Site icon Vistara News

President Election: ದ್ರೌಪದಿ ಮುರ್ಮು ನಾಳೆ ನಾಮಪತ್ರ, ಮೋದಿಯೇ ಮೊದಲ ಸೂಚಕ

modi meets murmu

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಜಾರ್ಖಂಡ್‌ನ ಮಾಜಿ ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರು ಶುಕ್ರವಾರ (ಜೂನ್‌ ೨೪) ನಾಮಪತ್ರ ಸಲ್ಲಿಸಲಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮೊದಲ ಸೂಚಕರಾಗಲಿದ್ದಾರೆ ಎಂದು ಹೇಳಲಾಗಿದೆ.

ಮಂಗಳವಾರ ರಾತ್ರಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆಯಾಗುವ ವೇಳೆ ಒಡಿಶಾದ ಮಯೂರ್‌ ಭಂಜ್‌ನ ಮನೆಯಲ್ಲಿದ್ದ ಮುರ್ಮು ಅವರು ಗುರುವಾರ ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮುರ್ಮು ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಬಳಿಕ ತಮ್ಮ ಭೇಟಿಯ ಚಿತ್ರವನ್ನು ಟ್ವೀಟ್‌ ಮಾಡಿರುವ ಮುರ್ಮು ಅವರು, ʻಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದನ್ನು ದೇಶದಾದ್ಯಂತ ಸಮಾಜದ ಎಲ್ಲ ವರ್ಗದ ಜನರು ಶ್ಲಾಘಿಸಿದ್ದಾರೆ. ಅವರಿಗಿರುವ ತಳಮಟ್ಟದ ಸಮಸ್ಯೆಗಳ ಅರಿವು ಮತ್ತು ಭಾರತದ ಅಭಿವೃದ್ಧಿಯ ಕುರಿತಾದ ದೃಷ್ಟಿಕೋನ ಅತ್ಯದ್ಭುತವಾಗಿದೆʼʼ ಎಂದಿದ್ದಾರೆ.

ಶುಕ್ರವಾರ ಮುರ್ಮು ಅವರು ಸಲ್ಲಿಸಲಿರುವ ನಾಮಪತ್ರಕ್ಕೆ ಪ್ರಧಾನಿ ಮೋದಿ ಅವರೇ ಮೊದಲ ಸೂಚಕರಾಗಿರಲಿದ್ದಾರೆ. ಹಿರಿಯ ಬಿಜೆಪಿ ನಾಯಕರು, ಕೇಂದ್ರ ಮಂತ್ರಿಗಳು, ಅವರ ಅಭ್ಯರ್ಥಿತನಕ್ಕೆ ಬೆಂಬಲ ನೀಡುತ್ತಿರುವ ಇತರ ಪಕ್ಷಗಳ ಪದಾಧಿಕಾರಿಗಳು ಕೂಡಾ ಸೂಚಕರ ಪಟ್ಟಿಯಲ್ಲಿ ಇರಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಹೆಸರೂ ಸೂಚಕರು ಮತ್ತು ಅನುಮೋದಕರ ಪಟ್ಟಿಯಲ್ಲಿದೆ.

ರಾಷ್ಟ್ರಪತಿ ಚುನಾವಣೆ ಜು. ೧೮ರಂದು ನಡೆಯಲಿದೆ. ಮತ ಎಣಿಕೆಗೆ ಜುಲೈ ೨೧ರ ದಿನಾಂಕ ನಿಗದಿಯಾಗಿದೆ. ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ ಜೂನ್‌ ೨೯. ಹಿರಿಯ ಟಿಎಂಸಿ ನಾಯಕ ಯಶವಂತ್‌ ಸಿನ್ಹಾ ಅವರು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಲಿದ್ದಾರೆ.

ನಾಮಪತ್ರ ಸಲ್ಲಿಕೆಯಾಗಿ ಪರಿಶೀಲನೆ ನಡೆದ ಬಳಿಕ ದ್ರೌಪದಿ ಮುರ್ಮು ಅವರು ದೇಶದ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡಲಿದ್ದಾರೆ. ಸಂಸತ್ತಿನ ಎರಡೂ ಸದನಗಳ ಸದಸ್ಯರು, ಎಲ್ಲ ರಾಜ್ಯಗಳ ಶಾಸಕರನ್ನು ಒಳಗೊಂಡ ಎಲೆಕ್ಟೋರಲ್‌ ಕೊಲೇಜ್‌ ರಾಷ್ಟ್ರಪತಿಯ ಆಯ್ಕೆಯಲ್ಲಿ ಪಾಲ್ಗೊಳ್ಳಲಿದೆ. ಮುರ್ಮು ಅವರಿಗೆ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾ ದಳ, ನಿತೀಶ್‌ ಕುಮಾರ್‌ ನೇತೃತ್ವದ ಸಂಯುಕ್ತ ಜನತಾದಳ ಬೆಂಬಲ ಸಾರಿದೆ. ಮೊದಲೇ ಗೆಲುವಿಗೆ ಬೇಕಾದಷ್ಟು ಮತಗಳನ್ನು ಹೊಂದಿದ್ದ ಮುರ್ಮು ಅವರಿಗೆ ಈಗ ಹೆಚ್ಚಿನ ಬೆಂಬಲ ದೊರೆತಂತಾಗಿದೆ.

ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಖಚಿತವಾಗಿದ್ದು, ಆಯ್ಕೆಯಾದ ಬಳಿಕ ಅವರು ಪ್ರತಿಭಾ ಪಾಟೀಲ್‌ ಬಳಿಕ ಎರಡನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ. ಬುಡಕಟ್ಟು ಜನಾಂಗವನ್ನು ಪ್ರತಿನಿಧಿಸುವ ಮೊದಲ ರಾಷ್ಟ್ರಪತಿ ಆಗಲಿದ್ದಾರೆ.

ಇದನ್ನೂ ಓದಿ| ಸಂತಾಲ್‌ಗಳೆಂದರೆ ಯಾರು? ದ್ರೌಪದಿ ಮುರ್ಮು ಅವರ ಬುಡಕಟ್ಟು ಸಮುದಾಯದ ಪರಿಚಯ ಇಲ್ಲಿದೆ

Exit mobile version