Site icon Vistara News

Prabha Atre: ಕಳಚಿತು ಶಾಸ್ತ್ರೀಯ ಸಂಗೀತದ ಮತ್ತೊಂದು ಕೊಂಡಿ; ಗಾಯಕಿ ಪ್ರಭಾ ಅತ್ರೆ ನಿಧನ

prabha atre

prabha atre

ಮುಂಬೈ: ಪದ್ಮ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ (Classical music) ಪ್ರಭಾ ಅತ್ರೆ (Prabha Atre) ಶನಿವಾರ (ಜನವರಿ 13) ಹೃದಯಾಘಾತದಿಂದ ಪುಣೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಮುಂಬೈಯಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಲು ತಯಾರಿ ನಡೆಸುತ್ತಿರುವ ವೇಳೆ ಹೃದಯಾಘಾತ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಸಂತಾಪ ಸೂಚಿಸಿದ ನಾಯಕರು

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿ, “ಭಾರತೀಯ ಸಂಗೀತವು ಯಾವಾಗಲೂ ಅವರಿಗೆ ಋಣಿಯಾಗಿದೆ. ನಾನು ಅವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸುತ್ತೇನೆ. ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ” ಎಂದು ಹೇಳಿದ್ದಾರೆ.

ಅಜಿತ್ ಪವಾರ್ ಕೂಡ ದುಃಖ ವ್ಯಕ್ತಪಡಿಸಿ, “ಪ್ರಭಾಜಿ ಅವರ ನಿಧನವು ಶಾಸ್ತ್ರೀಯ ಸಂಗೀತದ ಅದ್ಭುತ ಯುಗವೊಂದರ ಅಂತ್ಯವನ್ನು ಸೂಚಿಸುತ್ತದೆ. ಅವರ ನಿಧನವು ದೇಶದ ಸಂಗೀತ ಕ್ಷೇತ್ರ ಮತ್ತು ಕಲಾ ಕ್ಷೇತ್ರಕ್ಕೆ ದೊಡ್ಡ ನಷ್ಟʼʼ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏನಕಾಥ್ ಶಿಂಧೆ ಅವರು ಪ್ರಭಾ ಅವರ ಅಂತಿಮ ವಿಧಿಗಳನ್ನು ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸುವಂತೆ ಸೂಚಿಸಿದ್ದಾರೆ. ಪ್ರಭಾ ಅವರ ಕುಟುಂಬಸ್ಥರು ಪ್ರಸ್ತುತ ವಿದೇಶದಲ್ಲಿದ್ದು ಅವರು ದೇಶಕ್ಕೆ ಮರಳಿದ ನಂತರ ಮಂಗಳವಾರ ಪುಣೆಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಭಾ ಅತ್ರೆ ಹಿನ್ನೆಲೆ

ಪ್ರಭಾ ಅತ್ರೆ ಪುಣೆಯಲ್ಲಿ 1932ರ ಸೆಪ್ಟೆಂಬರ್‌ 13ರಂದು ಜನಿಸಿದರು. ಸುಮಧುರ ಕಂಠದಿಂದಲೇ ಪ್ರೇಕ್ಷಕರ ಗಮನ ಸೆಳೆದ ಅವರಿಗೆ 2022ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿತ್ತು. 1990ರಲ್ಲಿ ಪದ್ಮ ಶ್ರೀ ಮತ್ತು 2002ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಇವರನ್ನು ದೇಶ ಗೌರವಿಸಿತ್ತು. ಕಳೆದ ವರ್ಷದ ಡಿಸೆಂಬರ್‌ 25ರಂದು ದೇವೇಂದ್ರ ಫಡ್ನವೀಸ್ ಪ್ರಭಾ ಅವರಿಗೆ ಅಟಲ್‌ ಸಂಸ್ಕೃತಿ ಪ್ರಶಸ್ತಿ ಪ್ರದಾನ ಮಾಡಿದ್ದರು.

ಪ್ರಭಾ ಅವರು ಚಿಕ್ಕ ವಯಸ್ಸಿನಲ್ಲಿಯೇ ಸಂಗೀತಾಭ್ಯಾಸ ಆರಂಭಿಸಿದ್ದರು. ಅವರು ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ರಂಗ ನಟಿಯಾಗಿದ್ದರು. ಅವರು ಮರಾಠಿ ರಂಗಭೂಮಿಯ ಶ್ರೇಷ್ಠ ಸಂಗೀತ್ ನಾಟಕಗಳಾದ ʼಸಂಶಯ್-ಕಲ್ಲೋಲ್ʼ, ʼಮಾನಪಮಾನ್ʼ, ʼಸೌಭದ್ರಾʼ ಮತ್ತು ʼವಿದ್ಯಾಹರನ್‌ʼಗಳಲ್ಲಿ ಪಾತ್ರ ನಿರ್ವಹಿಸಿದ್ದರು.

ಭಾರತೀಯ ಶಾಸ್ತ್ರೀಯ ಗಾಯನವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಲ್ಲಿ ಅವರು ನೀಡಿದ ಕೊಡುಗೆ ಗಮನಾರ್ಹ. ಅದರಲ್ಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾಣಾ ಘರಾನಾ ಪ್ರಕಾರವನ್ನು ಎಲ್ಲೆಡೆ ಪಸರಿಸಿದ್ದರು. ಅಲ್ಲದೆ ಖಯಾಲ್, ತುಮ್ರಿ, ದಾದ್ರಾ, ಗಜಲ್, ಗೀತ್, ನಾಟ್ಯ ಸಂಗೀತ ಮುಂತಾದ ವಿವಿಧ ಸಂಗೀತ ಪ್ರಕಾರಗಳಲ್ಲಿಯೂ ಅವರು ಮೇಲುಗೈ ಸಾಧಿಸಿದ್ದರು. ವಿಜ್ಞಾನ ಮತ್ತು ಕಾನೂನು ಪದವೀಧರರಾಗಿದ್ದ ಅವರು ಸಂಗೀತದಲ್ಲಿ ಡಾಕ್ಟರೇಟ್ ಪಡೆದಿದ್ದರು. ಇವರ ನಿಧನದೊಂದಿಗೆ ಭಾರತೀಯ ಶಾಸ್ತ್ರೀಯ ಸಂಗೀತವು ಒಂದು ವಾರದಲ್ಲಿ ಇಬ್ಬರು ಶ್ರೇಷ್ಠ ಗಾಯಕರನ್ನು ಕಳೆದುಕೊಂಡಂತಾಗಿದೆ. ಉಸ್ತಾದ್ ರಶೀದ್ ಖಾನ್ ಮಂಗಳವಾರ (ಜನವರಿ 9) ಕೋಲ್ಕತ್ತಾದಲ್ಲಿ ನಿಧನ ಹೊಂದಿದ್ದರು.

Exit mobile version