Site icon Vistara News

Porsche Crash: ಇಬ್ಬರ ಸಾವಿಗೆ ಕಾರಣವಾದ 17 ವರ್ಷದ ಬಾಲಕನಿಗೆ ಪೋರ್ಶೆ ಕಾರು ಸಿಕ್ಕಿದ್ದು ʼಬರ್ತ್‌ಡೇ ಗಿಫ್ಟ್‌ʼ!

Porsche car accident ವಿಸ್ತಾರ ಸಂಪಾದಕೀಯ

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ 17 ವರ್ಷದ ಬಾಲಕನು ಮದ್ಯಪಾನ ಮಾಡಿ ಪೋರ್ಶೆ ಕಾರು ಚಲಾಯಿಸಿ, ಅಪಘಾತದಲ್ಲಿ (Porsche Crash) ಇಬ್ಬರ ಸಾವಿಗೆ ಕಾರಣವಾದ ಪ್ರಕರಣವು (Pune Car Accident) ದೇಶಾದ್ಯಂತ ಸುದ್ದಿಯಾಗಿದೆ. ಅಪ್ರಾಪ್ತನ ಕೈಗೆ ಕಾರು ಕೊಟ್ಟ ಹಿನ್ನೆಲೆಯಲ್ಲಿ 17 ವರ್ಷದ ಬಾಲಕನ ತಂದೆ ವಿಶಾಲ್‌ ಅಗರ್ವಾಲ್‌ ಹಾಗೂ ಅವರ ತಾತ ಸುರೇಂದ್ರ ಅಗರ್ವಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ, ಬಾಲಕನು ಚಲಾಯಿಸಿದ ಪೋರ್ಶೆ ಕಾರನ್ನು (Porsche) ಆತನ ತಾತನು ಬರ್ತ್‌ಡೇ ಗಿಫ್ಟ್‌ ಆಗಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ.

ಮೇ 19ರಂದು ಪುಣೆಯಲ್ಲಿ ಅಪಘಾತ ಸಂಭವಿಸಿದೆ. ಕಲ್ಯಾಣಿ ನಗರದಲ್ಲಿ ಕುಡಿದು ವೇಗವಾಗಿ ಕಾರು ಚಲಾಯಿಸಿದ ಕಾರಣ ಮಧ್ಯಪ್ರದೇಶದ ಅಶ್ವಿನಿ ಕೋಷ್ಟ ಹಾಗೂ ಅನೀಶ್‌ ಅವಾಧಿಯಾ ಎಂಬ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದಾರೆ. ವಿಶಾಲ್‌ ಅಗರ್ವಾಲ್‌ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದು, ಅವರು ಪ್ರಭಾವ ಬೀರಲು ಯತ್ನಿಸಿದ್ದರು. ಅಪಘಾತಕ್ಕೆ ಕಾರಣವಾದ 17 ವರ್ಷದ ಬಾಲಕನಿಗೆ ಪೊಲೀಸ್‌ ಠಾಣೆಯಲ್ಲಿ ಪಿಜ್ಜಾ ಕೂಡ ಪೂರೈಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಶ್ರೀಮಂತ ಕುಟುಂಬದ 17 ವರ್ಷದ ಬಾಲಕನಿಗೆ ಆತನ ತಾತನು ಹುಟ್ಟುಹಬ್ಬದ ಉಡುಗೊರೆಯಾಗಿ ಪೋರ್ಶೆ ಟೇಕ್ಯಾನ್‌ (ಸುಮಾರು 2 ಕೋಟಿ ರೂ.) ಕಾರು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ.

“ಬಾಲಕನ ಜನ್ಮದಿನದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಆತನ ತಾತನು ಐಷಾರಾಮಿ ಕಾರಿನ ಫೊಟೊವನ್ನು ವಾಟ್ಸ್ಆ್ಯಪ್‌ನಲ್ಲಿ ಶೇರ್‌ ಮಾಡಿದ್ದರು” ಎಂಬುದಾಗಿ ಬಾಲಕನ ಸ್ನೇಹಿತನು ಹೇಳಿದ್ದಾನೆ ಎಂಬುದಾಗಿ ವರದಿಗಳು ತಿಳಿಸಿವೆ. ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡಿ, ಅದಕ್ಕಾಗಿ 45 ಸಾವಿರ ರೂ. ಬಿಲ್‌ ಪಾವತಿಸಿ, ಅತಿಯಾದ ವೇಗದಲ್ಲಿ ಕಾರು ಚಲಾಯಿಸಿದ ಕಾರಣ ಅಪಘಾತ ಸಂಭವಿಸಿದೆ. ಕಾರು ಓಡಿಸಿದ ವೇಗ ನೋಡಿದರೆ ಭಯ ಹುಟ್ಟಿಸುವಂತಿದೆ. ಇದಾದ ಬಳಿಕ ಅಪಘಾತದ ಹೊಣೆಯನ್ನು ನೀನೇ ಹೊತ್ತುಕೊ ಎಂಬುದಾಗಿ ವಾಹನ ಚಾಲಕನಿಗೆ ಬಾಲಕನ ತಂದೆ ಒತ್ತಡ ಹೇರಿದ್ದರು ಎಂದು ತಿಳಿದುಬಂದಿದೆ.

ಪುಣೆಯಲ್ಲಿ ಮಗನು ಬೈಕ್‌ಗೆ ಕಾರು ಗುದ್ದಿಸಿ, ಇಬ್ಬರ ಸಾವಿಗೆ ಕಾರಣವಾದ ಪ್ರಕರಣ ಸುದ್ದಿಯಾಗುತ್ತಲೇ ಉದ್ಯಮಿ ವಿಶಾಲ್‌ ಅಗರ್ವಾಲ್‌ ತಲೆಮರೆಸಿಕೊಂಡಿದ್ದರು. ಮೊದಲು ಪುಣೆಯ ತಮ್ಮ ನಿವಾಸಕ್ಕೆ ತೆರಳಿದ್ದ ಅವರು, ಅಲ್ಲಿಂದ ಡೌಂಡ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ಹೋದರು. ಅಲ್ಲಿಂದ, ಕೊಲ್ಹಾಪುರಕ್ಕೆ ಪರಾರಿಯಾದ ಅವರು ಅಲ್ಲಿ ಗೆಳೆಯನನ್ನು ಭೇಟಿಯಾದರು. ಅಲ್ಲಿ, ಪೊಲೀಸರಿಂದ ಪರಾರಿಯಾಗಲು ಮತ್ತೊಂದು ಯೋಜನೆ ರೂಪಿಸಿದರು ಎಂದು ತಿಳಿದುಬಂದಿದೆ.

ವಿಶಾಲ್‌ ಅಗರ್ವಾಲ್‌ ಇಷ್ಟೆಲ್ಲ ಯೋಜನೆ ರೂಪಿಸಿದರೂ ಪುಣೆ ಕ್ರೈಂ ಬ್ರ್ಯಾಂಚ್‌ ಪೊಲೀಸರು ಸಂಭಾಜಿನಗರದಲ್ಲಿ ವಿಶಾಲ್‌ ಅಗರ್ವಾಲ್‌ ಅವರನ್ನು ಬಂಧಿಸಿದರು. ಸಿಸಿಟಿವಿ ಕ್ಯಾಮೆರಾ ಹಾಗೂ ವಿಶಾಲ್‌ ಅಗರ್ವಾಲ್‌ ಗೆಳೆಯನ ಕಾರಿನ ಜಿಪಿಎಸ್‌ ಟ್ರ್ಯಾಕ್‌ ಮಾಡಿ, ಕೊನೆಗೂ ಅವರನ್ನು ಬಂಧಿಸಿದ್ದಾರೆ. ಸಂಭಾಜಿ ನಗರದ ಲಾಡ್ಜ್‌ನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ವಿಶಾಲ್‌ ಅಗರ್ವಾಲ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ.

ಇದನ್ನೂ ಓದಿ: Porsche Crash: 2 ಕಾರು, 4 ನಗರ, 1 ಸಿಮ್‌ ಕಾರ್ಡ್;‌ ಮಗ ಕಾರು ಗುದ್ದಿದ ಬಳಿಕ ಅಪ್ಪನ ಪ್ಲಾನ್‌ ಏನು? ಇಲ್ಲಿದೆ ಭೀಕರ ಮಾಹಿತಿ

Exit mobile version