Site icon Vistara News

President Election: ದ್ರೌಪದಿ ಮುರ್ಮು ಬೆಂಬಲಿಸಲು ಶಿವಸೇನೆ ನಿರ್ಧಾರ, ಶಿಂಧೆ ಬಣದ ಜತೆಗೂ ಹೊಂದಾಣಿಕೆ?

Droupadi murmu

ಮುಂಬಯಿ: ಜುಲೈ ೧೮ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಶಿವಸೇನೆ ನಿರ್ಧರಿಸಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ನಾವು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ಹಾಗಂತ ಇದರರ್ಥ ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂದಲ್ಲ ಎಂದು ಶಿವಸೇನೆಯ ವಕ್ತಾರ, ಸಂಸದ ಸಂಜಯ್‌ ರಾವತ್‌ ಹೇಳಿದ್ದಾರೆ.

ಸೋಮವಾರ ನಡೆದ ಶಿವಸೇನೆ ಸಂಸದರ ಸಭೆಯಲ್ಲಿ ಬಹುತೇಕ ಎಲ್ಲ ಸಂಸದರು ದ್ರೌಪದಿ ಮುರ್ಮು ಅವರನ್ನೇ ಬೆಂಬಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮಾತೋಶ್ರೀಯಲ್ಲಿ ನಡೆದ ಈ ಸಭೆಯಲ್ಲಿ ಶಿವಸೇನೆಯ ಮಹಾರಾಷ್ಟ್ರದ ೧೮ ಸಂಸದರ ಪೈಕಿ ೧೩ ಮಂದಿ ಭಾಗವಹಿಸಿದ್ದರು. ಮೂವರು ಯಾವುದೇ ತೀರ್ಮಾನಕ್ಕೆ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದರು. ಏಕನಾಥ ಶಿಂಧೆ ಅವರ ಪುತ್ರ ಶ್ರೀಕಾಂತ್‌ ಶಿಂಧೆ ಮತ್ತು ಭವಾನಿ ಗಾವಳಿ ಈ ಪ್ರಕ್ರಿಯೆಯಿಂದ ಹೊರಗುಳಿದಿದ್ದರು. ಶಿವಸೇನೆಗೆ ಮಹಾರಾಷ್ಟ್ರವಲ್ಲದೆ ದಾದ್ರಾ ಮತ್ತು ನಗರ್‌ ಹವೇಲಿಯಲ್ಲೂ ಒಬ್ಬರ ಸಂಸದರಿದ್ದಾರೆ. ಕಲಾಬೆನ್‌ ದೇಳ್ಕರ್‌ ಅವರು ಕೂಡಾ ಮುರ್ಮು ಅವರನ್ನೇ ಬೆಂಬಲಿಸಲಿದ್ದಾರೆ.

ಸಂಸದರ ಮಾತಿಗೆ ಒಪ್ಪಿರುವ ಉದ್ಧವ್‌ ಠಾಕ್ರೆ ನೇತೃತ್ವದ ಕೋರ್‌ ಕಮಿಟಿ, ದ್ರೌಪದಿ ಮುರ್ಮು ಅವರನ್ನೇ ಬೆಂಬಲಿಸುವ ನಿರ್ಧಾರವನ್ನು ಪ್ರಕಟಿಸಿದೆ. ಆದರೆ, ಇದು ಬಿಜೆಪಿಗೆ ನೀಡುತ್ತಿರುವ ಬೆಂಬಲವಲ್ಲ ಎಂದು ಕೂಡಾ ಸ್ಪಷ್ಟಪಡಿಸಿದೆ.

ಹಿಂದಿನ ಚುನಾವಣೆಗಳಲ್ಲಿ ನಾವು ಪ್ರತಿಭಾ ಪಾಟೀಲ್‌ ಅವರು ಯುಪಿಎ ಅಭ್ಯರ್ಥಿಯಾಗಿದ್ದರೂ ಅವರೊಬ್ಬರು ಮಹಿಳೆ ಮತ್ತು ಮರಾಠರು ಎಂಬ ಕಾರಣಕ್ಕೆ ಬೆಂಬಲ ನೀಡಿದ್ದೆವು. ಪ್ರಣಬ್‌ ಮುಖರ್ಜಿ ಅವರಿಗೂ ಬೆಂಬಲ ಕೊಟ್ಟಿದ್ದೆವು. ಹೀಗಾಗಿ ಈ ಬಾರಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದು ಸೂಕ್ತವಾಗಿದೆ. ಈ ಬಗ್ಗೆ ಉದ್ಧವ್‌ ಠಾಕ್ರೆ ಅವರು ಘೋಷಣೆ ಮಾಡಲಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿ ನಾವು ರಾಜಕೀಯವನ್ನು ಮೀರಿ ಯೋಚನೆ ಮಾಡಬೇಕು ಎಂದು ಸೋಮವಾರ ಸಭೆಯ ಬಳಿಕ ಶಿವಸೇನೆಯ ಸಂಸದರಾಗಿರುವ ಗಜಾನನ ಕೀರ್ತಿಕರ್‌ ಅವರು ಹೇಳಿದ್ದರು.

ಶಿಂಧೆ ಜತೆ ಸಂಧಾನಕ್ಕೆ ಸಲಹೆ
ಈ ನಡುವೆ ಶಿವಸೇನಾ ಸಂಸದರು ಉದ್ಧವ್‌ ಠಾಕ್ರೆ ಅವರಿಗೆ ಮಹತ್ವದ ಮತ್ತೊಂದು ಸಲಹೆ ನೀಡಿದ್ದಾರೆ. ಅದೇನೆಂದರೆ, ಶಿವಸೇನೆಯ ಏಕನಾಥ್‌ ಶಿಂಧೆ ಬಣದ ಜತೆಗೆ ದ್ವೇಷ ಸಾಧಿಸದೆ ಜತೆಯಾಗಿ ಹೋಗುವ ಬಗ್ಗೆ ಮಾತುಕತೆಗೆ ಸೂಕ್ತವಾದ ವೇದಿಕೆ ನಿರ್ಮಾಣ ಮಾಡಬೇಕು ಎನ್ನುವುದು. ಇದನ್ನು ಉದ್ಧವ್‌ ಠಾಕ್ರೆ ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ| Maha politics: ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಬೆಂಬಲಿಸಲು 16 ಶಿವಸೇನಾ ಸಂಸದರ ಒಲವು

Exit mobile version