ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಪ್ರಧಾನಿ ಮೋದಿ (PM Modi US Visit)ಯವರಿಗೆ ಪ್ರಜಾಪ್ರಭುತ್ವದ ಕುರಿತಾದಂತೆ ಯಾವುದೇ ಬೋಧನೆ ನೀಡುವುದಿಲ್ಲ ಎಂದು ವೈಟ್ ಹೌಸ್ ತಿಳಿಸಿದೆ. ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆ (Indian Democracy) ಅಪಾಯದಲ್ಲಿದೆ. ಅಲ್ಪಸಂಖ್ಯಾತರ ಹಕ್ಕುಗಳು ದಮನವಾಗುತ್ತಿದೆ ಎಂಬಿತ್ಯಾದಿ ಆರೋಪಗಳು ಕೇಳಿಬರುತ್ತಿವೆ. ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಇಬ್ಬರು ಸಂಸದೆಯರಾದ ಇಲ್ಹಾನ್ ಒಮರ್ ಮತ್ತು ರಶೀದಾ ತ್ಲೈಬ್ ಎಂಬುವರು ಇದೇ ಕಾರಣಕ್ಕೆ ಅಮೆರಿಕ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭಾಷಣವನ್ನು ಬಹಿಷ್ಕರಿಸಿದ್ದಾರೆ.‘ಭಾರತದಲ್ಲಿ ಪ್ರಧಾನಿ ಮೋದಿ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರನ್ನು ದಮನ ಮಾಡಿದೆ. ಹಿಂಸಾತ್ಮಕ ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳಿಗೆ ಕುಮ್ಮಕ್ಕು ತುಂಬಿದೆ. ಪತ್ರಕರ್ತರು/ಮಾನವ ಹಕ್ಕುಗಳ ಪ್ರತಿಪಾದಕರನ್ನು ದಮನಿಸಿದೆ. ಹೀಗಾಗಿ ನಾವು ಅವರ ಭಾಷಣಕ್ಕೆ ಹಾಜರಾಗುವುದಿಲ್ಲ’ ಎಂದಿದ್ದರು.
ಇವರಿಷ್ಟೇ ಅಲ್ಲ, ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತ ಮಾನವ ಹಕ್ಕುಗಳ ನಿಯಮಗಳ ಉಲ್ಲಂಘನೆಯಾಗುತ್ತಿದೆ. ಪ್ರಧಾನಿ ಮೋದಿಯವರು ಯುಎಸ್ಗೆ ಭೇಟಿ ಕೊಟ್ಟಿದ್ದಾಗ ಅವರ ಬಳಿ ಈ ವಿಚಾರಗಳ ಬಗ್ಗೆ ನೇರವಾಗಿ ಮಾತನಾಡಿ ಎಂದು ಅಮೆರಿಕದ ಡೆಮಾಕ್ರಟಿಕ್ ಪಾರ್ಟಿಯ ಸುಮಾರು 75 ಜನಪ್ರತಿನಿಧಿಗಳು ಕೂಡ ಅಧ್ಯಕ್ಷ ಜೋ ಬೈಡೆನ್ರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಇದೆಲ್ಲ ಒತ್ತಾಯ, ಆಗ್ರಹಗಳ ಮಧ್ಯೆಯೇ ಈ ಬಗ್ಗೆ ಮಾತನಾಡಿದ ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ‘ಭಾರತದ ಪ್ರಜಾಸತ್ತಾತ್ಮಕ ನಿಯಮಗಳ ಉಲ್ಲಂಘನೆ ವಿಚಾರವನ್ನು ಅಧ್ಯಕ್ಷ ಜೋ ಬೈಡೆನ್ ಅವರು ಪ್ರಧಾನಿ ಮೋದಿ ಎದುರು ಪ್ರಸ್ತಾಪಿಸಿ, ಕಳವಳ ವ್ಯಕ್ತಪಡಿಸುತ್ತಾರೆ ಹೊರತು, ಪ್ರಜಾಪ್ರಭುತ್ವ, ಮಾನವ ಹಕ್ಕುಗಳ ಬಗ್ಗೆ ಯಾವುದೇ ಬೋಧನೆ ಮಾಡುವುದಿಲ್ಲ. ಹೀಗೆ ಮಾಡಬೇಕಿತ್ತು, ಹಾಗೇ ಮಾಡಿ ಎಂದೆಲ್ಲ ಹೇಳುವುದಿಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: PM Modi US Visit: ಮೋದಿ ಅಮೆರಿಕ ಭೇಟಿ ಸಕ್ಸೆಸ್; ಭಾರತೀಯರಿಗೆ ಸಿಗಲಿವೆ ಎಚ್-1B ವೀಸಾ, ಹೆಚ್ಚಿನ ಉದ್ಯೋಗ
ಭಾರತದ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಬರುತ್ತಿದ್ದಾರೆ ಎಂದು ವಿಷಯ ಗೊತ್ತಾಗುತ್ತಿದ್ದಂತೆ ಯುಎಸ್ನ ಡೆಮಾಕ್ರಟಿಕ್ ಪಾರ್ಟಿ ಸಂಸದರೆಲ್ಲ ಸೇರಿ ಜೋ ಬೈಡೆನ್ಗೆ ಪತ್ರ ಬರೆದು, ‘ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆ. ಅಲ್ಲಿ ಇತರ ರಾಜಕೀಯ ಪಕ್ಷಗಳಿಗೆ ಅವಕಾಶ ಇಲ್ಲದಂತೆ ಮಾಡಲಾಗುತ್ತಿದೆ. ನಾಗರಿಕ ಸಮಾಜದ ಸಂಸ್ಥೆಗಳನ್ನು, ಪತ್ರಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇಂಟರ್ನೆಟ್ ವ್ಯವಸ್ಥೆ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ನಿಯಂತ್ರಿಸಲಾಗುತ್ತಿದೆ. ಈ ಬಗ್ಗೆ ಮೋದಿಯವರ ಬಳಿ ಸ್ಥೂಲವಾಗಿ ಚರ್ಚೆ ಮಾಡಬೇಕು. ಪ್ರಜಾಸತ್ತಾತ್ಮಕ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಹೇಳಬೇಕು’ ಎಂದು ಒತ್ತಾಯಿಸಿದ್ದರು.
ಜೋ ಬೈಡೆನ್ ಅವರು ಇಷ್ಟೆಲ್ಲ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಬಳಿ ಚರ್ಚಿಸುತ್ತಾರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೇಕ್ ಸುಲ್ಲಿವಾನ್, ‘ಜೋ ಬೈಡೆನ್ ಅವರು ಮೋದಿಯವರ ಬಳಿ ಪ್ರಸ್ತಾಪ ಮಾಡಬಹುದು. ಆದರೆ ನಮ್ಮ ಅಮೆರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಸ್ಯೆ-ಸವಾಲುಗಳೇ ಇಲ್ಲ ಎಂಬ ಅರ್ಥದಲ್ಲಿ, ಪ್ರಧಾನಿ ಮೋದಿಯವರಿಗೆ ಯಾವುದೇ ಬೋಧನೆ ಕೊಡಲು ಹೋಗುವುದಿಲ್ಲ’ ಎಂದಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ