Site icon Vistara News

Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

Prashant Kishor

Prashant Kishor

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ಫಲಿತಾಂಶದ ಬಗ್ಗೆ ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಚುನಾವಣೆ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ (Prashant Kishor) ಅವರು ಇದೀಗ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರ ಮೂವನೆ ಅವಧಿ ಆಡಳಿತದ ಬಗ್ಗೆ ಮಾತನಾಡಿದ್ದಾರೆ. ಮೂರನೇ ಅವಧಿಯ ಮೋದಿ ಸರ್ಕಾರದಲ್ಲಿ ಒಟ್ಟು ನಾಲ್ಕು ಬದಲಾವಣೆಗಳಾಗಲಿವೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಗದ್ದುಗೆ ಏರುವುದು ಖಚಿತ. ಆದರೆ ಮೂರನೇ ಬಾರಿಯ ಆಡಳಿತದಲ್ಲಿ ಕನಿಷ್ಠ ನಾಲ್ಕು ಬದಲಾವಣೆಗಳನ್ನೂ ಪ್ರಧಾನಿ ಮೋದಿ ತಂದೇ ತರುತ್ತಾರೆ. ಭ್ರಷ್ಟಾಚಾರ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡುವ ಮೋದಿ ಸರ್ಕಾರ, ರಚನಾತ್ಮಕ ಮತ್ತು ಕಾರ್ಯಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ಹೇಳಿದ್ದಾರೆ.

ನನ್ನ ಊಹೆಯ ಪ್ರಕಾರ ಪ್ರಧಾನಿ ಮೋದಿ ನೇತೃತ್ವದ 3.0 ಸರ್ಕಾರ ಬಹಳಷ್ಟು ಸದ್ದು ಮಾಡಲಿದೆ. ಕೇಂದ್ರದಲ್ಲಿ ಅಧಿಕಾರ ಮತ್ತು ಸಂಪನ್ಮೂಲ ಎರಡಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತದೆ. ರಾಜ್ಯಗಳ ಆರ್ಥಿಕ ಸ್ವಾವಲಂಬನೆಯನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತಂದರೂ ಅಚ್ಚರಿ ಇಲ್ಲ ಎಂದು ಹೇಳುವ ಮೂಲಕ ಶಾಕ್‌ ಕೊಟ್ಟಿದ್ದಾರೆ.

ಪ್ರಸ್ತುತ ಪೆಟ್ರೋಲ್‌, ಡೀಸೆಲ್‌, ATF ಮತ್ತು ನೈಸರ್ಗಿಕ ಅನಿಲಗಳು ಜಿಎಸ್‌ಟಿ ಅಡಿಯಲ್ಲಿ ಬರುತ್ತಿರಲಿಲ್ಲ. ಅವುಗಳಿಗೆ ವ್ಯಾಟ್‌, ಕೇಂದ್ರ ತೆರಿಗೆ ಮತ್ತು ಅಬಕಾರಿ ಟ್ಯಾಕ್ಸ್‌ ವಿಧಿಸಲಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಡಿಯಲ್ಲಿ ತರಬೇಕೆಂಬುದು ಕೈಗಾರಿಕೆಗಳ ಬಹುದಿನದ ಬೇಡಿಕೆ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಬಾರಿ ಈ ಬೇಡಿಕೆ ಪೂರೈಸುವ ಸಾಧ್ಯತೆ ಇದ್ದು, ಇದರಿಂದ ರಾಜ್ಯ ಸರ್ಕಾರಗಳ ಆದಾಯಕ್ಕೆ ಬಹುದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಅದೂ ಅಲ್ಲದೇ ಈ ನೀತಿಯಿಂದ ಕೇಂದ್ರದ ಮೇಲೆ ರಾಜ್ಯ ಸರ್ಕಾರಗಳು ಇನ್ನು ಹೆಚ್ಚಾಗಿ ಅವಲಂಬನೆ ಆಗುವ ಸಾಧ್ಯತೆ ಇದೆ.

ಇನ್ನು ಕೇಂದ್ರವು ಸಂಪನ್ಮೂಲಗಳ ವಿಕೇಂದ್ರೀಕರಣವನ್ನು ವಿಳಂಬಗೊಳಿಸಬಹುದು ಮತ್ತು ರಾಜ್ಯಗಳ ಬಜೆಟ್ ಸಾಲವನ್ನು ಕಠಿಣಗೊಳಿಸಬಹುದು ಎಂದು ಕಿಶೋರ್ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಜಾಗತಿಕ ಮಟ್ಟದಲ್ಲಿ, ದೇಶಗಳೊಂದಿಗೆ ವ್ಯವಹರಿಸುವಾಗ ಭಾರತದ ದೃಢತೆ ಹೆಚ್ಚಾಗುತ್ತದೆ ಅವರು ಹೇಳಿದರು.

ನಿನ್ನೆ ಪತ್ರಕರ್ತೆ ಬರ್ಖಾ ದತ್‌ ಜೊತೆ ಮಾತನಾಡಿದ್ದ ಪ್ರಶಾಂತ್‌ ಕಿಶೋರ್‌, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೇಲೆ ಜನ ಸಿಟ್ಟಾಗಿದ್ದಾರೆ ಎಂಬುದು ಎಲ್ಲೂ ಕೇಳಿಲ್ಲ, ನೋಡಿಲ್ಲ. ಹಾಗಾಗಿ, ಅವರೇ ಪ್ರಧಾನಿಯಾಗುವುದು ನಿಶ್ಚಿತ ಎಂದಿದ್ದರು. ಅಲ್ಲದೇ ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಂತಹ ಅಲೆ ಇಲ್ಲ. ನರೇಂದ್ರ ಮೋದಿ ಅವರ ಬಗ್ಗೆ ಜನರಿಗೆ ಈಗಲೂ ವಿಶ್ವಾಸವಿದೆ. ಜನರು ಮೋದಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರಬಹುದು, ಒಂದಷ್ಟು ಭರವಸೆಗಳು ಈಡೇರಿದೆ ಇರಬಹುದು. ಆದರೆ, ಮೋದಿ ಜನರಿಗೆ ಖಂಡಿತವಾಗಿಯೂ ಸಿಟ್ಟಿಲ್ಲ ಎಂದಿದ್ದರು.

ಇದನ್ನೂ ಓದಿ:Drone Prathap: ಡಿಫರೆಂಟ್‌ ಆಗಿ ಬರ್ತ್‌ಡೇ ಸೆಲೆಬ್ರೇಷನ್‌ಗೆ ಡ್ರೋನ್ ಪ್ರತಾಪ್ ಪ್ಲ್ಯಾನ್‌: ವೋಟ್‌ ಹಾಕಿದ್ದು ಸಾರ್ಥಕ ಅಂದ್ರು ಫ್ಯಾನ್ಸ್‌!

ಇನ್ನು ಬಿಜೆಪಿ ಸ್ಪಷ್ಟ ಬಹುಮತ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼಈ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ತೋರಲಿದೆ. ಜತೆಗೆ ಸೀಟುಗಳ ಸಂಖ್ಯೆಯನ್ನೂ ವೃದ್ಧಿಸಿಕೊಳ್ಳಲಿದೆ. ಅದರಲ್ಲಿಯೂ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಜೆಪಿ ಇನ್ನಷ್ಟು ಶಕ್ತವಾಗಲಿದೆ. ಅಲ್ಲದೆ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿಯೂ ಸೀಟು ಹೆಚ್ಚಳವಾಗುವ ನಿರೀಕ್ಷೆ ಇದೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.

Exit mobile version