Site icon Vistara News

Postal Ballots: ಕೈ ಹಿಡಿದ ಅಂಚೆ ಮತಗಳು..ಕೊನೆಯ ಕ್ಷಣದಲ್ಲಿ ಸೋತು ಗೆದ್ದ ಅಭ್ಯರ್ಥಿಗಳಿವರು

Postal Ballets

ನವದೆಹೆಲಿ: ಚುನಾವಣೆ(Election Results 2024) ಅಂದರೆ ಹಾಗೇನೆ. ಸೋಲು ಗೆಲುವಿನ ಆಟ.. ಇನ್ನೇನು ಸೋತೇ ಬಿಟ್ಟೆವು ಅನ್ನೋವಾಗ ಗೆದ್ದವರೂ ಇದ್ದಾರೆ. ಗೆಲುವು ನಮ್ಮದೇ ಅಂತಾ ಬೀಗುತ್ತಿದ್ದವರು ಕೊನೆಯ ಕ್ಷಣದಲ್ಲಿ ಸೋತಿರುವ ನಿದರ್ಶನಗಳೂ ಇವೆ. ಹೀಗೆ ಕೊನೆಯ ಕ್ಷಣದಲ್ಲಿ ಗೆಲುವಿನ ನಗೆ ಬೀರಿವ ಇಬ್ಬರು ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ. ಮತಯಂತ್ರಗಳ ಮತ ಎಣಿಕೆಯಲ್ಲಿ ಸೋಲುಂಡಿದ್ದ ಈ ಇಬ್ಬರು ಅಂಚೆ ಮತಗಳ ಎಣಿಕೆ(Postal Ballots)ಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಶಿವಸೇನೆಯ ಶಿಂಧೆ ಬಣದ ರವೀಂದ್ರ ವೈಕಾರ್‌ ಮತ್ತು ಬಿಜೆಪಿ ರಬೀಂದ್ರ ನಾರಾಯಣ್‌ ಬೆಹೆರಾ ಅಂಚೆ ಮತಗಳ ಸಹಾಯದಿಂದ ಗೆಲುವು ಬೀರಿದ ಅಭ್ಯರ್ಥಿಗಳು. ಇವರಿಬ್ಬರೂ ಇವಿಎಂ ಮತಗಳ ಎಣಿಕೆಯಲ್ಲಿ ಸೋಲುಂಡಿದ್ದರು. ಬಳಿಕ ಅಂಚೆ ಮತಗಳ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದರು. ಇಡೀ ದೇಶದಲ್ಲಿಯೇ ಈ ಬಾರಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವವರು ಶಿವಸೇನಾ (ಶಿಂಧೆ ಬಣ) ಅಭ್ಯರ್ಥಿ ರವೀಂದ್ರ ವೈಕರ್. ಇವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಕೇವಲ 48 ಮತಗಳಿಂದ ಶಿವಸೇನಾ UBT ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ ಅವರನ್ನು ಸೋಲಿಸಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಅಂದರೆ 1989 ಮತ್ತು 1998 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅನಕಾಪಲ್ಲಿಯಿಂದ ಕೊನತ್ತಲ ರಾಮಕೃಷ್ಣ ಮತ್ತು ಬಿಹಾರದ ರಾಜಮಹಲ್‌ನಿಂದ ಸೋಮ್ ಮರಾಂಡಿ ಅವರು ಕ್ರಮವಾಗಿ ಒಂಬತ್ತು ಮತಗಳಿಂದ ಗೆಲ್ಲುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಅವರ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಮತಗಳ ಅಂತರದಿಂದ ರವೀಂದ್ರ ವೈಕರ್‌ ಗೆಲುವು ಸಾಧಿಸಿದ್ದಾರೆ. ಇನ್ನು ರಬೀಂದ್ರ ನಾರಾಯಣ್‌ ಬೆಹರಾ ಒಡಿಶಾದ ಜಾಜ್‌ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಅಂಚೆ ಮತಗಳು

ಅಂಚೆ ಮತಪತ್ರಗಳನ್ನು ಸಾಮಾನ್ಯವಾಗಿ ತಮ್ಮ ಕ್ಷೇತ್ರಗಳಿಂದ ದೂರದಲ್ಲಿರುವ ಸರ್ಕಾರಿ ನೌಕರರು, ಕೈದಿಗಳು ಮತ್ತು ಚುನಾವಣಾ ಕರ್ತವ್ಯದಲ್ಲಿರುವವರು ಮತದಾನಕ್ಕೆ ಬಳಸುತ್ತಾರೆ. 2019 ರ ಲೋಕಸಭೆ ಚುನಾವಣೆಯವರೆಗೆ, ಇವಿಎಂ ಎಣಿಕೆಗೆ 30 ನಿಮಿಷಗಳ ಮೊದಲು ಅಂಚೆ ಮತಗಳ ಎಣಿಕೆಯನ್ನು ಮಾಡಲಾಗುತ್ತಿತ್ತು. ಇವಿಎಂ ಎಣಿಕೆ ಪೂರ್ಣಗೊಳ್ಳುವ ಮೊದಲು ಎಲ್ಲಾ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಬೇಕಿತ್ತು.

ಆದರೆ 2019 ರ ಚುನಾವಣೆಯ ನಂತರ ಚುನಾವಣಾ ಆಯೋಗವು ಮಾರ್ಗಸೂಚಿಗಳನ್ನು ಬದಲಿಸಿದೆ. ಏಕೆಂದರೆ ವಿದ್ಯುನ್ಮಾನವಾಗಿ ರವಾನೆಯಾಗುವ ಅಂಚೆ ಮತಪತ್ರ ವ್ಯವಸ್ಥೆ (ಇಟಿಪಿಬಿಎಸ್) ಪರಿಚಯಿಸಿದ ನಂತರ ಅಂಚೆ ಮತಪತ್ರಗಳ ಸಂಖ್ಯೆ ಹೆಚ್ಚಾಯಿತು. ಅಂಚೆ ಮತಗಳ ಎಣಿಕೆ ಪೂರ್ಣಗೊಳ್ಳುವವರೆಗೆ ಇವಿಎಂ ಮತಗಳ ಎಣಿಗೆ ಶುರು ಮಾಡಲು ಕಾಯಬೇಕಿಲ್ಲ ಎಂದು ಮೇ 18, 2019 ರಂದು ಅದು ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

ಇನ್ನು ಇವಿಎಂ ಮತಗಳ ಎಣಿಕೆ ನಡೆಯುತ್ತಿರುವುದರಿಂದ ಆರಂಭದಲ್ಲೇ ಶಿವಸೇನೆಯ (ಯುಬಿಟಿ) ಕೀರ್ತಿಕರ್ ಮುನ್ನಡೆಯಲ್ಲಿದ್ದರು. ಆದರೆ ಮತ ಎಣಿಕೆ ಮುಂದುವರೆದಂತೆ ಮುನ್ನಡೆ ಕುಗ್ಗತೊಡಗಿತು. ಅಂತ್ಯದ ವೇಳೆಗೆ, ಕೇವಲ ಒಂದು ಮತದ ವ್ಯತ್ಯಾಸವಾಗಿತ್ತು – ಕೀರ್ತಿಕರ್ ವೈಕರ್ ಅವರ 4,51,094 ವಿರುದ್ಧ 4,51,095 ಮತಗಳನ್ನು ಪಡೆದರು. ನಂತರ ಅಂಚೆ ಮತಪತ್ರಗಳನ್ನು ಸೇರಿಸಲಾಯಿತು. ವೈಕರ್ ಅವರಿಗೆ 1,550 ಅಂಚೆ ಮತಪತ್ರಗಳನ್ನು ಹಾಕಿದ್ದರೆ, ಕೀರ್ತಿಕರ್ 1,501 ಅನ್ನು ಹೊಂದಿದ್ದರು ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ.

ಇದನ್ನೂ ಓದಿ:Praveen Nettaru Murder: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ವಿದೇಶಕ್ಕೆ ಪರಾರಿಯಾಗುತ್ತಿದ್ದಾಗಲೇ ಬಂಧನ

Exit mobile version