Site icon Vistara News

Prema Dhanraj: ಸುಟ್ಟ ಗಾಯದಿಂದ ಪದ್ಮಶ್ರೀವರೆಗೆ; ಡಾ. ಪ್ರೇಮಾ ಧನರಾಜ್ ಬದುಕಿನ ರೋಚಕ ಪಯಣ

prema dhanraj

prema dhanraj

ಬೆಂಗಳೂರು: ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Awards) ಕೇಂದ್ರ ಸರ್ಕಾರ ಘೋಷಿಸಿದೆ. ಗಣರಾಜ್ಯೋತ್ಸವದ ಮುನ್ನಾ ದಿನವಾದ ಜನವರಿ 25ರಂದು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 5 ಮಂದಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಹಾಗೂ 110 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 8 ಕನ್ನಡಿಗರಿಗೆ ಪದ್ಮಶ್ರೀ (Padma Shri)ಯ ಗೌರವ ಸಂದಾಯವಾಗಿದೆ. ಈ ಪೈಕಿ ಡಾ. ಪ್ರೇಮಾ ಧನರಾಜ್ (Dr. Prema Dhanraj) ಕೂಡ ಒಬ್ಬರು. ಬಾಲ್ಯದಲ್ಲಿಯಲ್ಲಿ ನಡೆದ ಅವಘಡದಿಂದ ಸುಟ್ಟಗಾಯಗಳಾಗಿದ್ದ ಅವರ ಬದುಕಿನ ರೋಚಕ ಪಯಣದ ವಿವರ ಇಲ್ಲಿದೆ.

ಯಾರು ಈ ಡಾ. ಪ್ರೇಮಾ ಧನರಾಜ್?

ಸುಟ್ಟ ದೇಹದಿಂದ ಪದ್ಮಶ್ರೀ ಪ್ರಶಸ್ತಿ ಪಡೆಯುವವರೆಗಿನ ಪ್ರೇಮಾ ಅವರ ಹೋರಾಟದ ಹಾದಿ ಸುಲಭದ್ದಾಗಿರಲಿಲ್ಲ. 72 ವರ್ಷ ವಯಸ್ಸಿನ ಪ್ರೇಮಾ ಅವರ ಸಾಹಸಗಾಥೆ ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಬೆಂಕಿ ಅವಘಡದಿಂದ ಸುಮಾರು ಶೇ. 50ರಷ್ಟು ಸುಟ್ಟ ಗಾಯಗಳಾಗಿದ್ದ ಪ್ರೇಮಾ ಬಳಿಕ ಆತ್ಮಸ್ಥೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ ಸುಟ್ಟ ಗಾಯಗಳಿಗೆ ತುತ್ತಾದ 25,000ಕ್ಕೂ ಅಧಿಕ ಮಂದಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಕುರಿತು ಮೂರು ಪುಸ್ತಕಗಳನ್ನು ಬರೆದಿದ್ದಾರೆ.

ಬಾಲ್ಯದಲ್ಲಿ ನಡೆದ ಅವಘಡ

ಅದು 1965ರ ಇಸವಿ. ಆಗ ಪ್ರೇಮಾ ಅವರಿಗೆ ಎಂಟು ವರ್ಷ. ಅವರ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿತ್ತು. ಅಂದು ಪ್ರೇಮಾ ಅವರ ಕುಟುಂಬಕ್ಕೆ ಆಘಾತವೊಂದು ಅಗ್ನಿ ಅವಘಡದ ರೂಪದಲ್ಲಿ ಎದುರಾಗಿತ್ತು. ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ ಆಕಸ್ಮಿಕ ಪುಟ್ಟ ಪ್ರೇಮಾ ಅವರ ದೇಹದ ಮೇಲೆ ವ್ಯಾಪಿಸಿತ್ತು. ಶೇ. 50ರಷ್ಟು ಸುಟ್ಟ ಗಾಯಗಳೊಂದಿಗೆ ಪ್ರೇಮಾ ನೋವಿನಿಂದ ಒಡ್ಡಾಡುತ್ತಿದ್ದರು. ಸ್ಟವ್‌ ಸಿಡಿದು ಅವರ ಮುಖ, ಕುತ್ತಿಗೆ ಹಾಗೂ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿತ್ತು.

ಕೂಡಲೇ ಪ್ರೇಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸುಟ್ಟ ಗಾಯಗಳಾಗಿದ್ದ ಪ್ರೇಮಾ ಬದುಕುವುದೇ ಅನುಮಾನ ಎಂದು ವೈದ್ಯರು ತಿಳಿಸಿದ್ದರು. ಅಂದಾಜು ಒಂದು ತಿಂಗಳ ಚಿಕಿತ್ಸೆಯ ಬಳಿಕ ಪ್ರೇಮಾ ಅವರನ್ನು ಅವರ ತಂದೆ ಸಿಎಸ್‌ ಧನರಾಜ್‌ ಹಾಗೂ ತಾಯಿ ರೋಸಿ ಧನರಾಜ್‌ ತಮಿಳುನಾಡಿನ ವೆಲ್ಲೂರ್‌ನಲ್ಲಿರುವ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿಗೆ ದಾಖಲಿಸಿದ್ದರು.

ತಜ್ಞರ ವೈದ್ಯರ ಪ್ರಕಾರ ವ್ಯಕ್ತಿಯ ದೇಹದ ಶೇ. 30ಕ್ಕಿಂತ ಹೆಚ್ಚು ಸುಟ್ಟಗಾಯಗಳು ಮಾರಣಾಂತಿಕವಾಗಬಹುದು. ಆದರೆ ಪವಾಡ ಸದೃಶ ಎಂಬಂತೆ ಪ್ರೇಮಾ ಚೇತರಿಸಿಕೊಳ್ಳತೊಡಗಿದರು. ಆತ್ಮ ವಿಶ್ವಾಸದಿಂದ, ಮನೋಧೈರ್ಯದಿಂದ ಪರಿಸ್ಥಿತಿಯನ್ನು ಮೆಟ್ಟಿನಿಂತು ಬದುಕಿನತ್ತ ಹೊರಳಿದರು.

ಪ್ಲಾಸ್ಟಿಕ್‌ ಸರ್ಜನ್‌

ಬಳಿಕ ಪ್ರೇಮಾ ತಮ್ಮ ತಾಯಿಯ ಆಶಯದಂತೆ ಸಮಾಜ ಸೇವೆಗಾಗಿ ಜೀವನವನ್ನೇ ಮುಡಿಪಿಟ್ಟರು. ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೆಡಿಕಲ್ ಶಿಕ್ಷಣಕ್ಕೆ ಸೀಟು ಗಿಟ್ಟಿಸಿಕೊಂಡರು. ಮುಂದೆ ಅವರ ಆಸಕ್ತಿಯ ಸರ್ಜರಿ ವಿಭಾಗವನ್ನು ಅಧ್ಯಯನ ಮಾಡಿ ಪ್ಲಾಸ್ಟಿಕ್ ಸರ್ಜನ್ (Plastic Surgeon) ಆಗಿ ಹೊರ ಹೊಮ್ಮಿದರು. ಅಮೆರಿಕಾದಲ್ಲಿ, ಗ್ಲಾಸ್ಗೋದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕನಸಿನಂತೆ ದೇಶದ ಶ್ರೇಷ್ಠ ಪ್ಲಾಸ್ಟಿಕ್ ಸರ್ಜನ್ ಆಗಿ ಗುರುತಿಸಿಕೊಂಡರು.  

ಇದನ್ನೂ ಓದಿ: Padma Awards 2024: ದಿವ್ಯಾಂಗರಾದರೂ ಸಮಾಜಕ್ಕೆ ಮಿಡಿದ ಗುರ್ವಿಂದರ್‌ಗೆ ಪದ್ಮಶ್ರೀ ಗರಿ!

ವೆಲ್ಲೋರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಸೇವೆ ಆರಂಭಿಸಿದ ಪ್ರೇಮಾ ಮುಂದೆ ಅದೇ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದರು. ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಕೂಡ ಸೇವೆ ಸಲ್ಲಿಸಿದರು. ಪ್ರೇಮಾ 1999ರಲ್ಲಿ ಅಗ್ನಿ ರಕ್ಷಾ ಎಂಬ ಹೆಸರಿನ ಸರ್ಕಾರೇತರ ಸಂಸ್ಥೆ ಸ್ಥಾಪಿಸಿ ಸುಟ್ಟ ಗಾಯಾಳುಗಳ ಚಿಕಿತ್ಸೆಗೆ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡುತ್ತಿದ್ದಾರೆ. ಇದುವರೆಗೆ ಅವರು ಸುಮಾರು 25,000ಕ್ಕೂ ಹೆಚ್ಚು ಸುಟ್ಟಗಾಯಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ತಮಿಳುನಾಡಿನ ವೆಲ್ಲೂರಿನಲ್ಲಿ ಹುಟ್ಟಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಅವರ ನಿಸ್ವಾರ್ಥ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version