Site icon Vistara News

Israel Palestine War: ಭಾರತದಲ್ಲಿ ಪ್ಯಾಲೆಸ್ತೀನ್ ಪರ-ವಿರುದ್ಧ ‘ಸೈಬರ್ ವಾರ್’!

cyber crime

ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ (Israel Palestine war) ಮಧ್ಯೆ ಕ್ಷಿಪಣಿ, ಬಾಂಬ್‌ ದಾಳಿಗಳು ನಡೆಯುತ್ತಿದ್ದರೆ, ಇತ್ತ ಪ್ಯಾಲೆಸ್ತೀನ್ ಪರ (Pro Palestine) ಮತ್ತು ಭಾರತ ಪರ (Pro Indian) ಹ್ಯಾಕರ್ಸ್‌ ‘ಸೈಬರ್ ವಾರ್’ (Cyber War) ನಡೆಸುತ್ತಿದ್ದಾರೆ! ಭಾರತವು ಇಸ್ರೇಲ್‌ಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿರುವ ಪ್ಯಾಲೆಸ್ತೀನ್ ಬೆಂಬಲಿಗರು, ದಿಲ್ಲಿ ಸರ್ಕಾರ, ಏಮ್ಸ್ ಸೇರಿದಂತೆ ಅನೇಕ ಸರ್ಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಪ್ರಯತ್ನ ಮಾಡಿದ್ದಾರೆ.. ಇತ್ತ, ಭಾರತೀಯ ಬೆಂಬಲಿಗ ಹ್ಯಾಕರ್ಸ್, ಪಾಲೆಸ್ತೀನ್‌ದ ಜಾಲತಾಣಗಳನ್ನು ಹ್ಯಾಕ್ ಮಾಡಿದ್ದಾರೆ. ಕಳೆದ 48 ಗಂಟೆಗಳಲ್ಲಿ ಪ್ಯಾಲೆಸ್ತೀನ್ ಬೆಂಬಲಿಗರು, ಭಾರತದ ಹಲವು ವೆಬ್ಸೈಟ್‌ಗಳನ್ನು ಹ್ಯಾಕ್ ಮಾಡುವ ಪ್ರಯತ್ನ ನಡೆಸಿತ್ತು, ಅವುಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಗಿದೆ.

ಸೋಮವಾರ ದೆಹಲಿ ಸರ್ಕಾರ ಮತ್ತು ಏಮ್ಸ್ ಜಾಲತಾಣಗಳ ಮೇಲೆ ದಾಳಿಯ ಪ್ರಯತ್ನದ ನಂತರ, ಭಾರತ ಜತೆ ನಂಟು ಹೊಂದಿರುವ ಸೈಬರ್ ಗುಂಪುಗಳು ಪ್ಯಾಲೇಸ್ಟಿನಿಯನ್ ಸೈಬರ್ ವ್ಯವಸ್ಥೆಗಳ ವಿರುದ್ಧ ತಮ್ಮ ಆಕ್ರಮಣವನ್ನು ಹೆಚ್ಚಿಸಿವೆ. ಅಲ್ಲದೇ, ಪ್ಯಾಲೆಸ್ತೀನ್ ನ್ಯಾಷನಲ್ ಬ್ಯಾಂಕ್ ಮತ್ತು ನ್ಯಾಷನಲ್ ಟೆಲಿಕಮ್ಯುನಿಕೇಷನ್ಸ್ ಕಂಪನಿಯ ಪೋರ್ಟಲ್‌ಗಳಲ್ಲದೆ ಹಮಾಸ್ ವೆಬ್‌ಸೈಟ್ ಅನ್ನು ಟಾರ್ಗೆಟ್ ಮಾಡಿವೆ. ಹಮಾಸ್ ಜಾಲತಾಣವನ್ನು ಹ್ಯಾಕ್ ಮಾಡಿದ ಬೆಂಬಲಿಗರು, ಗಣನೀಯ ಅವಧಿಯವರೆಗೆ ನಿಷ್ಕ್ರಿಯಗೊಳಿಸಿದ್ದನ್ನು ಮೂಲಗಳು ಖಚಿತಪಡಿಸಿವೆ.

ಈ ಸುದ್ದಿಯನ್ನೂ ಓದಿ: ಮೋದಿಗೆ ಇಸ್ರೇಲ್ ಪಿಎಂ ಫೋನ್ ಕಾಲ್!, ಇಸ್ರೇಲ್‌ಗೇ ಬೆಂಬಲ ಎಂದ ಭಾರತ

ಘೋಸ್ಟ್ಸ್ ಆಫ್ ಪ್ಯಾಲೆಸ್ತೀನ್ ಎಂಬ ಹೆಸರಿನ ಪ್ಯಾಲೇಸ್ತೀನಿಯನ್ ಗುಂಪು, ಭಾರತ ಸೇರಿದಂತೆ ಇಸ್ರೇಲ್ ಮತ್ತು ಅದರ ಮಿತ್ರರಾಷ್ಟ್ರಗಳ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಲು ಇತರ ದೇಶಗಳ ಹ್ಯಾಕರ್‌ಗಳನ್ನು ಆಹ್ವಾನಿಸಿತು. ಇವರ ಕರೆಗೆ, ಲಿಬಿಯನ್ ಘೋಸ್ಟ್ ಎಂದು ಕರೆಯಲಾಗುವ ಇತರ ಹಲವಾರು ಹ್ಯಾಕರ್ಸ್ ಗುಂಪು ಪ್ರತಿಕ್ರಿಯಿಸಿದ್ದು, ಅವರೊಂದಿಗೆ ಸೇರಿವೆ ಎಂದು ಟೆಲಿಗ್ರಾಮ್ ಚಾನೆಲ್ ಹೇಳಿದೆ.

ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ಸಂಸ್ಥೆಯು ಎಚ್ಚರ ನೀಡುತ್ತಿದ್ದಂತೆ, ಸೈಬರ್ ಘಟಕಗಳು ತಮ್ಮ ಸುರಕ್ಷತೆಯನ್ನು ಹೆಚ್ಚಿಸಿಕೊಂಡಿವೆ. ಡಿಆರ್‌ಡಿಒ ಮತ್ತು ಸಿಇಆರ್‌ಟಿ-ಐಎನ್ ನ ಸೈಬರ್ ವಿಭಾಗವು ದಾಳಿಯನ್ನು ತಡೆಯುವ ಕಾರ್ಯವನ್ನು ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version