Site icon Vistara News

The Kerala Story | ಕೇರಳ ಉಗ್ರರ ಸ್ವರ್ಗ: ದಿ ಕೇರಳ ಸ್ಟೋರಿ ಚಿತ್ರ ತಂಡದ ವಿರುದ್ಧ ಕೇಸ್!

The Kerala Story

ತಿರುವನಂತಪುರಂ: ಕಳೆದ ತಿಂಗಳು ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರದ ಟೀಸರ್ ವಿವಾದಕ್ಕೆ ಕಾರಣವಾಗಿದೆ. ಚಿತ್ರದ ತಂತ್ರಜ್ಞರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ತಿರುವನಂತಪುರಂ ಪೊಲೀಸ್ ಕಮಿಷನರ್ ಸ್ಪರ್ಜನ್ ಕುಮಾರ್ ಅವರು ಆದೇಶಿಸಿದ್ದಾರೆ. ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ‘ಕೇರಳವನ್ನು ಉಗ್ರರ ಸ್ವರ್ಗ’ ಎಂಬಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಒಂದು ದಶಕದಲ್ಲಿ ಕೇರಳದ 32 ಸಾವಿರ ಹೆಣ್ಣು ಮಕ್ಕಳನ್ನು ಇಸ್ಲಾಮ್‌ಗೆ ಮತಾಂತರ ಮಾಡಿ, ಅವರನ್ನು ಐಸಿಸ್ ಪ್ರಭಾವ ಇರುವ ಅಫಘಾನಿಸ್ತಾನ ಮತ್ತು ಸಿರಿಯಾಗಳಿಗೆ ರವಾನಿಸಿ, ಉಗ್ರರನ್ನಾಗಿ ಮಾಡಲಾಗುತ್ತಿದೆ ಎಂದು ಟೀಸರ್‌ನಲ್ಲಿ ಹೇಳಲಾಗಿದೆ. ಈ ಸಂಗತಿಯೇ ಈಗ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶನ ಮಾಡಿದ್ದಾರೆ ಮತ್ತು ವಿ ಎ ಶಾ ನಿರ್ಮಾಪಕರಾಗಿದ್ದಾರೆ.

ಎರಡು ದಿನಗಳ ಹಿಂದೆ ತಮಿಳುನಾಡು ಮೂಲದ ಪತ್ರಕರ್ತ ಬಿ ಆರ್ ಅರವಿಂದಕ್ಷಣ್ ಅವರು ಕೇಂದ್ರ ಸಿನಿಮಾ ಸೆನ್ಸಾರ್ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ ಅವರಿಗೆ ಪತ್ರ ಬರೆದು, ಚಿತ್ರದ ತಯಾರಿಕರು ತಾವು ಹೇಳಿಕೊಂಡಿರುವುದಕ್ಕೆ(ಕೇರಳ ಉಗ್ರರ ಸ್ವರ್ಗ) ಪೂರಕ ಸಾಕ್ಷ್ಯಗಳನ್ನು ಒದಗಿಸುವ ತನಕ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದಾರೆ. ಇದೇ ಪತ್ರದ ಪ್ರತಿಗಳನ್ನು ಅವರು ಕೇರಳ ಮುಖ್ಯಮಂತ್ರಿ ಸಿಎಂ ಪಿಣರಾಯಿ ವಿಜಯನ್ ಕಳುಹಿಸಿದ್ದರು. ನಂತರ, ಈ ಪ್ರತಿಯನ್ನು ಸಿಎಂ ಅವರು ಡಿಜಿಪಿ ಅವರಿಗೂ ಕಳುಹಿಸಿದ್ದರು.

ನಾನು ಕೇರಳ ಸಿಎಂ ಮತ್ತು ಡಿಜಿಪಿ ಅವರಿಗೂ ಪತ್ರವನ್ನು ಮೇಲ್ ಮಾಡಿದ್ದು, ದಿ ಕೇರಳ ಸ್ಟೋರಿ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಅವರನ್ನು ಕರೆಯಿಸಿ, ಟೀಸರ್‌ನಲ್ಲಿ ಹೇಳಲಾದ ಸಂಗತಿಗಳ ಬಗ್ಗೆ ತನಿಖೆ ಮಾಡುವಂತೆ ಕೋರಿದ್ದೇನೆ ಎಂದು ಪತ್ರಕರ್ತ ಅರವಿಂದಕ್ಷಣ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ದೂರಿನ ಹಿನ್ನೆಲೆಯಲ್ಲಿ ಕೇರಳ ಪೊಲೀಸರು, ದಿ ಕೇರಳ ಸ್ಟೋರಿ ಚಿತ್ರದ ಟೀಸರ್ ಸಂಪೂರ್ಣವಾಗಿ ವೀಕ್ಷಿಸಿ, ಪರಿಶೀಲಿಸಿದ್ದಾರೆ. ಸಮುದಾಯಗಳ ಮಧ್ಯೆ ದ್ವೇಷ ಭಾವನೆ ಬಿತ್ತುವ ಉದ್ದೇಶ ಸ್ಪಷ್ಟವಾಗಿದೆ. ಚಿತ್ರದಲ್ಲಿ ಮಾಡಲಾಗಿರುವ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲದಿರುವುದು ಖಾತ್ರಿಯಾಗಿದೆ. ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಚಿತ್ರವು ಉತ್ತರ ಕೇರಳದಿಂದ ಕಾಣೆಯಾದ ನಾಲ್ವರು ಮಹಿಳೆಯರನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ಗಂಡಂದಿರ ಸಾವಿನ ನಂತರ ಅವರು ಅಫಘಾನಿಸ್ತಾನ ಜೈಲಿನಲ್ಲಿರುವುದನ್ನು ಪತ್ತೆ ಹಚ್ಚಲಾಯಿತು. ಆದರೆ, ಎರಡು ವರ್ಷಗಳ ಹಿಂದೆ ಅವರನ್ನು ಮತ್ತೆ ದೇಶಕ್ಕೆ ಕರೆಯಿಸಿಕೊಳ್ಳಲು ವಿದೇಶಾಂಗ ಸಚಿವಾಲಯವು ನಿರಾಕರಿಸಿತು.

ಇದನ್ನೂ ಓದಿ | Adipurush Film | ಆದಿಪುರುಷ್‌ ಚಿತ್ರತಂಡದ ಐವರ ವಿರುದ್ಧ ಕೇಸ್: ಅ. 27ರಂದು ವಿಚಾರಣೆ

Exit mobile version