ನವದೆಹಲಿ: ಕೇಂದ್ರ ಚುನಾವಣೆ ಆಯೋಗವು ತ್ರಿವಳಿ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Elections 2023) ದಿನಾಂಕ ನಿಗದಿಪಡಿಸಿದೆ. ಈಶಾನ್ಯ ಭಾರತದ ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16, ನಾಗಾಲ್ಯಾಂಡ್ ಹಾಗೂ ಮೇಘಾಲಯ ವಿಧಾನಸಭೆಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ಮಾರ್ಚ್ 2ರಂದು ಮೂರೂ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.
ಹಾಗಾದರೆ, ಲೋಕಸಭೆ ಚುನಾವಣೆ ದೃಷ್ಟಿಯಿಂದ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವ ಮೂರೂ ರಾಜ್ಯಗಳ ರಾಜಕೀಯ ಪರಿಸ್ಥಿತಿ ಹೇಗಿದೆ? ಯಾವ ಪಕ್ಷ ಆಡಳಿತದಲ್ಲಿದೆ? ಯಾವ ಪಕ್ಷಗಳ ಮಧ್ಯೆ ತೀವ್ರ ಸ್ಪರ್ಧೆ ಇದೆ? ಒಟ್ಟು ಸ್ಥಾನಗಳು ಎಷ್ಟು? ಮ್ಯಾಜಿಕ್ ನಂಬರ್ ಯಾವುದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ತ್ರಿಪುರದಲ್ಲಿ ಬಿಜೆಪಿ ಪ್ರಾಬಲ್ಯ
ಪ್ರಮುಖ ಈಶಾನ್ಯ ರಾಜ್ಯವಾಗಿರುವ ತ್ರಿಪುರದಲ್ಲಿ ೨೦೨೩ರ ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಸದ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಮಾಣಿಕ್ ಸಾಹಾ ಮುಖ್ಯಮಂತ್ರಿಯಾಗಿದ್ದಾರೆ. ಒಟ್ಟು ೬೦ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಇಲ್ಲಿ ಆಡಳಿತಾರೂಢ ಬಿಜೆಪಿಗೆ ಸಿಪಿಎಂ ಒಳಗೊಂಡ ಎರಡರಂಗವು ಪ್ರಬಲ ಸ್ಪರ್ಧಿಯಾಗಿದೆ. ತ್ರಿಪುರದಲ್ಲಿ ಕಾಂಗ್ರೆಸ್ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಿದೆ.
2018ರ ಚುನಾವಣೆ ಫಲಿತಾಂಶ
ಬಿಜೆಪಿ 36
ಐಪಿಎಫ್‌ಟಿ 8
ಎಡರಂಗ 16
ಒಟ್ಟು ಸ್ಥಾನ 60
ಮ್ಯಾಜಿಕ್ ನಂಬರ್ 31
ನಾಗಾಲ್ಯಾಂಡ್‌ನಲ್ಲಿ ಎನ್‌ಡಿಎ ಮೈತ್ರಿಗೆ ಮತ್ತೆ ಗೆಲುವು?
ಈಶಾನ್ಯದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ ಇದೆ. ಅದರಂತೆ, ನಾಗಾಲ್ಯಾಂಡ್‌ನಲ್ಲಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಕ್ಷ (NDPP)ದ ನೆಫಿಯು ರಿಯೋ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಡಿಪಿಪಿ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ವೈ. ಪ್ಯಾಟ್ಟೊನ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಎನ್‌ಡಿಪಿ ಹಾಗೂ ಬಿಜೆಪಿ ಜತೆಗೂಡಿ ಸ್ಪರ್ಧಿಸಲು ತೀರ್ಮಾನಿಸಿವೆ.
2018ರ ಚುನಾವಣೆ ಫಲಿತಾಂಶ
ಬಿಜೆಪಿ 12
ಎನ್‌ಡಿಪಿಪಿ 18
ಎನ್‌ಪಿಎಫ್ 26
ಇತರೆ 4
ಒಟ್ಟು ಸ್ಥಾನ 60
ಮ್ಯಾಜಿಕ್ ನಂಬರ್ 31
ಮೇಘಾಲಯದಲ್ಲಿ ಕಾಂಗ್ರೆಸ್ ಗೆಲ್ಲುವುದೇ?
ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಬಿಜೆಪಿಯು ಆಡಳಿತಾರೂಢ ಮೈತ್ರಿ (ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್) ಪಕ್ಷದ ಸದಸ್ಯವಾದರೂ ಇಲ್ಲಿ ಪ್ರಾಬಲ್ಯವಿಲ್ಲ. ನ್ಯಾಷನಲ್ ಪೀಪಲ್ಸ್ ಪಕ್ಷದ ಕಾನ್ರಾಡ್ ಸಂಗ್ಮಾ ಅವರು ಮುಖ್ಯಮಂತ್ರಿಯಾಗಿದ್ದು, ೨೦೨೩ರಲ್ಲೂ ಗೆಲುವು ಸಾಧಿಸುವ ವಿಶ್ವಾಸವಿದೆ. ಕಾಂಗ್ರೆಸ್‌ನ 12 ಶಾಸಕರು ಟಿಎಂಸಿ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ.
2018ರ ಚುನಾವಣೆ ಫಲಿತಾಂಶ
ಬಿಜೆಪಿ 2
ಎನ್‌ಪಿಪಿ 19
ಕಾಂಗ್ರೆಸ್ 21
ಇತರೆ 18
ಒಟ್ಟು ಸ್ಥಾನ 60
ಮ್ಯಾಜಿಕ್ ನಂಬರ್ 31
ಇದನ್ನೂ ಓದಿ | Election Commission | ಫೆಬ್ರವರಿ 16 ತ್ರಿಪುರಾ, ಫೆ.27ಕ್ಕೆ ನಾಗಾಲ್ಯಾಂಡ್, ಮೇಘಾಲಯ ಎಲೆಕ್ಷನ್, ಮಾರ್ಚ್ 2ರಂದು ರಿಸಲ್ಟ್