Site icon Vistara News

Pralhad Joshi: ಉಚಿತ ಅಕ್ಕಿ ವಿತರಣೆಯ ಪಿಎಂ ಗರೀಬ್ ಕಲ್ಯಾಣ್‌ ಅನ್ನ ಯೋಜನೆ 2029ರ ವರೆಗೆ ವಿಸ್ತರಣೆ: ಪ್ರಲ್ಹಾದ ಜೋಶಿ

Pralhad Joshi

ನವದೆಹಲಿ: ಕೇಂದ್ರ ಸರ್ಕಾರ ಉಚಿತ ಅಕ್ಕಿ ವಿತರಣೆಯ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM Garib Kalyan Anna Yojana)ಯನ್ನು 2029ರವರೆಗೂ ವಿಸ್ತರಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (Pralhad Joshi) ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ದೇಶದಲ್ಲಿ 80 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರ ದೊರಕಿದ್ದು, ಈ ಯೋಜನೆಯನ್ನು 2029ರವರೆಗೂ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ. ಎನ್ಎಎಫ್ಇಡಿ, ಎನ್ ಸಿಸಿಎಫ್ ಹಾಗೂ ಕೇಂದ್ರೀಯ ಭಂಡಾರಗಳಲ್ಲಿ ಭಾರತ್ ಅಕ್ಕಿ ಕೆಜಿಗೆ 29 ರೂ. ಬೆಲೆಯಲ್ಲಿ 5 ಮತ್ತು 10 ಕೇಜಿ ಚೀಲಗಳಲ್ಲಿ ದೊರೆಯುತ್ತಿದೆ ಎಂದಿದ್ದಾರೆ.

ಅತಿ ಅಗ್ಗದ ಬೆಲೆಗೆ ಗೋಧಿ ಹಿಟ್ಟು

ಇನ್ನು ಭಾರತ್ ಆಟ್ಟಾ ಉಪಕ್ರಮದಲ್ಲಿ ಅತಿ ಅಗ್ಗದ ಬೆಲೆ 27.5 ರೂ. ಕೆಜಿಗೆ ಗೋಧಿ ಹಿಟ್ಟು ಪೂರೈಸಲಾಗುತ್ತಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ. ಭಾರತ್ ದಾಲ್ ಉಪಕ್ರಮದಡಿಯಲ್ಲಿ ಕಡಲೆ ಮತ್ತು ಹೆಸರುಬೇಳೆ ಕಡಿಮೆ ದರದಲ್ಲಿ ದೊರೆಯುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಮಯೋಚಿತ ಉಪಕ್ರಮಗಳಿಂದಾಗಿ ದೇಶದ ಹಣದುಬ್ಬರ ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತೆ ಆಗಿದೆ ಎಂದು ಅವರು ಹೇಳಿದ್ದಾರೆ.

2019-20ರಲ್ಲಿ ಕೋವಿಡ್‌ ಸೋಂಕು ತೀವ್ರ ಪ್ರಮಾಣದಲ್ಲಿ ಆವರಿಸಿದಾಗ ದೇಶಾದ್ಯಂತ ಗರೀಬ್‌ ಕಲ್ಯಾಣ ಅನ್ನ ಯೋಜನೆಯನ್ನು ಘೋಷಿಸಲಾಗಿತ್ತು. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಬಡತನ ರೇಖೆಗಿಂದ ಕೆಳಗಿರುವ ಜನರಿಗೆ ಉಚಿತ ಆಹಾರ ಧಾನ್ಯ ನೀಡಲು ಈ ಯೋಜನೆ ರೂಪಿಸಲಾಗಿತ್ತು. ಅಂದಿನಿಂದ ಕುಟುಂಬದ ಪ್ರತಿ ಸದಸ್ಯರಿಗೆ ತಲಾ ಐದು ಕೆಜಿ ಪಡಿತರವನ್ನು ಉಚಿತವಾಗಿ ನೀಡಲಾಗುತ್ತಿದೆ.

ಇದನ್ನೂ ಓದಿ: Bharat Dal : 60 ರೂ.ಗೆ ಮೋದಿಯ ಭಾರತ್​ ದಾಲ್​; ಖರೀದಿ ಮಾಡುವುದು ಹೇಗೆ?

ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ಮೊದಲ ಸಚಿವ ಸಂಪುಟ ಸಭೆಯಲ್ಲೇ ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದರು. ಪ್ರಧಾನಮಂತ್ರಿ ಆವಾಸ್‌ ಯೋಜನೆ (Pradhan Mantri Awas Yojana-PMAY) ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಇದೀಗ ಅನ್ನ ಯೋಜನೆ ಮುಂದುವರಿಸುವ ಮೂಲಕ ಕೇಂದ್ರ ಸರ್ಕಾರ ಬಡವರ ನೆರವಿಗೆ ಧಾವಿಸಿದೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಸ್ವಂತ ಮನೆ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್‌ ಯೋಜನೆ ಜಾರಿಗೆ ತಂದಿದೆ. ಯೋಜನೆ ಅಡಿಯಲ್ಲಿ ಫಲಾನುಭವಿಗಳು ಬಯಲು ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು 1.20 ಲಕ್ಷ ರೂ. ನೀಡಲಾಗುತ್ತದೆ. ಇನ್ನು ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು 1.30 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸುಮಾರು 4.21 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ.

Exit mobile version