ಪ್ರಯಾಗ್‌ರಾಜ್: ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಬೇಕಾಗಿರುವ ಶೂಟರ್, ಗ್ಯಾಂಗ್‌ಸ್ಟರ್ ಆತಿಕ್ ಅಹ್ಮದ್ ಗ್ಯಾಂಗ್‌ಗೆ ಸೇರಿದ ಪಾತಕಿಯೊಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಹೊಡೆದುರುಳಿಸಿದ್ದಾರೆ.
ಪ್ರಯಾಗ್‌ರಾಜ್‌ನ ಕೌಧಿಯಾರ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಸಿದ ಪೊಲೀಸರು ವಿಜಯ್ ಚೌಧುರಿ ಅಲಿಯಾಸ್ ಉಸ್ಮಾನ್ ಎಂಬಾತನನ್ನು ಕೊಂದು ಹಾಕಿದ್ದಾರೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಈತನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದಾನೆ.
ಉಮೇಶ್ ಪಾಲ್ ಹಾಗೂ ಅವರ ಸೆಕ್ಯುರಿಟಿ ಗಾರ್ಡ್‌ಗಳ ಮೇಲೆ ಫೆ.24ರಂದು ಮೊದಲು ದಾಳಿ ನಡೆಸಿದವನೇ ಈತನೆಂದು ಹೇಳಲಾಗಿದೆ. ಈತನ ಸುಳಿವು ನೀಡಿದವರಿಗೆ ಉತ್ತರ ಪ್ರದೇಶ ಪೊಲೀಸರು 50,000 ಬಹುಮಾನ ಘೋಷಿಸಿದ್ದರು. ಇತ್ತೀಚೆಗೆ ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಅರ್ಬಾಜ್ ಖಾನ್ ಎಂಬಾತನನ್ನೂ ಪೊಲೀಸರು ಎನ್‌ಕೌಂಟರ್ ಮಾಡಿದ್ದರು.
ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಉಮೇಶ್ ಪಾಲ್ ಅವರು ಪ್ರಮುಖ ಸಾಕ್ಷಿಯಾಗಿದ್ದರು. ಪ್ರಯಾಗ್‌ರಾಜ್ ಹೊರವಲಯದ ಅವರ ಮನೆಯಲ್ಲಿ ಉಮೇಶ್ ಪಾಲ್ ಹಾಗೂ ಅವರ ಭದ್ರತಾ ಸಿಬ್ಬಂದಿ ಸಂದೀಪ್ ನಿಷಾದ್‌ರನ್ನು ಆತಿಕ್ ಅಹ್ಮದ್ ಗ್ಯಾಂಗ್ ಕೊಂದುಹಾಕಿತ್ತು.
ಗ್ಯಾಂಗ್‌ಸ್ಟರ್‌ನಿಂದ ರಾಜಕಾರಣಿಯಾಗಿ ಬದಲಾಗಿರುವ ಆತಿಕ್ ಅಹ್ಮದ್, ರಾಜು ಪಾಲ್ ಹಾಗೂ ಉಮೇಶ್ ಪಾಲ್ ಕೊಲೆ ಪ್ರಕರಣದ ಪ್ರಮುಖ ರೂವಾರಿಯಾಗಿದ್ದು, ಗುಜರಾತಿನ ಜೈಲಿನಲ್ಲಿದ್ದಾನೆ. ಕೊಲೆ ಮಾಡಿದ ಐವರು ಆರೋಪಿಗಳ ತಲೆಗೆ 2.5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ಇದನ್ನೂ ಓದಿ: Prayagraj Encounter: ಉತ್ತರ ಪ್ರದೇಶದಲ್ಲಿ ಉಮೇಶ್ ಪಾಲ್ ಹತ್ಯೆ ಆರೋಪಿ ಅರ್ಬಾಜ್ ಖಾನ್ ಎನ್‌ಕೌಂಟರ್