ಕೋಲ್ಕತ್ತ: ದೇಶದಲ್ಲಿ 10 ವರ್ಷಗಳ ನಂತರ ಪೋಲಿಯೋ ವೈರಸ್ ಪತ್ತೆಯಾಗಿದೆ. ಪೋಲಿಯೋ ವೈರಸ್‌ನ ಹೊಸ ತಳಿ ಕೋಲ್ಕತ್ತದಲ್ಲಿ ಪತ್ತೆಯಾಗಿರುವುದರಿಂದ ಪಶ್ಚಿಮ ಬಂಗಾಳದ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಮಕ್ಕಳ ಮೇಲೆ ನಿಗಾ ಇಡಲು ಎಚ್ಚರಿಕೆ ನೀಡಲಾಗಿದೆ.
2011ರಲ್ಲಿ ಕೊನೆಯ ಬಾರಿಗೆ ದೇಶದಲ್ಲಿ ಪೋಲಿಯೋ ಪ್ರಕರಣ ದಾಖಲಾಗಿತ್ತು. ಪಶ್ಚಿಮ ಬಂಗಾಳದ ಹೌರಾದಲ್ಲಿ 12 ವರ್ಷದ ಬಾಲಕಿಗೆ ಪೋಲಿಯೋ ಸೋಂಕು ತಗುಲಿತ್ತು. ಬಳಿಕ 2014ರ ಮಾರ್ಚ್ 27 ರಂದು ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ದೇಶವಾಗಿ ಘೋಷಿಸಿತ್ತು. ಇದೀಗ ಹತ್ತು ವರ್ಷಗಳ ನಂತರ ಕೋಲ್ಕತ್ತದ ಮಿಟಿಯಾಬುರುಜ್ ಪ್ರದೇಶದ ಕೊಳಚೆ ನೀರಿನಲ್ಲಿ ವೈರಸ್ ಪತ್ತೆಯಾಗಿದೆ.
10 ವರ್ಷಗಳ ನಂತರ ಆರೋಗ್ಯ ಇಲಾಖೆ ಪೋಲಿಯೋ ವೈರಸ್ ಪತ್ತೆಗೆ ಹೆಚ್ಚಿನ ಒತ್ತು ನೀಡಿದೆ. ಹೀಗಾಗಿ ಯುನಿಸೆಫ್ ಸಹಯೋಗದಲ್ಲಿ ಆರೋಗ್ಯ ಇಲಾಖೆಯಿಂದ ನಡೆಸಿರುವ ಸಂಶೋಧನೆಯಲ್ಲಿ ಕೊಳಚೆ ನೀರಿನಲ್ಲಿ ವೈರಸ್ ಪತ್ತೆಯಾಗಿದೆ. ಇಂತಹ ಆರೋಗ್ಯ ಸಮೀಕ್ಷೆಗಳನ್ನು ಆಗಾಗ ಕೊಳಚೆ ಪ್ರದೇಶಗಳಲ್ಲಿ ನಡೆಸಲಾಗುತ್ತಿರುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೈರಸ್ ಪತ್ತೆಯಾಗಿರುವ ಪ್ರದೇಶದಲ್ಲಿ, ಸಾರ್ವಜನಿಕರು ಬಯಲು ಬಹಿರ್ದೆಸೆ ಮಾಡಬಾರದು ಹಾಗೂ ನೈರ್ಮಲ್ಯ ಕಾಪಾಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಮೇಲೆ ನಿಗಾ ಇಡಬೇಕು. ಅಂತಹ ಮಕ್ಕಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಬೇಕು ಎಂದು ಸೂಚಿಸಿರುವ ಆರೋಗ್ಯ ಇಲಾಖೆ, ಕೊರೊನಾ ಹಿನ್ನೆಲೆಯಲ್ಲಿ ಕಡಿಮೆಯಾಗಿರುವ ಪೋಲಿಯೋ ಲಸಿಕಾ ಅಭಿಯಾನಕ್ಕೆ ವೇಗ ನೀಡಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ | ದೇಶದಲ್ಲಿ ಮತ್ತೆ ಕೊರೊನಾರ್ಭಟ, ಒಂದೇ ದಿನ ಹೊಸದಾಗಿ 8,822 ಕೊರೊನಾ ಪ್ರಕರಣ ಪತ್ತೆ