Site icon Vistara News

Porsche Crash: 2 ಕಾರು, 4 ನಗರ, 1 ಸಿಮ್‌ ಕಾರ್ಡ್;‌ ಮಗ ಕಾರು ಗುದ್ದಿದ ಬಳಿಕ ಅಪ್ಪನ ಪ್ಲಾನ್‌ ಏನು? ಇಲ್ಲಿದೆ ಭೀಕರ ಮಾಹಿತಿ

Porsche Crash

Porsche Crash: 2 cars, 4 cities, new SIM card: How Pune teen driver's father tried to evade Police

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ 17 ವರ್ಷದ ಬಾಲಕನು ಮದ್ಯಪಾನ ಮಾಡಿ ಪೋರ್ಶೆ ಕಾರು ಚಲಾಯಿಸಿ, ಅಪಘಾತದಲ್ಲಿ (Porsche Crash) ಇಬ್ಬರ ಸಾವಿಗೆ ಕಾರಣವಾದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಅಪ್ರಾಪ್ತನ ಕೈಗೆ ಕಾರು ಕೊಟ್ಟ ಹಿನ್ನೆಲೆಯಲ್ಲಿ 17 ವರ್ಷದ ಬಾಲಕನ ತಂದೆ ವಿಶಾಲ್‌ ಅಗರ್ವಾಲ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ, ಅಪಘಾತದ ಬಳಿಕ (Pune Accident) ಪೊಲೀಸರಿಂದ ರಕ್ಷಿಸಿಕೊಳ್ಳಲು ವಿಶಾಲ್‌ ಅಗರ್ವಾಲ್‌ (Vishal Agarwal) ಯಾವ ರೀತಿ ಪ್ಲಾನ್‌ ಮಾಡಿದ್ದರು ಎಂಬುದರ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಪುಣೆಯಲ್ಲಿ ಮಗನು ಬೈಕ್‌ಗೆ ಕಾರು ಗುದ್ದಿಸಿ, ಇಬ್ಬರ ಸಾವಿಗೆ ಕಾರಣವಾದ ಪ್ರಕರಣ ಸುದ್ದಿಯಾಗುತ್ತಲೇ ಉದ್ಯಮಿ ವಿಶಾಲ್‌ ಅಗರ್ವಾಲ್‌ ತಲೆಮರೆಸಿಕೊಂಡರು. ಮೊದಲು ಪುಣೆಯ ತಮ್ಮ ನಿವಾಸಕ್ಕೆ ತೆರಳಿದ ಅವರು, ಅಲ್ಲಿಂದ ಡೌಂಡ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ಹೋದರು. ಅಲ್ಲಿಂದ, ಕೊಲ್ಹಾಪುರಕ್ಕೆ ಪರಾರಿಯಾದ ಅವರು ಅಲ್ಲಿ ಗೆಳೆಯನನ್ನು ಭೇಟಿಯಾದರು. ಅಲ್ಲಿ, ಪೊಲೀಸರಿಂದ ಪರಾರಿಯಾಗಲು ಮತ್ತೊಂದು ಯೋಜನೆ ರೂಪಿಸಿದರು ಎಂದು ತಿಳಿದುಬಂದಿದೆ.

ಅಪಘಾತದ ಭೀಕರ ವಿಡಿಯೊ

ಪೊಲೀಸರನ್ನು ದಾರಿ ತಪ್ಪಿಸಲು ಪ್ಲಾನ್‌ ಮಾಡಿದ ವಿಶಾಲ್‌ ಅಗರ್ವಾಲ್‌, ತಮ್ಮ ಕಾರು ಚಾಲಕನಿಗೆ ವಾಹನ ಕೊಟ್ಟು, ಆತನನ್ನು ಮುಂಬೈಗೆ ಕಳುಹಿಸಿದರು. ಇನ್ನು ಗೆಳೆಯನ ಕಾರಿನಲ್ಲಿ ವಿಶಾಲ್‌ ಅಗರ್ವಾಲ್‌ ಸಂಭಾಜಿನಗರಕ್ಕೆ ತೆರಳಿದರು. ಇದರ ಮಧ್ಯೆಯೇ, ಒಂದು ಸಿಮ್‌ ಕಾರ್ಡ್‌ ಬದಲಿಸಿದ ಅವರು, ಕುಟುಂಬಸ್ಥರಿಗೆ ಕರೆ ಮಾಡಿ, ಮುಂಬೈಗೆ ಬರುತ್ತಿದ್ದೇನೆ ಎಂಬುದಾಗಿ ಸುಳ್ಳು ಹೇಳಿದ್ದಾರೆ. ಕುಟುಂಬಸ್ಥರನ್ನು ಪೊಲೀಸರು ವಿಚಾರಣೆ ನಡೆಸಿದರೂ ಸಿಗಬಾರದು ಎಂಬುದು ಅಗರ್ವಾಲ್‌ ಪ್ಲಾನ್‌ ಆಗಿತ್ತು ಎನ್ನಲಾಗಿದೆ.

ಚಾಣಾಕ್ಷತನ ಮೆರೆದ ಪೊಲೀಸರು

ವಿಶಾಲ್‌ ಅಗರ್ವಾಲ್‌ ಇಷ್ಟೆಲ್ಲ ಯೋಜನೆ ರೂಪಿಸಿದರೂ ಪುಣೆ ಕ್ರೈಂ ಬ್ರ್ಯಾಂಚ್‌ ಪೊಲೀಸರು ಸಂಭಾಜಿನಗರದಲ್ಲಿ ವಿಶಾಲ್‌ ಅಗರ್ವಾಲ್‌ ಅವರನ್ನು ಬಂಧಿಸಿದರು. ಸಿಸಿಟಿವಿ ಕ್ಯಾಮೆರಾ ಹಾಗೂ ವಿಶಾಲ್‌ ಅಗರ್ವಾಲ್‌ ಗೆಳೆಯನ ಕಾರಿನ ಜಿಪಿಎಸ್‌ ಟ್ರ್ಯಾಕ್‌ ಮಾಡಿ, ಕೊನೆಗೂ ಅವರನ್ನು ಬಂಧಿಸಿದ್ದಾರೆ. ಸಂಭಾಜಿ ನಗರದ ಲಾಡ್ಜ್‌ನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ವಿಶಾಲ್‌ ಅಗರ್ವಾಲ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ.

ಇದನ್ನೂ ಓದಿ: ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತನ ತಂದೆಯನ್ನು ಬಂಧಿಸಿದ ಪೊಲೀಸರು; ಬಾರ್‌ ಮಾಲೀಕನ ವಿರುದ್ಧವೂ ಕ್ರಮ

Exit mobile version