ಗುಂಡಿನ ದಾಳಿಗೆ ಬಲಿಯಾದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಸಾವಿಗೆ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ” ನನ್ನ ಪ್ರೀತಿಯ ಗೆಳೆಯನನ್ನು ಕಳೆದುಕೊಂಡೆʼ ಎಂದು ಭಾವುಕರಾಗಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಪ್ರಧಾನಿ ಮೋದಿಯವರ ವಿಶೇಷ ಲೇಖನದ ಭಾವಾನುವಾದ ಇಲ್ಲಿದೆ.
” ಜಪಾನ್‌ನ ಮೇರು ನಾಯಕ, ಜಾಗತಿಕ ಮಟ್ಟದ ಮುತ್ಸದ್ಧಿ, ಭಾರತ ಮತ್ತು ಜಪಾನ್ ನಡುವಣ ಮೈತ್ರಿಯ ಅಪ್ರತಿಮ ರೂವಾರಿ ಶಿಂಜೊ ಅಬೆ ಇನ್ನು ಮುಂದೆ ನಮ್ಮ ನಡುವೆ ಇಲ್ಲ. ಜಪಾನ್ ಮತ್ತು ಜಗತ್ತು ಒಬ್ಬ ಶ್ರೇಷ್ಠ ಹಾಗೂ ದೂರದೃಷ್ಟಿಯ ಮಹೋನ್ನತ ನಾಯಕನನ್ನು ಹಾಗೂ ನಾನು ನನ್ನ ಪ್ರೀತಿಯ ಗೆಳೆಯನನ್ನು ಕಳೆದುಕೊಂಡಿದ್ದೇನೆ.
೨೦೦೭ರಲ್ಲಿ ಮೊದಲ ಸಲ ಭೇಟಿ
ನಾನು ಶಿಂಜೊ ಅಬೆ ಅವರನ್ನು ೨೦೦೭ರಲ್ಲಿ ಮೊದಲ ಸಲ ಭೇಟಿಯಾಗಿದ್ದೆ. ಆಗ ಗುಜರಾತಿನ ಮುಖ್ಯಮಂತ್ರಿಯಾಗಿ ಜಪಾನ್‌ಗೆ ಪ್ರವಾಸ ಕೈಗೊಂಡಿದ್ದೆ. ಅಲ್ಲಿಂದ ಆರಂಭವಾದ ನಮ್ಮ ಗೆಳೆತನ ಇಲ್ಲಿಯವರೆಗೂ ಅನನ್ಯವಾಗಿತ್ತು. ಕಚೇರಿಗಳ ಅಧಿಕೃತ ಶಿಷ್ಟಾಚಾರಗಳಿಗೂ ಮಿಗಿಲಾದ ಆತ್ಮೀಯ ಸ್ನೇಹ ನಮ್ಮಲ್ಲಿತ್ತು.
ಶಿಂಜೊ ಅಬೆ ಅವರ ಜತೆ ಜಪಾನ್‌ನ ಕ್ಯೋಟೊದಲ್ಲಿನ ಐತಿಹಾಸಿಕ ತೋಜಿ ದೇವಾಲಯಕ್ಕೆ ಭೇಟಿ, ಶಿನ್‌ಕಾನ್‌ಸೆನ್‌ನಲ್ಲಿನ ರೈಲು ಪ್ರಯಾಣ, ಗುಜರಾತಿನಲ್ಲಿ ಸಬರಮತಿ ಆಶ್ರಮ ಸಂದರ್ಶನ, ಕಾಶಿಯ ಗಂಗಾರತಿ, ಟೋಕಿಯೋದಲ್ಲಿ ಚಹಾ ಕಾರ್ಯಕ್ರಮ ಅವಿಸ್ಮರಣೀಯ ನೆನಪುಗಳಾಗಿ ಉಳಿದಿವೆ.
ಶಿಂಜೊ ಅಬೆ ಅವರು ಮೌಂಟ್ ಫುಜಿ ಪರ್ವತದ ತಪ್ಪಲಿನ ಯಮನಾಶಿಯಲ್ಲಿರುವ ತಮ್ಮ ನಿವಾಸಕ್ಕೂ ನನ್ನನ್ನು ಆಹ್ವಾನಿಸಿ ನೀಡಿದ್ದ ಆದರಣೀಯ ಆತಿಥ್ಯ ಸವಿ ನೆನಪಾಗಿದೆ.
ಪ್ರತಿ ಸಲ ಅವರೊಡನೆ ಮಾತನಾಡುವಾಗಲೂ ಬೌದ್ಧಿಕವಾಗಿ ಪ್ರೇರೇಪಿಸುತ್ತಿದ್ದರು. ಸದಾ ಹಲವಾರು ಹೊಸ ಪರಿಕಲ್ಪನೆಗಳನ್ನು ಹರವಿಡುತ್ತಿದ್ದರು. ಸಂಶೋಧನೆ, ಆರ್ಥಿಕತೆ, ವಿಜ್ಞಾನ- ತಂತ್ರಜ್ಞಾನ, ಉದ್ಯಮ, ಸಂಸ್ಕೃತಿ, ವಿದೇಶಾಂಗ ನೀತಿ ಮತ್ತು ಇತರ ಹತ್ತು ಹಲವು ವಿಷಯಗಳನ್ನು ಚರ್ಚಿಸುತ್ತಿದ್ದರು.
೨೦೦೭ ಮತ್ತು ೨೦೧೨ರಲ್ಲಿ ಅವರು ಜಪಾನಿನ ಪ್ರಧಾನಿಯಾಗಿ ಇರದಿದ್ದ ಸಂದರ್ಭದಲ್ಲೂ ಮತ್ತು ತೀರಾ ಇತ್ತೀಚಿನವರೆಗೂ ನಮ್ಮ ಗೆಳೆತನ ಮತ್ತಷ್ಟು ವೃದ್ಧಿಸಿತ್ತು.
ಭಾರತ-ಜಪಾನ್ ಐತಿಹಾಸಿಕ ಒಪ್ಪಂದಗಳ ರೂವಾರಿ
ಗುಜರಾತ್‌ನ ಆರ್ಥಿಕತೆಯ ಅಭಿವೃದ್ಧಿಗೆ ಶಿಂಜೊ ಅಬೆ ನನಗೆ ಪ್ರೇರಣೆಯಾಗಿದ್ದರು. ಜಪಾನ್ ಮತ್ತು ಗುಜರಾತ್ ನಡುವೆ ಬಾಂಧವ್ಯ ಗಟ್ಟಿಯಾಗಲು ಅವರು ಕಾರಣರಾಗಿದ್ದರು. ಬಳಿಕ ಭಾರತ-ಜಪಾನ್ ಮೈತ್ರಿಯ ಅಭೂತಪೂರ್ವ ಸುಧಾರಣೆಗೂ ಅವಕಾಶ ಲಭಿಸಿತು. ಇದು ಕೇವಲ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳಿಗೆ ಸೀಮಿತವಾಗಿರಲಿಲ್ಲ. ಬದಲಿಗೆ ಸಮಗ್ರವಾಗಿತ್ತು. ಉಭಯ ದೇಶಗಳ ಪ್ರಾದೇಶಿಕ ಭದ್ರತೆಯ ದೃಷ್ಟಿಯಿಂದಲೂ ಇದು ಅತ್ಯಂತ ಮಹತ್ವದ್ದಾಗಿತ್ತು. ಭಾರತ ಮತ್ತು ಜಪಾನ್ ನಡುವೆ ನಾಗರಿಕ ಪರಮಾಣು ಒಪ್ಪಂದವನ್ನು ಹಮ್ಮಿಕೊಳ್ಳುವಲ್ಲಿ ಶಿಂಜೊ ಅಬೆ ಮಹತ್ವದ ಪಾತ್ರ ವಹಿಸಿದ್ದರು. ಜಪಾನ್‌ನಲ್ಲಿ ಇದಕ್ಕೆ ಸಂಕೀರ್ಣ ಸವಾಲುಗಳಿದ್ದರೂ ಅಬೆ ಸಫಲರಾಗಿದ್ದರು.
ಭಾರತದ ಬುಲೆಟ್ ರೈಲಿಗೆ ಸಹಕಾರ
ಭಾರತಕ್ಕೆ ಹೈ ಸ್ಪೀಡ್ ರೈಲು ಯೋಜನೆಯನ್ನು ತರುವ ನಿಟ್ಟಿನಲ್ಲಿಯೂ ಅವರ ಕೊಡುಗೆ ಅಪಾರ. ಆಧುನಿಕ ಭಾರತದ ನಿರ್ಮಾಣಕ್ಕೆ ಅವರ ಪೂರ್ಣ ಬೆಂಬಲ, ಹಾರೈಕೆಗಳಿತ್ತು. ಭಾರತ-ಜಪಾನ್ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಶಿಂಜೊ ಅಬೆ ಅವರಿಗೆ ೨೦೨೧ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಲಾಯಿತು.
ದೂರದೃಷ್ಟಿಯ ಮುತ್ಸದ್ಧಿ
ಶಿಂಜೊ ಅಬೆ ಅವರಿಗೆ ಜಗತ್ತಿನ ಸಂಕೀರ್ಣ ಪರಿವರ್ತನೆ, ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ಆಳವಾದ ಒಳನೋಟ ಇತ್ತು. ಸಮಕಾಲೀನತೆಯನ್ನೂ ಮೀರಿದ ದೂರದೃಷ್ಟಿ ಅವರಲ್ಲಿತ್ತು. ರಾಜಕೀಯ, ಸಮಾಜ, ಆರ್ಥಿಕತೆ, ಅಂತಾರಾಷ್ಟ್ರೀಯ ಬಾಂಧವ್ಯ, ಪರಿಸರ ಸಂರಕ್ಷಣೆ ಇತ್ಯಾದಿ ವಿಚಾರಗಳಲ್ಲಿ ಪ್ರಬುದ್ಧ ಒಳನೋಟವನ್ನು ಹೊಂದಿದ್ದರು. ಜಪಾನ್‌ನ ಅಭ್ಯುದಯದಲ್ಲೂ ಅದು ಪ್ರತಿಫಲಿಸಿದೆ.
ಸಂಸತ್ತಿನಲ್ಲಿ ಭಾಷಣ
ಭಾರತದ ಸಂಸತ್ತಿನಲ್ಲಿ ೨೦೦೭ರಲ್ಲಿ ಶಿಂಜೊ ಅಬೆ ಅವರು ಮಾಡಿದ ಐತಿಹಾಸಿಕ ಭಾಷಣ ಅವಿಸ್ಮರಣೀಯ. ಇಂಡೊ-ಪೆಸಿಫಿಕ್ ವಲಯದಲ್ಲಿ ಸಮಕಾಲೀನ ರಾಜಕೀಯ, ವ್ಯೂಹಾತ್ಮಕ ಬದಲಾವಣೆ, ಆರ್ಥಿಕತೆಯ ವಾಸ್ತವಿಕತೆಗಳ ಬಗ್ಗೆ ವಿವರಿಸಿದ್ದರು. ಈ ವಲಯದ ಮುಂಬರುವ ಭವಿಷ್ಯದ ಬಗ್ಗೆಯೂ ಮಾತನಾಡಿದ್ದರು.
ಇಂಡೊ-ಪೆಸಿಫಿಕ್ ಭದ್ರತೆಗೆ ಕೊಡುಗೆ
ಕ್ವಾಡ್, ಆಸಿಯಾನ್ ಒಕ್ಕೂಟ, ಇಂಡೊ-ಪೆಸಿಫಿಕ್ ಸಾಗರ ಉಪಕ್ರಮ, ಏಷ್ಯಾ-ಆಫ್ರಿಕಾ ಕಾರಿಡಾರ್, ವಿಪತ್ತು ನಿರ್ವಹಣೆ ಮೂಲಸೌಕರ್ಯ ಇತ್ಯಾದಿ ಅಂತಾರಾಷ್ಟ್ರೀಯ ಯೋಜನೆಗಳಿಗೆ ಅಬೆ ಅವರ ಕೊಡುಗೆ ಅಪಾರ. ಜಪಾನ್‌ನ ವ್ಯೂಹಾತ್ಮಕ ಸಂಬಂಧಗಳನ್ನು ಅವರು ಬಲಪಡಿಸಿದರು. ಜತೆಗೆ ಇಂಡೊ-ಪೆಸಿಫಿಕ್ ವಲಯದಲ್ಲಿ ಸಂಪರ್ಕ, ಮೂಲಸೌಕರ್ಯ, ಭದ್ರತೆ, ಅಭಿವೃದ್ಧಿಗೆ ಶ್ರಮಿಸಿದರು.
ಕಳೆದ ಮೇನಲ್ಲಿ ಕೊನೆಯ ಭೇಟಿ
ಈ ವರ್ಷ ಮೇನಲ್ಲಿ ಜಪಾನಿಗೆ ಹೋಗಿದ್ದಾಗ ಅಬೆ ಅವರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ಎಂದಿನಂತೆ ಉತ್ಸಾಹ, ಲವಲವಿಕೆ, ವಿದ್ವತ್‌ಪೂರ್ಣ ಮಾತುಕತೆ, ಕುಶಲೋಪರಿ ನಡೆದಿತ್ತು. ಭಾರತ-ಜಪಾನ್ ಬಾಂಧವ್ಯ ವೃದ್ಧಿಗೆ ಮತ್ತಷ್ಟು ಸಮಾಲೋಚನೆಯಾಗಿತ್ತು. ಅವರಿಗೆ ವಿದಾಯ ಹೇಳುವಾಗ, ಇದೇ ಕೊನೆಯ ಭೇಟಿಯಾಗುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.
ಶಿಂಜೊ ಅಬೆ ಅವರ ಪ್ರಬುದ್ಧ ವ್ಯಕ್ತಿತ್ವ, ಬುದ್ಧಿಮತ್ತೆ, ವಿನಯವಂತಿಕೆ, ವಿವೇಕ, ಸ್ನೇಹಪರತೆ, ಮಾರ್ಗದರ್ಶನಕ್ಕಾಗಿ ಸದಾ ಋಣಿಯಾಗಿರುತ್ತೇನೆ. ನನ್ನ ಆತ್ಮೀಯ ಮಿತ್ರನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಭಾರತದ ಜತೆ ನಿಕಟ ಬಾಂಧವ್ಯ
ಅಬೆ ಅವರು ಹೃದಯಪೂರ್ವಕವಾಗಿ ಭಾರತವನ್ನು ಅಪ್ಪಿಕೊಂಡಿದ್ದರು. ಮನಸಾರೆಯಾಗಿ ಉಭಯ ದೇಶಗಳ ಒಳಿತಿಗೋಸ್ಕರ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ನಾವೂ ಶೋಕತಪ್ತರಾಗಿದ್ದೇವೆ. ಅವರ ಬದುಕು ದುರಂತದಲ್ಲಿ ಅಂತ್ಯವಾಗಿರಬಹುದು. ಆದರೆ ಅವರು ಹಾಕಿಕೊಟ್ಟ ಅಮೂಲ್ಯ ಮೌಲ್ಯಗಳ ಪರಂಪರೆ ಶಾಶ್ವತವಾಗಿ ಉಳಿಯಲಿದೆ.
ಭಾರತದ ಜನತೆಯ ಪರವಾಗಿ ಮತ್ತು ನನ್ನ ವೈಯಕ್ತಿಕವಾಗಿ ಶ್ರೀಮತಿ ಅಕಿ ಅಬೆ ಮತ್ತು ಅವರ ಕುಟುಂಬಕ್ಕೆ ಸಂತಾಪವನ್ನು ಸಲ್ಲಿಸುತ್ತಿದ್ದೇನೆ. ಓಂ ಶಾಂತಿ.