ನವದೆಹಲಿ: ನಟನೆಗಿಂತ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಈಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ಜಮ್ಮು-ಕಾಶ್ಮೀರವನ್ನು (Jammu Kashmir) ಪ್ಯಾಲೆಸ್ತೀನ್ (Palestine) ಸಮರಪೀಡಿತ ಪರಿಸ್ಥಿತಿಗೆ ಹೋಲಿಸುವ ಮೂಲಕ ಪ್ರಕಾಶ್ ರಾಜ್ ಅವರು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರಾಜ್ ಅವರ ಹೇಳಿಕೆಯ ವಿಡಿಯೊ ವೈರಲ್ (Viral Video) ಆಗುತ್ತಲೇ, ಜನ ಟೀಕಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ರಾಜ್, “ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನ್ಯಾಯಕ್ಕೆ ಸಂಬಂಧಿಸಿವೆ. ನೀವು ಯಾರದ್ದೋ ಪರವಾಗಿ ನಿಲ್ಲಬೇಕಿಲ್ಲ. ಯಾವುದೋ ಒಂದು ಕಡೆ ಬೆಂಬಲ ಸೂಚಿಸುವುದು ಸಮಂಜಸವಲ್ಲ. ಪ್ಯಾಲೆಸ್ತೀನಿಯರಿಗೆ ಅವರ ನೆಲವನ್ನು ಕೊಟ್ಟುಬಿಡಿ. ಅವರಿಗೆ ಸಲ್ಲಬೇಕಾದ ಗೌರವ, ಘನತೆಯನ್ನು ಕೊಟ್ಟು ಬಿಡಿ” ಎಂದು ಹೇಳಿದ್ದಾರೆ. ಆ ಮೂಲಕ ಪ್ಯಾಲೆಸ್ತೀನ್‌ನಲ್ಲಿರುವ ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ ಮಾಡಿದ್ದನ್ನು ಪರೋಕ್ಷವಾಗಿ ಖಂಡಿಸಿದ್ದಾರೆ.
Prakash Raj compares Palestine with Kashmir- Says give them their land pic.twitter.com/d28WIaf0pC
— Megh Updates 🚨™ (@MeghUpdates) February 18, 2024
ಇದೇ ವೇಳೆ ಅವರು ಕಾಶ್ಮೀರವನ್ನು ಪ್ರಸ್ತಾಪಿಸಿದರು. “ನಾವು ಜಮ್ಮು-ಕಾಶ್ಮೀರದ ಮೇಲೆ ಹಿಡಿತ ಸಾಧಿಸಲು, ಅದರ ದೊಡ್ಡಣ್ಣನಾಗಿ ಆಡಳಿತ ನಡೆಸಲು ಯತ್ನಿಸಿದೆವು. ಆದರೆ, ಇದುವರೆಗೂ ಕಾಶ್ಮೀರದ ಮೇಲೆ ಪ್ರಾಬಲ್ಯ ಸಾಧಿಸಲು ಆಗಿಲ್ಲ. ನಾವು ಯಾವಾಗಲೂ ತೀರ್ಪು ಕೊಡುವವರ ರೀತಿಯೇ ವರ್ತಿಸುತ್ತಿದ್ದೇವೆ” ಎಂದು ಹೇಳುವ ಮೂಲಕ ಕಾಶ್ಮೀರವನ್ನು ಪ್ಯಾಲೆಸ್ತೀನ್‌ಗೆ ಹೋಲಿಸಿದ್ದಾರೆ.
ನೂತನ ಸಂಸತ್ ಭವನದ ಉದ್ಘಾಟನೆ ವೇಳೆ ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಹಿಂದು ಸಂತರ ಜತೆ ತೆಗೆಸಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದ್ದ ಪ್ರಕಾಶ್ ರಾಜ್, “ಪ್ರೀತಿಯ ಪ್ರಜೆಗಳೇ… ಇದು ಭವಿಷ್ಯದ ಸಂಸತ್ತು. ತನಾತನಿ (ಸನಾತನಿ) ಸಂಸತ್ತು. ನಿಮಗಿದು ಒಪ್ಪಿಗೆಯೇ?” ಎಂದು ಪ್ರಶ್ನಿಸಿದ್ದರು. ಪ್ರಕಾಶ್ ರಾಜ್ ವರ್ತನೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Prakash Raj: ಕಾಪು ಮಾರಿಯಮ್ಮನ ದರ್ಶನ ಪಡೆದ ಪ್ರಕಾಶ್ ರಾಜ್; ʻಗೋ ಮೂತ್ರ ಸಿಂಪಡಿಸಿʼ ಅಂದ್ರು ನೆಟ್ಟಿಗರು!
ಅಷ್ಟೇ ಅಲ್ಲ, ಇಸ್ರೋದ ಚಂದ್ರಯಾನ 3 ಮಿಷನ್ ಕಳುಹಿಸಿದ ಫೋಟೊ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ಅವರನ್ನು ಅಣಕ ಮಾಡಲು ಪ್ರಕಾಶ್ ರಾಜ್ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (X) ಫೋಟೊ ಹಂಚಿಕೊಂಡ ಕಾರಣ ಜನ ಅವರಿಗೆ ಟೀಕೆಗಳ ಮೂಲಕ ಚಳಿ ಬಿಡಿಸಿದ್ದರು. ಪ್ರಕಾಶ್ ರಾಜ್ ವಿರುದ್ಧ ಪ್ರಕರಣವೂ ದಾಖಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ