ನವ ದೆಹಲಿ: ಹಾಲಿ ತೃಣಮೂಲ ಕಾಂಗ್ರೆಸ್‌ನಲ್ಲಿರುವ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಅವರು ಜುಲೈ ೧೮ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗ ಜಂಟಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆದ ೧೭ ಪಕ್ಷ್ಗಗಳ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನ ಸೋಲಿಸಲೇಬೇಕೆಂದು ಪಣತೊಟ್ಟಿರುವ ಪ್ರತಿಪಕ್ಷಗಳು ಒಗ್ಗಟ್ಟಾಗಿ ಅಭ್ಯರ್ಥಿಯನ್ನ ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ಎರಡು ಬಾರಿ ಸಭೆ ಸೇರಿ ಎಲ್ಲರ ಒಮ್ಮತದಲ್ಲಿ ಈ ಆಯ್ಕೆಯನ್ನು ಮಾಡಲಾಗಿದೆ. ಜುಲೈ 18ಕ್ಕೆ ಚುನಾವಣೆ ನಡೆಯಲಿದ್ದು, ನಾಮನಿರ್ದೇಶನಕ್ಕೆ ಜೂನ್ 29 ಕಡೆಯ ದಿನವಾಗಿದೆ.
ಈ ಮೊದಲಿನ ಸಭೆಯಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್, ಫಾರುಕ್ ಅಬ್ದುಲ್ ಹಾಗೂ ಗೋಪಾಲಕೃಷ್ಣ ಗಾಂಧಿಯವರನ್ನ ಅಭ್ಯರ್ಥಿಯನ್ನಾಗಿ ಮಾಡಲು ಪಕ್ಷ ಪರಿಗಣಿಸಿತ್ತು. ಆದರೆ, ಈ ಮೂವರು ನಾಯಕರು ಅಭ್ಯರ್ಥಿಯಾಗಿ ನಿಲ್ಲಲು ನಿರಾಕರಿಸಿದ್ದರು. ಕಡೆಗೆ ಟಿಎಂಸಿ ಉಪಾಧ್ಯಕ್ಷ ಯಶ್ವಂತ್ ಸಿನ್ಹಾ ಹೆಸರು ಅಂತಿಮಗೊಳಿಸಲಾಗಿದ್ದು, ಎಲ್ಲರ ಒಮ್ಮತದಿಂದ ಸಿನ್ಹಾರನ್ನ ಚುನಾವಣಾ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಸಭೆಗೂ ಮುನ್ನವೇ ಯಶ್ವಂತ್ ಸಿನ್ಹಾ ಈ ಕುರಿತು ಟ್ವೀಟ್ ಮಾಡಿದ್ದು, ಮಮತಾ ಜೀ ಅವರು ಟಿಎಂಸಿಯಲ್ಲಿ ನನಗೆ ನೀಡಿದ ಗೌರವ ಮತ್ತು ಪ್ರತಿಷ್ಠೆಗೆ ನಾನು ಆಭಾರಿಯಾಗಿದ್ದೇನೆ. ಈಗ ಒಂದು ದೊಡ್ಡ ಉದ್ದೇಶಕ್ಕಾಗಿ ನಾನು ಕೆಲಸ ಮಾಡಬೇಕಿದೆ. ಹೀಗಾಗಿ ಟಿಎಂಸಿ ಪಕ್ಷ ತೊರೆಯಬೇಕಿದೆ. ಮಮತಾ ಜೀ ಅವರು ಕೂಡ ನನ್ನ ಈ ನಿರ್ಧಾರವನ್ನು ಅನುಮೋದಿಸುವ ನಂಬಿಕೆ ಇದೆ ಎಂದು ಬರೆದುಕೊಂಡಿದ್ದರು. ಭಾರತದ ಹಣಕಾಸು ಮತ್ತು ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿರುವ ಯಶ್ವಂತ್ ಸಿನ್ಹಾ ಅವರು ತೃಣಮೂಲ ಕಾಂಗ್ರೆಸ್ನ ಉಪಾಧ್ಯಕ್ಷರಾಗಿದ್ದಾರೆ. 2018ರಲ್ಲಿ ಬಿಜೆಪಿ ತೊರೆದು ಟಿಎಂಸಿ ಸೇರ್ಪೆಡೆಯಾಗಿದ್ದರು.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ನಿರ್ವಹಣಾ ತಂಡ ರಚಿಸಿದ ಬಿಜೆಪಿ; ಶೇಖಾವತ್, ಸಿ ಟಿ ರವಿ ಸೇರಿ 14 ನಾಯಕರಿಗೆ ಜವಾಬ್ದಾರಿ