Site icon Vistara News

Independence day| ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ್‌, ಜೈ ಅನುಸಂಧಾನ್‌: ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಘೋಷ

red fort

ನವ ದೆಹಲಿ: ನೂರಾರು ವರ್ಷಗಳ ತ್ಯಾಗ ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ಕಳೆದ 75 ವರ್ಷಗಳಲ್ಲಿ ಅನೇಕ ಸಂಕಷ್ಟಗಳ ನಡುವೆಯೂ ಸಂರಕ್ಷಿಸಿಕೊಂಡು ಬಂದಿದ್ದೇವೆ. ಇನ್ನು ಮುಂದಿನ 25 ವರ್ಷಗಳಲ್ಲಿ ಭವ್ಯ ಭಾರತ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಿ ಮುನ್ನಡೆಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೆಂಪು ಕೋಟೆಯ ಮೇಲಿನಿಂದ ತ್ರಿವರ್ಣ ಧ್ವಜ ಆರೋಹಣ ಮಾಡಿದ ಬಳಿಕ ಅವರು ಮಾತನಾಡಿ, ನವಭಾರತದ ನಾಗರಿಕ ಸಂಕಲ್ಪಗಳ ಕುರಿತು ದಿಗ್ದರ್ಶನ ನೀಡಿದರು.

ಮುಂದಿನ ದಶಕಗಳಲ್ಲಿ ಭಾರತದ ಪ್ರಜೆಗಳು ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ʼಜೈ ಜವಾನ್‌, ಜೈ ಕಿಸಾನ್‌ʼ ಮಂತ್ರದ ಜತೆಗೆ ʼಜೈ ವಿಜ್ಞಾನ್‌ʼ ಹಾಗೂ ʼಜೈ ಅನುಸಂಧಾನ್;ʼ ಅನ್ನೂ ಸೇರಿಸಿಕೊಂಡು ಮುನ್ನಡೆಯಬೇಕಿದೆ. ʼಅನುಸಂಧಾನ್‌ʼ ಎಂದರೆ ಆವಿಷ್ಕಾರಗಳು. ನೂತನ ಆವಿಷ್ಕಾರಗಳು ನಮ್ಮ ದೇಶದಲ್ಲಿ ಯುವಜನತೆಯಿಂದ ಆಗುತ್ತಿವೆ. ಡಿಜಿಟಲ್‌ ಭಾರತ ನಮ್ಮ ಕನಸಾಗಿದೆ, ಅದು ಮುಂದಿನ ದಶಕದಲ್ಲಿ ನನಸಾಗಲಿದೆ. ಮುಂದಿನ decade- ಅದು Techade ಆಗಲಿದೆ ಎಂದು ಮೋದಿ ನುಡಿದರು.

ದೇಶದ 130 ಕೋಟಿ ಜನತೆಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಾವಿರ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದಿನ ದಿವಸ ಐತಿಹಾಸಿಕ ದಿವಸ. ನವ ಸಂಕಲ್ಪದೊಂದಿಗೆ, ನವ ಸಾಮರ್ಥ್ಯದೊಂದಿಗೆ ಮುನ್ನಡೆಯುವ ಶುಭಸಂಭ್ರಮವಾಗಿದೆ. ನೂರಾರು ವರ್ಷಗಳ ಕಾಲದ ವಸಾಹತು ಆಡಳಿತವನ್ನು ದಿಟ್ಟ ಹೋರಾಟ, ತ್ಯಾಗ, ಬಲಿದಾನಗಳಿಂದ ಎದುರಿಸಿ, ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ಇದನ್ನು ಪಡೆದುಕೊಟ್ಟ ಮಹಾತ್ಮ ಗಾಂಧಿ, ನೇತಾಜಿ ಸುಭಾಶ್ಚಂದ್ರ ಬೋಸ್, ಅಂಬೇಡ್ಕರ್‌, ವೀರ ಸಾವರ್ಕರ್‌ ಮುಂತಾದ ಎಲ್ಲ ಧೀರರಿಗೂ ದೇಶ ಕೃತಜ್ಞವಾಗಿದೆ. ಮಂಗಲ್‌ ಪಾಂಡೆ, ತಾತ್ಯಾ ಟೋಪೆ, ಭಗತ್‌ ಸಿಂಗ್‌, ಸುಖದೇವ್‌, ರಾಜಗುರು, ಚಂದ್ರಶೇಖರ ಆಜಾದ್‌, ಅಸ್ಫಾದುಲ್ಲಾ ಖಾನ್‌, ರಾಮಪ್ರಸಾದ್‌ ಬಿಸ್ಮಿಲ್‌ ಮುಂತಾದ ಕ್ರಾಂತಿವೀರರಿಗೂ ನಾವು ಋಣಿಯಾಗಿದ್ದೇವೆ. ವೀರಾಂಗನೆಯರಾದ ರಾಣಿ ಲಕ್ಷ್ಮೀಬಾಯಿ, ರಾಣಿ ಚೆನ್ನಮ್ಮ, ಬೇಗಂ ಹಜರತ್‌ ಮಹಲ್‌, ಮುಂತಾದವರು ಭಾರತದ ನಾರಿಶಕ್ತಿ ಏನೆಂಬುದನ್ನು ತೋರಿಸಿದರು. ಇವರೆಲ್ಲರ ನೆನಪಿನಿಂದಲೇ ಭಾರತೀಯ ಪುಳಕಿತಗೊಳ್ಳುತ್ತಾನೆ ಎಂದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಳಿಕ ದೇಶ ಕಟ್ಟಲೂ ನಮ್ಮ ವೀರರು ಹೋರಾಡಿದರು. ರಾಜೇಂದ್ರಪ್ರಸಾದ್‌, ನೆಹರೂ, ಶ್ಯಾಮ್‌ಪ್ರಸಾದ್‌, ದೀನದಯಾಲ್‌, ಜೆಪಿ, ಲೋಹಿಯಾ, ವಿನೋಬಾ ಭಾವೆ, ನಾನಾಜಿ ದೇಶಮುಖ್‌, ಸುಬ್ರಹ್ಮಣ್ಯ ಭಾರತಿ ಮುಂತಾದ ಮಹಾಪುಷರುಷರಿಗೆ ನಮನ ಸಲ್ಲಿಸುತ್ತೇನೆ. ಆದಿವಾಸಿಗಳಾದ ಬಿರ್ಸಾ ಮುಂಡಾ, ಸಿದ್ದು ಕಾಳೊ, ಅಲ್ಲೂರಿ ಸೀತಾರಾಮರಾಜು ಮುಂತಾದವರು ಆಜಾದಿ ಆಂದೋಲನವನ್ನು ಕಾಡುಗಳಲ್ಲೂ ನಡೆಸಿ ಮಾತೃಭೂಮಿಗಾಗಿ ಜೀವ ತೆತ್ತರು. ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರು, ರವೀಂದ್ರನಾಥ ಟಾಗೋರ್‌ ಮುಂತಾದ ಮಹಾಪುಷರುರು ದೇಶದ ಪ್ರತಿ ಮೂಲೆಯಲ್ಲೂ ದೇಶದ ಚೇತನವನ್ನು ಜಾಗೃತಗೊಳಿಸಿದರು.

ಇಂದು ಸ್ವಾತಂತ್ರ್ಯದ ಅಮೃತ ಮಹತ್ಸವವನ್ನು ದೇಶದ ಪ್ರತಿ ಮೂಲೆಯಲ್ಲೂ ಆಚರಿಸುತ್ತಿದ್ದಾರೆ. ಇಷ್ಟೊಂದು ವ್ಯಾಪಕವಾಗಿ ದೇಶಕ್ಕಾಗಿ ನಮ್ಮ ಜನತೆ ಸ್ಪಂದಿಸುತ್ತಿರುವುದು ಮೊದಲ ಘಟನೆಯಾಗಿದೆ. ಮರೆತ ಮಹಾವೀರರನ್ನೂ ಜನ ನೆನಪಿಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ವಿಭಜನೆಯ ದುಃಖದ ಸ್ಮೃತಿಯೂ ನಮ್ಮಲ್ಲಿದೆ.

೭೫ ವರ್ಷಗಳ ಯಾತ್ರೆ ಸುಖದುಃಖಗಳಿಂದ, ಕಷ್ಟನಷ್ಟಗಳಿಂದ ಕೂಡಿದೆ. ಇದೆಲ್ಲದರ ನಡುವೆ ನಮ್ಮ ಪ್ರಜೆಗಳು ಸೋಲುಂಡಿಲ್ಲ. ಸಂಕಲ್ಪದಿಂದ ಅಲುಗಾಡಿಲ್ಲ. ನೂರಾರು ವರ್ಷಗಳ ಗುಲಾಮಿ ಭಾವನೆ ದೇಶದ ಭಾವನೆಯನ್ನೇ ತುಳಿದಿತ್ತು. ಅದರ ಜತೆಗೆ ಛಲ ಕೂಡ ಇತ್ತು. ದೇಶವನ್ನು ಇಂಗ್ಲಿಷರು ಹತಾಶಗೊಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು, ಸ್ವತಂತ್ರಗೊಂಡರೆ ದೇಶ ಅಂಧಕಾರ ಯುಗದತ್ತ ನಡೆಯಲಿದೆ ಎಂದಿದ್ದರು. ಆದರೆ ಹಿಂದೂಸ್ತಾನದ ಮಣ್ಣಿನಲ್ಲಿರುವ ಛಲ, ಸಾಮರ್ಥ್ಯ ಅವರಿಗೆ ಗೊತ್ತಿರಲಿಲ್ಲ.

ಇಂದು ಹಸಿವು, ಭಯೋತ್ಪಾದನೆ, ಯುದ್ಧದ ಸೋಲು, ಛದ್ಮಯುದ್ಧ, ಪ್ರಾಕೃತಿಕ ವಿಕೋಪಗಳ ನಡುವೆಯೂ ಭಾರತ ಸಾಧಿಸಿ ತೋರಿಸಿದೆ. ಸಫಲತೆ ವಿಫಲತೆಗಳು ಸಾಕಷ್ಟು ಬಂದಿವೆ. ಇದೆಲ್ಲದರ ನಡುವೆಯೂ ಭಾರತ ಮುಂದೆ ನಡೆದಿದೆ. ಭಾರತದ ವಿವಿಧತೆ ನಮ್ಮ ಶಕ್ತಿಯಾಗಿದೆ. ಭಾರತದ ಆಂತರಿಕ ಸಾಮರ್ಥ್ಯ ಜಗತ್ತಿಗೆ ತಿಳಿದಿಲ್ಲ. ಭಾರತದ ನೆಲ ಪ್ರಜಾಪ್ರಭುತ್ವದ ಜನನಿಯಾಗಿದೆ. ಇದು ಮದರ್‌ ಆಫ್‌ ಡೆಮಾಕ್ರಸಿ. ಇಲ್ಲಿ ಯಾವಾಗಿನವರೆಗೆ ಪ್ರಜಾಪ್ರಭುತ್ವವಿರುತ್ತದೆಯೋ ಅಲ್ಲಿಯವರೆಗೂ ಯಾವ ಸಂಕಟವೂ ನಮ್ಮನ್ನು ಕದಲಿಸಲಾರದು.

ಪಂಚಪ್ರಾಣಗಳು

ಮುಂದಿನ 25 ವರ್ಷಗಳನ್ನು ನಾವು ಸಂಕಲ್ಪ ಶಕ್ತಿಯಿಂದ ಮುನ್ನಡೆಯಬೇಕಾಗಿದೆ. ಅದಕ್ಕಾಗಿ ನಮ್ಮ ಪಂಚಪ್ರಾಣಗಳನ್ನು ಕೇಂದ್ರೀಕರಿಸಬೇಕಾಗಿದೆ. ಅತ್ಯುನ್ನತ ಭಾರತ, ಗುಲಾಮಿ ಮನಸ್ಥಿತಿ ನಿವಾರಣೆ, ದೇಶದ ಪರಂಪರೆಯ ಬಗ್ಗೆ ಹೆಮ್ಮೆ, ವಿವಿಧತೆಯಲ್ಲಿ ಏಕತೆ, ನಾಗರಿಕ ಕರ್ತವ್ಯದಲ್ಲಿ ನಿಷ್ಠೆಗಳು ನಮ್ಮ ಪಂಚಪ್ರಾಣಗಳಾಗಬೇಕು.

ನಮ್ಮ ದೇಶದ ಚರಿತ್ರೆ ಅತ್ಯುನ್ನತವಾದುದು. ನಾವು ಶ್ರೇಷ್ಠವಾದುದರತ್ತ ಗಮನ ಕೊಡಬೇಕು. ನಮ್ಮ ಕನಸು ದೊಡ್ಡದಾಗಿದ್ದರೆ ನಮ್ಮ ಸಾಧನೆಯೂ ದೊಡ್ಡದಾಗುತ್ತದೆ. ದೇಶ ಮುಖ್ಯ ಎಂಬ ಸಂಕಲ್ಪ ನಮ್ಮದಾಗಬೇಕು. ದೇಶ ನೂರಾರು ವರ್ಷಗಳಿಂದ ಇಂಗ್ಲಿಷರಿಂದ ಆಳಿಸಿಕೊಂಡು ಗುಲಾಮಿ ಮನಸ್ಥಿತಿ ನಿವಾರಣೆಯಾಗಬೇಕು. ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಇದ್ದಾಗಲಷ್ಟೇ ನಾವು ಮುಂದುವರಿಯಲು ಸಾಧ್ಯ. ನಮ್ಮ ಏಕತೆ ನಮ್ಮ ಶಕ್ತಿಯಾಗಿದೆ. ನಾಗರಿಕ ಕರ್ತವ್ಯವು ಪ್ರಧಾನಿಗೂ ಒಂದೇ, ಮುಖ್ಯಮಂತ್ರಿಗೂ ಒಂದೇ, ಸಾಮಾನ್ಯ ನಾಗರಿಕನಿಗೂ ಒಂದೇ ಆಗಿದೆ. ಎಲ್ಲರೂ ಅದನ್ನು ಪಾಲಿಸಬೇಕಿದೆ.

ಕುಟುಂಬ ರಾಜಕಾರಣದ ಕಪಿಮುಷ್ಟಿ

ಭ್ರಷ್ಟಾಚಾರದಿಂದ ದೇಶವನ್ನು ಮುಕ್ತಗೊಳಿಸೋಣ. ದೇಶದ ಹಣವನ್ನು ನುಂಗಿಹಾಕಿ ಓಡಿಹೋಗಿರುವವರನ್ನು ಹಿಡಿದು ತಂದು ಉತ್ತರದಾಯಿಗಳನ್ನಾಗಿಸಬೇಕಿದೆ. ಅದಕ್ಕೆ ನನಗೆ ನೆರವಾಗಿ ಎಂದು ಕೈಜೋಡಿಸಿ ಕೇಳಿಕೊಳ್ಳುತ್ತೇನೆ. ಕುಟುಂಬ ರಾಜಕಾರಣ ನಮ್ಮ ದೇಶದ ಅನೇಕ ಸಂಸ್ಥೆಗಳನ್ನು ಹಾಳುಗೆಡವಿದೆ, ನಮ್ಮ ದೇಶದ ಪ್ರತಿಭೆಗಳು ಕುಂಠಿತವಾಗಿವೆ. ಭ್ರಷ್ಟಾಚಾರಕ್ಕೂ ಕಾರಣವಾಗಿದೆ. ರಾಜಕೀಯದಲ್ಲಿ ದೇಶಕ್ಕೆ ಕುಟುಂಬ ರಾಜಕಾರಣದಿಂದ ಮುಕ್ತಿ ಕೊಡಿಸಬೇಕು. ಕುಟುಂಬ ರಾಜಕಾರಣಕ್ಕೆ ಕುಟುಂಬದ ಸೌಖ್ಯ ಮಾತ್ರ ಮುಖ್ಯವಾಗಿರುತ್ತದೆ, ದೇಶದ ಹಿತವಲ್ಲ.

ಇಷ್ಟು ದಶಕಗಳ ಅನುಭವ ಮುಂದಿನ 25 ವರ್ಷಗಳ ಅಮೃತಕಾಲದತ್ತ ನಮ್ಮನ್ನು ಮುನ್ನಡೆಸಲಿದೆ. ದೇಶದ ಜನಮನ ಆಕಾಂಕ್ಷಿಯಾಗಿದೆ. ಇದು ದೇಶದ ಮಹಾ ಶಕ್ತಿ. ಹಿಂದೂಸ್ತಾನದ ಪ್ರತಿ ಮೂಲೆಯಲ್ಲೂ ಜನಮನದಲ್ಲೂ ಹೊಸ ಬದುಕಿನ ಆಕಾಂಕ್ಷೆಗಳು ಹೊಮ್ಮುತ್ತಿವೆ. ಪ್ರಜೆ ಬದಲಾವಣೆಯನ್ನು ಆಶಿಸಿದ್ದಾನೆ. ಆತ ಗತಿ, ಪ್ರಗತಿ ಬಯಸಿದ್ದಾನೆ. ಮುಂದಿನ ಅಮೃತಕಾಲದತ್ತ ನಾವೆಲ್ಲ ಮುನ್ನಡೆಯೋಣ ಎಂದು ಪ್ರಧಾನಿ ನುಡಿದರು.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ನೆಹರೂರನ್ನು ಸ್ಮರಿಸಿದ ಪ್ರಧಾನಿ ಮೋದಿ; ಕರ್ನಾಟಕ ಬಿಜೆಪಿ ಎಡವಿತಾ?

Exit mobile version