ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಚುನಾವಣೆ ರ‍್ಯಾಲಿ ಇರಲಿ, ರಕ್ಷಾಬಂಧನವೇ ಇರಲಿ, ಎಲ್ಲಿಯೇ ಮಕ್ಕಳನ್ನು ಕಂಡರೂ ಅವರೊಂದಿಗೆ ಮೋದಿ ಬೆರೆಯುತ್ತಾರೆ. ಅವರ ಜತೆ ಒಂದಷ್ಟು ಕಾಲ ಕಳೆಯುತ್ತಾರೆ. ಕಿವಿ ಹಿಂಡಿ ಚೇಷ್ಟೆ ಮಾಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ನರೇಂದ್ರ ಮೋದಿ ಅವರು ಬುಧವಾರ (ಜೂನ್ 26) ಸಂಸತ್ತಿನಲ್ಲಿ (Parliament) ಇಬ್ಬರು ಬಾಲಕಿಯರೊಂದಿಗೆ ಕಾಲ ಕಳೆದಿದ್ದಾರೆ. ಸಂಸತ್ ಅಧಿವೇಶನ, ಪ್ರತಿಪಕ್ಷಗಳ ಗಲಾಟೆ, ನೂತನ ಸ್ಪೀಕರ್ ಆಯ್ಕೆಯ ಭರಾಟೆಯ ಮಧ್ಯೆಯೂ ಮೋದಿ ಅವರು ಇಬ್ಬರು ಪುಟಾಣಿಗಳೊಂದಿಗೆ ಕಾಲ ಕಳೆದಿದ್ದಾರೆ.
ಹೌದು, ಸಂಸತ್‌ನಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ಇಬ್ಬರು ಪುಟಾಣಿಗಳೊಂದಿಗೆ ಮೋದಿ ನಲಿದಾಡಿದ್ದಾರೆ. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಇಬ್ಬರು ಮೊಮ್ಮಕ್ಕಳು ಸಂಸತ್‌ಗೆ ಆಗಮಿಸಿದ್ದಾರೆ. ಅವರು ನರೇಂದ್ರ ಮೋದಿ ಅವರ ಕಚೇರಿಗೆ ತೆರಳಿದ್ದು, ಇಬ್ಬರೂ ಆಗಮಿಸುತ್ತಲೇ ಮೋದಿ ಅವರು ನಗುತ್ತಲೇ ಅವರನ್ನು ಸ್ವಾಗತಿಸಿದ್ದಾರೆ. ಇನ್ನು, ಪುಟಾಣಿಗಳೂ ಅಷ್ಟೇ, ಮೋದಿ ಅವರ ಎದುರು ದೇಶಭಕ್ತಿ ಗೀತೆಯನ್ನು ಒಟ್ಟಿಗೆ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ಇಬ್ಬರೂ ಒಂದೇ ಬಣ್ಣದ ದಿರಸು ಧರಿಸಿದ್ದು ವಿಶೇಷವಾಗಿತ್ತು. ಇಬ್ಬರು ಪುಟಾಣಿಗಳೊಂದಿಗೆ ಮೋದಿ ಸಮಯ ಕಳೆದ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
#WATCH | Prime Minister Narendra Modi receives two special visitors at his office today in Parliament. pic.twitter.com/mMgRBKlakB
— ANI (@ANI) June 26, 2024
18ನೇ ಲೋಕಸಭೆಯ ಮೊದಲ ಅಧಿವೇಶನದ ಮೂರನೇ ದಿನವಾದ ಬುಧವಾರ ಹಲವು ಮಹತ್ವದ ಘಟನೆಗಳಿಗೆ ಸಂಸತ್ ಸಾಕ್ಷಿಯಾಯಿತು. ಸ್ಪೀಕರ್ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಓಂ ಬಿರ್ಲಾಅವರು ಎರಡನೇ ಬಾರಿ ಲೋಕಸಭೆಯ ಸ್ಪೀಕರ್ ಆಗಿ ಚುನಾಯಿತರಾಗಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಪರಸ್ಪರ ಹಸ್ತಾಲಾಘವ ಮಾಡಿದ ಅಪರೂಪದ ಕ್ಷಣಗಳಿಗೆ ಇಡೀ ಸದನವೇ ಸಾಕ್ಷಿ ಆಯಿತು.
ಓಂ ಬಿರ್ಲಾ ಅವರು ಸ್ಪೀಕರ್ ಆಗಿ ಚುನಾಯಿತರಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕರ ರಾಹುಲ್ ಗಾಂಧಿ ತಮ್ಮ ತಮ್ಮ ಸ್ಥಾನಗಳಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸ್ವಾಗತಿಸಿದರು. ಈ ವೇಳೆ ಪರಸ್ಪರ ಶೇಕ್ ಹ್ಯಾಂಡ್ ಮಾಡಿಕೊಂಡರು. ಬಳಿಕ ಓಂ ಬಿರ್ಲಾ ಅವರನ್ನು ಅವರ ಸೀಟ್‌ವರೆಗೆ ಕರೆದೊಯ್ದರು. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಓಂ ಬಿರ್ಲಾ ಅವರು ಬಹುಮತ ಪಡೆದುಕೊಂಡರು. ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು. ಬಳಿಕ ಹಲವು ನಾಯಕರು ಅನುಮೋದಿಸಿದರು. ಧ್ವನಿ ಮತದ ಮೂಲಕ ಸದಸ್ಯರು ಮತ ಚಲಾಯಿಸಿದರು.
ಇದನ್ನೂ ಓದಿ: Parliament Sessions: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸದನ; ಶೇಕ್ ಹ್ಯಾಂಡ್ ಮಾಡಿದ ಪ್ರಧಾನಿ ಮೋದಿ, ರಾಹುಲ್