Site icon Vistara News

ಪ್ರವಾದಿ ನಿಂದನೆ ಗಲಭೆ: ಯುಪಿಯಲ್ಲಿ ದೊಂಬಿಕಾರರ ಮನೆ ಬುಲ್‌ಡೋಜ್‌, ಪ.ಬಂಗಾಳದಲ್ಲಿ ಅಂತರ್ಜಾಲ ಕಟ್

violence

ನವ ದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆ ಪ್ರತಿಭಟಿಸಿ ಉತ್ತರ ಪ್ರದೇಶದಲ್ಲಿ ಹಿಂಸಾಚಾ ಭುಗಿಲೆದ್ದಿದೆ. ಹಿಂಸಾಚಾರ ನಡೆಸಿದ ಹಲವು ಆರೋಪಿಗಳನ್ನು ಸಹರಾನ್‌ಪುರ ಪೊಲೀಸರು ಬಂಧಿಸಿದ್ದು, ಅವರಲ್ಲಿ ಇಬ್ಬರ ಮನೆಗಳನ್ನು ಬುಲ್ಡೋಜರ್‌ ಮೂಲಕ ಧ್ವಂಸಗೊಳಿಸಿದ್ದಾರೆ. ಈ ಕುರಿತ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಆರೋಪಿ ಮುಝಮ್ಮಿಲ್ ಮತ್ತು ಅಬ್ದುಲ್ ವಾಕಿರ್ ಎಂಬವರ ಅಕ್ರಮ ನಿವಾಸಗಳನ್ನು ಪೊಲೀಸರು ಮತ್ತು ಪುರಸಭೆಯ ತಂಡ ಧ್ವಂಸಗೊಳಿಸಿದರು. “ನಿನ್ನೆ ನಡೆದ ಘಟನೆಯಲ್ಲಿ ಆರೋಪಿಗಳ ಅಕ್ರಮ ಆಸ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಸಹರಾನ್‌ಪುರ ಆಡಳಿತ, ಅಭಿವೃದ್ಧಿ ಪ್ರಾಧಿಕಾರ, ಮ್ಯಾಜಿಸ್ಟ್ರೇಟ್, ಕಂದಾಯ ತಂಡ, ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪೊಲೀಸರ ಜಂಟಿ ತಂಡವನ್ನು ಮಾಡಲಾಗಿದೆ ಎಂದು ಸಹರಾನ್‌ಪುರ ಎಸ್‌ಎಸ್‌ಪಿ ಆಕಾಶ್ ತೋಮರ್ ತಿಳಿಸಿದ್ದಾರೆ.

ಕೆಡವಲಾದ ಕಟ್ಟಡಗಳು ಹಿಂಸಾಚಾರದ ಪ್ರಮುಖ ಆರೋಪಿ ಜಾಫರ್ ಹಯಾತ್ ಹಶ್ಮಿಗೆ ಸೇರಿದ್ದಾಗಿದೆ. ಹಿಂಸಾಚಾರ ನಡೆದ ಸ್ಥಳದಿಂದ 3 ಕಿಮೀ ದೂರದಲ್ಲಿರುವ ಕಾನ್ಪುರದ ಸ್ವರೂಪ್‌ನಗರ ಪ್ರದೇಶದಲ್ಲಿೀತ ನೆಲೆಸಿದ್ದು, ಜಾಫರ್ ಹಯಾತ್ ಹಶ್ಮಿಯ ಹತ್ತಿರದ ಸಂಬಂಧಿ ಮೊಹಮ್ಮದ್ ಇಶ್ತಿಯಾಕ್ ಎಂಬಾತನ ಮಾಲೀಕತ್ವದ ಮನೆ ಸಹ ಕೆಡವಲಾಯಿತು.

ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಯಾವುದೇ ವ್ಯಕ್ತಿ ಅಥವಾ ಗುಂಪುಗಳ ವಿರುದ್ಧ ದರೋಡೆಕೋರ ಕಾಯಿದೆಯಡಿ ಪ್ರಕರಣ ದಾಖಲಿಸುವುದು, ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು, ಖಾಸಗಿ ಮತ್ತು ಸಾರ್ವಜನಿ ಆಸ್ತಿಗೆ ಮಾಡಿದ ಹಾನಿಗಳಿಗೆ ಅವರಿಂದ ಪಾವತಿ ಖಚಿತಪಡಿಸಿಕೊಳ್ಳುವುದು ಸೇರಿದಂತೆ ಕಠಿಣ ಕ್ರಮವನ್ನು ಪೊಲೀಸರು ತೆಗೆದುಕೊಳ್ಳಲಿದ್ದಾರೆ ಎಸ್‌ಎಸ್‌ಪಿ ಹೇಳಿದ್ದಾರೆ.

ಕಾನ್ಪುರ ಹಿಂಸಾಚಾರ

ಶುಕ್ರವಾರದ ಪ್ರಾರ್ಥನೆಯ ನಂತರ ಕಾನ್ಪುರದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಎರಡು ಸಮುದಾಯಗಳ ಸದಸ್ಯರು ಇಟ್ಟಿಗೆಗಳನ್ನು ಎಸೆದುಕೊಂಡಿದ್ದರು. ಸುಳ್ಳು ಹಾಗೂ ದ್ವೇಷದ ವಿಚಾರಗಳನ್ನು ಹರಡಿದ್ದಕ್ಕಾಗಿ ಎರಡು ಫೇಸ್‌ಬುಕ್ ಖಾತೆಗಳು ಮತ್ತು ಮೂರು ಟ್ವಿಟರ್ ಹ್ಯಾಂಡಲ್‌ಗಳ ಹಿಂದಿನ ವ್ಯಕ್ತಿಗಳ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮೊರಾದಾಬಾದ್ ಪೊಲೀಸರು 25 ಆರೋಪಿಗಳನ್ನು 14 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಸಹರಾನ್‌ಪುರದಲ್ಲಿ 64 ಜನರನ್ನು ಬಂಧಿಸಲಾಗಿದೆ ಮತ್ತು 200ಕ್ಕೂ ಹೆಚ್ಚು ಗಲಭೆಕೋರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರವಾದಿ ನಿಂದನೆ: ಅಲ್‌ ಖೈದಾ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಹೈ ಅಲರ್ಟ್‌

ಪಶ್ಚಿಮ ಬಂಗಾಳದಲ್ಲಿ ಇಂಟರ್‌ನೆಟ್‌ ಶಟ್‌ಡೌನ್

ಸುಳ್ಳು ಹಾಗೂ ದ್ವೇಷದ ಪ್ರಚೋದನೆಗಳನ್ನು ಹರಡದಂತೆ ತಡೆಯಲು ಪಶ್ಚಿಮ ಬಂಗಾಳದ ಎರಡು ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಅನ್ನು ನಿರ್ಭಂಧಿಸಲಾಗಿದೆ. ಹೌರಾದಲ್ಲಿ ಜೂನ್ 13ರವರೆಗೆ ಇಂಟರ್ನೆಟ್ ಕ್ಲ್ಯಾಂಪ್‌ಡೌನ್ ಈಗಾಗಲೇ ಜಾರಿಯಲ್ಲಿದೆ. ಇದೀಗ ಮುರ್ಷಿದಾಬಾದ್‌ನ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಜೂನ್ 14ರವರೆಗೆ ಸ್ಥಗಿತಗೊಳಿಸಿದೆ.

ಹೌರಾ ಜಿಲ್ಲೆ ಶುಕ್ರವಾರ ಹಿಂಸಾಚಾರದಿಂದ ತತ್ತರಿಸಿತ್ತು. ಪೊಲೀಸರೊಂದಿಗೆ ಹಿಂಸಾತ್ಮಕ ಘರ್ಷಣೆ ನಡೆಸಿದ್ದ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು ಮತ್ತು ಸಾರ್ವಜನಿಕ ಆಸ್ತಿ ಸುಲಿಗೆ ಮಾಡಿದ್ದರು. ಜೂನ್ 15ರವರೆಗೆ ಉಲುಬೇರಿಯಾ, ಡೊಮ್ಜೂರ್ ಮತ್ತು ಪಂಚ್ಲಾ ಜಿಲ್ಲೆಗಳ ಹಲವು ಭಾಗಗಳಲ್ಲಿ ಸೆಕ್ಷನ್ 144 ವಿಧಿಸಲಾಗಿದೆ.

ಈ ನಡುವೆ ಗಲಭೆಪೀಡಿತ ಹೌರಾ ಜಿಲ್ಲೆಗೆ ಭೇಟಿ ನೀಡಲು ಮುಂದಾಗಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ್‌ ಮುಜುಂದಾರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಮತಾ ಸರ್ಕಾರ ಗಲಭೆಕೋರರಿಗೆ ಆಶ್ರಯ ನೀಡಿದೆ ಎಂದು ಬಿಜೆಪಿ ಅಧ್ಯಕ್ಷರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪ್ರವಾದಿ ಅವಹೇಳನ ವಿವಾದ| ರಾಂಚಿಯಲ್ಲಿ ಇಬ್ಬರು ಪ್ರತಿಭಟನಾಕಾರರು ಗುಂಡಿಗೆ ಬಲಿ

Exit mobile version