ನವದೆಹಲಿ: ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (Sikhs For Justice) ಸಂಘಟನೆಯ ಉಗ್ರ, ವಿದೇಶದಲ್ಲಿ ಕುಳಿತು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಆಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜಪ್ತಿ ಮಾಡಿದ ಬೆನ್ನಲ್ಲೇ ಖಲಿಸ್ತಾನಿ ಉಗ್ರರು ದೆಹಲಿಯಲ್ಲಿ ಗೋಡೆಗಳ ಮೇಲೆ ಖಲಿಸ್ತಾನ ಪರ ಘೋಷಣೆಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲ, ರಸ್ತೆ ಬದಿಯ ಗೋಡೆಗಳ ಮೇಲೆ ಖಲಿಸ್ತಾನ ಪರ ಘೋಷಣೆ ಬರೆದಿರುವ ಕೃತ್ಯದ ಹೊಣೆಯನ್ನು ಗುರುಪತ್ವಂತ್ ಸಿಂಗ್ ಪನ್ನುನ್ ಹೊತ್ತುಕೊಂಡಿದ್ದಾನೆ.
ದೆಹಲಿಯ ಕಾಶ್ಮೀರಿ ಗೇಟ್ ಫ್ಲೈಓವರ್ ಮೇಲೆ ಬುಧವಾರ ರಾತ್ರಿ (ಸೆಪ್ಟೆಂಬರ್ 27) ಖಲಿಸ್ತಾನಿ ಉಗ್ರರು ರಸ್ತೆ ಬದಿಯ ಗೋಡೆಗಳ ಮೇಲೆ “ದೆಹಲಿ ಖಲಿಸ್ತಾನ ಆಗುತ್ತದೆ” (ದೆಹಲಿ ಬನೇಗಾ ಖಲಿಸ್ತಾನ) ಎಂಬ ಘೋಷಣೆಗಳನ್ನು ಬರೆಯಲಾಗಿದೆ. ಇದರ ಕುರಿತು ವಿಡಿಯೊ ಬಿಡುಗಡೆ ಮಾಡಿರುವ ಗುರುಪತ್ವಂತ್ ಸಿಂಗ್ ಪನ್ನುನ್, ಹೊಣೆಯನ್ನು ತಾನೇ ಹೊತ್ತುಕೊಂಡಿದ್ದಾನೆ. ಆ ಮೂಲಕ ಮತ್ತೊಂದು ಉದ್ಧಟತನ ಪ್ರದರ್ಶಿಸಿದ್ದಾನೆ. ಮತ್ತೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಜಿ20 ಶೃಂಗಸಭೆ ಆರಂಭಕ್ಕೂ ಮುನ್ನ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಖಲಿಸ್ತಾನ ಪರ ಘೋಷಣೆಗಳನ್ನು ಬರೆಯಲಾಗಿತ್ತು.
Pro-Khalistan graffiti found written on the wall at Delhi's Kashmiri Gate flyover on 27th September has been removed. Delhi Police have registered a case in the matter. pic.twitter.com/TKd3Ij4WFk
— ANI (@ANI) September 28, 2023
ಆಸ್ತಿ ಜಪ್ತಿ ಬಳಿಕ ಪನ್ನುನ್ ಕುತಂತ್ರ
ಕೆಲ ದಿನಗಳ ಹಿಂದಷ್ಟೇ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಆಸ್ತಿಯನ್ನು ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚಂಡಿಗಢದಲ್ಲಿರುವ ಒಂದು ನಿವಾಸ, ಅಮೃತಸರದ ಖಾನ್‌ಕೋಟ್‌ನಲ್ಲಿರುವ ಕೃಷಿ ಜಮೀನು ಹಾಗೂ ಪನ್ನು ಗ್ರಾಮದಲ್ಲಿರುವ ಕೃಷಿ ಜಮೀನನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಾರ್ವಜನಿಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ನಿವಾಸಕ್ಕೆ ಎನ್‌ಐಎ ನೋಟಿಸ್ ಅಂಟಿಸಿದೆ. ಜಮೀನಿನಲ್ಲೂ ಜಪ್ತಿ ಕುರಿತು ನೋಟಿಸ್ ಅಂಟಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಪನ್ನುನ್ ಕುತಂತ್ರದಲ್ಲಿ ತೊಡಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: India Canada Row: ಕೆನಡಾದ ಹಿಂದೂಗಳಿಗೆ ಖಲಿಸ್ತಾನ್ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಜೀವಬೆದರಿಕೆ
ಕೆನಡಾ, ಬ್ರಿಟನ್, ಅಮೆರಿಕದಲ್ಲಿ ಪ್ರತ್ಯೇಕವಾದದ ವಿಷ ಬೀಜ ಬಿತ್ತುತ್ತಿರುವ ಸಿಖ್ಸ್ ಫಾರ್ ಜಸ್ಟಿಸ್ ಉಗ್ರ ಸಂಘಟನೆಯ ಸಂಸ್ಥಾಪಕರಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ಕೂಡ ಒಬ್ಬನಾಗಿದ್ದಾನೆ. ಭಾರತದಲ್ಲಿ ಕೂಡ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಕಾರಣ 2019ರಲ್ಲಿ ಕೇಂದ್ರ ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಇದನ್ನು ನಿಷೇಧಿಸಲಾಗಿದೆ. ಈಗ ಅದರ ಸಂಘಟನೆಯ ಉಗ್ರನ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.