Site icon Vistara News

Pooja Khedkar: ಎಂಬಿಬಿಎಸ್ ಪ್ರವೇಶಕ್ಕೆ ಒಬಿಸಿ ಕೆನೆಪದರ ರಹಿತ ಪ್ರಮಾಣಪತ್ರ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್

Pooja Khedkar

Pooja Khedkar

ಮುಂಬೈ: ಅಧಿಕಾರ ದುರುಪಯೋಗದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ (Pooja Khedkar) ಕುರಿತಾದ ವಿವಾದ ಒಂದೊಂದಾಗಿ ಹೊರ ಬೀಳುತ್ತಿದೆ. ಅವರು ಎಂಬಿಬಿಎಸ್‌ ಪ್ರವೇಶಕ್ಕಾಗಿ ಸುಳ್ಳು ದಾಖಲೆಗಳನ್ನು ಹಾಜರುಪಡಿಸಿರುವುದು ಸದ್ಯ ಬೆಳಕಿಗೆ ಬಂದಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಪುಣೆಯ ಶ್ರೀಮತಿ ಕಾಶಿಬಾಯಿ ನವಲೆ ವೈದ್ಯಕೀಯ ಕಾಲೇಜು ಮತ್ತು ಜನರಲ್ ಆಸ್ಪತ್ರೆಯ ನಿರ್ದೇಶಕ ಅರವಿಂದ್ ಭೋರೆ ಅವರು ಹೇಳಿಕೆ ನೀಡಿ, ಪೂಜಾ ಖೇಡ್ಕರ್ 2007ರಲ್ಲಿ ಅಲೆಮಾರಿ ಬುಡಕಟ್ಟು -3 ವಿಭಾಗದ ಅಡಿಯಲ್ಲಿ ಕೆನೆಪದರವಲ್ಲದ ಒಬಿಸಿ ಪ್ರಮಾಣಪತ್ರವನ್ನು ಬಳಸಿಕೊಂಡು ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಪೂಜಾ ಖೇಡ್ಕರ್ ಅವರು ಅಸೋಸಿಯೇಷನ್ ಆಫ್ ಮ್ಯಾನೇಜ್‌ಮೆಂಟ್‌ ಆಫ್ ಅನ್‌ಆ್ಯಡೆಡ್‌ ಪ್ರವೇಟ್‌ ಮೆಡಿಕಲ್‌ & ಡೆಂಟಲ್‌ ಕಾಲೇಜಸ್‌ ಆಫ್‌ ಮಹಾರಾಷ್ಟ್ರ (AMUPMDC) ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆದಿದ್ದರು. ಆಗ ಅವರು 200ರಲ್ಲಿ 146 ಅಂಕಗಳನ್ನು ಗಳಿಸಿದ್ದರು ಎಂದು ಭೋರೆ ತಿಳಿಸಿದ್ದಾರೆ.

ಪೂಜಾ ಅವರ ದಿಲೀಪ್ ಖೇಡ್ಕರ್ ಸುಮಾರು 40 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಹೀಗಾಗಿ ಅವರು ಅದು ಹೇಗೆ ಯುಪಿಎಸ್‌ಸಿಗೆ ಕೆನೆಪದರವಲ್ಲದ ಒಬಿಸಿ ಪ್ರಮಾಣಪತ್ರ ಹಾಜರುಪಡಿಸಿದ್ದಾರೆ ಎಂಬ ಪ್ರಶ್ನೆ ಎದ್ದಿದೆ.

ಪೂಜಾ ಖೇಡ್ಕರ್ ಅವರಿಗೆ ನೀಡಲಾದ ಕೆನೆಪದರವಲ್ಲದ ಒಬಿಸಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಾಜರುಪಡಿಸಲು ಪಥರ್ಡಿ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಅಹ್ಮದ್ ನಗರದ ಜಿಲ್ಲಾಧಿಕಾರಿ ಎಸ್.ಸಾಲಿಮಠ್ ತಿಳಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಅಹ್ಮದ್ ನಗರದಿಂದ ಸ್ಪರ್ಧಿಸಿದ್ದ ಪೂಜಾ ಅವರ ತಂದೆ ದಿಲೀಪ್ ಖೇಡ್ಕರ್ ತಮ್ಮ ಅಫಿಡವಿಟ್‌ನಲ್ಲಿ ತಮ್ಮ ಮತ್ತು ಪತ್ನಿಯ ಆಸ್ತಿ ಮೌಲ್ಯ 58 ಕೋಟಿ ರೂ. ಎಂದು ಘೋಷಿಸಿದ್ದರು. ಇನ್ನು ಪೂಜಾ 22 ಕೋಟಿ ರೂ.ಗಳ ಆಸ್ತಿ ಮತ್ತು ವಾರ್ಷಿಕ ಆದಾಯ 43 ಲಕ್ಷ ರೂ. ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಒಬಿಸಿಯ ಕೆನೆಪದರ ರಹಿತರ ಆದಾಯ ಮಿತಿ ವರ್ಷಕ್ಕೆ 8 ಲಕ್ಷ ರೂ. ಹೀಗಾಗಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ʼʼಪುಣೆ ಮೂಲದ ವೈದ್ಯಕೀಯ ಕಾಲೇಜಿನ ಪ್ರವೇಶದ ಸಮಯದಲ್ಲಿ ಪೂಜಾ ಮೊದಲ ಬಾರಿಗೆ ಕೆನೆಪದರ ಪ್ರಮಾಣಪತ್ರವನ್ನು ಬಳಸಿದ್ದರು. ಈ ವಿಚಾರವಾಗಿ ಇಲ್ಲಿಯವರೆಗೆ ಯಾರೂ ಸಂಪರ್ಕಿಸಿಲ್ಲ. ಆದಾಗ್ಯೂ, ನಡೆಯುತ್ತಿರುವ ತನಿಖೆಯನ್ನು ಪರಿಗಣಿಸಿ, ನಾವು ವಿವರಗಳನ್ನು ಸಂಗ್ರಹಿಸಿಟ್ಟಿದ್ದೇವೆ” ಎಂದು ಸಾಲಿಮಠ್ ತಿಳಿಸಿದ್ದಾರೆ. ಐಎಎಸ್‌ನಲ್ಲಿ ಸ್ಥಾನ ಪಡೆಯಲು ಅಂಗವೈಕಲ್ಯ ಮತ್ತು ಒಬಿಸಿ ಕೋಟಾವನ್ನು ದುರುಪಯೋಗಪಡಿಸಿಕೊಂಡಿರುವ ಪೂಜಾ ಅವರ ವಿವರಗಳನ್ನು ಪರಿಶೀಲಿಸಲು ಕೇಂದ್ರವು ಕಳೆದ ಏಕ ಸದಸ್ಯ ಸಮಿತಿಯನ್ನು ರಚಿಸಿತ್ತು.

ಇದನ್ನೂ ಓದಿ: Pooja Khedkar: ಯಾರು ಈ ಪೂಜಾ ಖೇಡ್ಕರ್? ವಿಐಪಿ ದರ್ಬಾರ್ ನಡೆಸಿ ಸಿಕ್ಕಿಹಾಕಿಕೊಂಡ ಐಎಎಸ್ ಅಧಿಕಾರಿ!

“ಕೆನೆಪದರ ರಹಿತ ಪ್ರಮಾಣಪತ್ರಗಳನ್ನು ನೀಡುವಾಗ, ಸ್ವಯಂ ಘೋಷಣೆ ಆದಾಯ ನಮೂನೆಯನ್ನು ಗ್ರಾಮ ತಲಾಥಿಯಿಂದ ಪರಿಶೀಲನೆ ನಡೆಸಬೇಕು. ನಿಜವಾದ ಆದಾಯ ಮತ್ತು ಕೆನೆಪದರ ಪ್ರಮಾಣಪತ್ರದಲ್ಲಿ ವ್ಯತ್ಯಾಸವಿದ್ದರೆ ಸಂಬಂಧಪಟ್ಟ ತಲಾಥಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೂಜಾ ನಕಲಿ ಅಂಗವೈಕಲ್ಯ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವುದೂ ವಿವಾದಕ್ಕೆ ಕಾರಣವಾಗಿದೆ. ಕೆನೆಪದರ ಪರಿಕಲ್ಪನೆಯನ್ನು ಒಬಿಸಿಯ ಶ್ರೀಮಂತ ಮತ್ತು ಸುಶಿಕ್ಷಿತ ವರ್ಗವನ್ನು ಸೂಚಿಸಲು ಬಳಸಲಾಗುತ್ತಿದೆ.

Exit mobile version