ್ ಚಿನ್ ಪ್ರದೇಶವನ್ನು ಒಳಗೊಂಡಂತೆ ಇತ್ತೀಚೆಗೆ ಚೀನಾ ತನ್ನ ಹೊಸ “ಸ್ಟ್ಯಾಂಡರ್ಡ್ ಮ್ಯಾಪ್” ಅನ್ನು ಬಿಡುಗಡೆ ಮಾಡಿತ್ತು. ಭಾರತ ಮತ್ತು ದಕ್ಷಿಣ ಏಷ್ಯಾದ ಹಲವಾರು ಇತರ ದೇಶಗಳು ನಕ್ಷೆಯ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ದಾಖಲಿಸಿವೆ. ಭಾರತದಲ್ಲಿ ವ್ಯಾಪಕ ವಿರೋಧ ಕೂಡ ವ್ಯಕ್ತವಾಗಿತ್ತು.
ಪಿಒಕೆ ಭಾರತದೊಂದಿಗೆ ಸೇರಬೇಕು ಎಂಬ ಬೇಡಿಕೆ ದೇಶದಲ್ಲೂ ಸಾಕಷ್ಟು ದಿನಗಳಿಂದಲೂ ಇದೆ. ಪಾಕ್ ಆಕ್ರಮಿತ ಕಾಶ್ಮೀರದ ಈ ಪ್ರದೇಶದಲ್ಲಿ ಜನಜೀವನ ಮಟ್ಟ ಸುಧಾರಿಸಿಲ್ಲ. ಪಾಕಿಸ್ತಾನ ಸರ್ಕಾರವು ಅಲ್ಲಿನ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಜನರು ಆಗಾಗ ತಮ್ಮನ್ನು ಭಾರತದೊಂದಿಗೆ ಸೇರಿಸಿ ಎಂದು ಬೇಡಿಕೆಯನ್ನು ಇಡುತ್ತಾರೆ. ಈ ಮಧ್ಯೆ, ದೇಶದೊಳಗಿನಿಂದಲೂ ಬೇಡಿಕೆ ತೀವ್ರವಾಗಿದೆ. ನಮ್ಮದೇ ಭೂಭಾಗದ ಮೇಲೆ ಪಾಕ್ ಅತಿಕ್ರಮವಾಗಿ ಕಬ್ಜ ಮಾಡಿಕೊಂಡಿದೆ. ಅದನ್ನು ಭಾರತದ ಜತೆಗೆ ಸೇರಿಸಬೇಕು ಎಂಬ ಕೂಗು ಇದ್ದೇ ಇದೆ. ಈ ಹಿನ್ನೆಲೆಯಲ್ಲಿ ಈಗ ವಿ ಕೆ ಸಿಂಗ್ ಅವರ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.
ಈ ಸುದ್ದಿಯನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 15 ಪಿಎಎಫ್ಎಫ್ ಉಗ್ರರನ್ನು ಕೊಂದ ಭಾರತೀಯ ಸೇನೆ
ಏನಿದು ಪಾಕ್ ಆಕ್ರಮಿತ ಕಾಶ್ಮೀರ?
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಎಂದು ಕರೆಯಲ್ಪಡುವ ಪ್ರದೇಶವನ್ನು ಎರಡು ಪ್ರದೇಶಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ ಆಜಾದ್ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್. ಪಾಕಿಸ್ತಾನದ ಒಟ್ಟು ಜನಸಂಖ್ಯೆಯು ಸರಿಸುಮಾರು 4.5 ಮಿಲಿಯನ್ ಆಗಿದೆ. ಈ ಜನಸಂಖ್ಯೆಯಲ್ಲಿ, ಸರಿಸುಮಾರು 97% ಮುಸ್ಲಿಮರು, ಉಳಿದ 3% ಹಿಂದೂಗಳು ಮತ್ತು ಕ್ರಿಶ್ಚಿಯನ್ನರಂತಹ ವಿವಿಧ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುತ್ತಾರೆ.