Site icon Vistara News

Agnipath | ಅಗ್ನಿಪಥ್ ಯೋಜನೆಯಲ್ಲಿ ಉದ್ಯೋಗ ಭದ್ರತೆಯಿಲ್ಲವೆಂದು ಹಲವೆಡೆ ಪ್ರತಿಭಟನೆ, ರೈಲಿಗೆ ಬೆಂಕಿ

Agnipath

ನವ ದೆಹಲಿ: ಕೇಂದ್ರ ಸರಕಾರದಿಂದ ಇತ್ತೀಚೆಗೆ ಘೋಷಣೆಯಾದ ಅಗ್ನಿಪಥ್‌ (Agnipath) ಯೋಜನೆಯ ವಿರುದ್ಧ ಇದೀಗ ಪ್ರತಿಭಟನೆ ಶುರುವಾಗಿದೆ. ಬಿಹಾರದಲ್ಲಿ ಕಲ್ಲುತೂರಾಟ ನಡೆಸಿ ಹಿಂಸಾಚಾರ ಪ್ರತಿಭಟನೆ ಜರುಗಿದ್ದು ಕಂಡುಬಂದಿದೆ. ನೂರಾರು ಮಂದಿ ಸೇರಿ ನಡೆಸಿದ ಪ್ರತಿಭಟನೆಯಲ್ಲಿ ರೈಲಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಿಹಾರ್‌ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಕೆಲವೆಡೆ ʼಈ ಯೋಜನೆಯಲ್ಲಿ ಉದ್ಯೋಗ ಭದ್ರತೆಯಿಲ್ಲʼ ಎಂದು ಅನೇಕರು ಧ್ವನಿ ಎತ್ತಿ ಪ್ರತಿಭಟನೆ ನಡೆಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆ ಕಂಡುಬಂದಿದೆ.

ಪ್ರತಿಭಟನೆಗೆ ಕಾರಣವೇನು?

ಇತ್ತೀಚೆಗೆ ಸೇನಾ ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರದಿಂದ ನೂತನ ಯೋಜನೆಯನ್ನು ಪರಿಚಯಿಸಲಾಗಿದೆ. ಸೇನೆ ಸೇರಲು ಮಹದಾಸೆ ಇಟ್ಟುಕೊಂಡ ಯುವಜರಿಗೆ ಇದೊಂದು ಸುವರ್ಣವಕಾಶ. ಈ ಯೋಜನೆಯಡಿ ನಾಲ್ಕು ವರ್ಷಗಳ ಕಾಲ ಸೇನೆಗೆ ನೇಮಕ ಮಾಡಿಕೊಳ್ಳಲಾಗುವುದು. ಹೀಗೆ ಅಗ್ನಿಪಥ್‌ ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ. ನಂತರ, ಈ ಅವಧಿಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ 25%ರಷ್ಟು ಅಗ್ನಿವೀರನ್ನು ಶಾಶ್ವತ ಸೇವೆಗೆ ಸೇನೆಯಲ್ಲಿ ಭರ್ತಿಮಾಡಿಕೊಳ್ಳಲಾಗುತ್ತದೆ.

ಆದರೆ, 4 ವರ್ಷಗಳ ಅವಧಿ ಮುಗಿಸಿ ಸೇನೆಗೆ ಭರ್ತಿ ಆಗದಿದ್ದರೆ ಮುಂದೇನು ಎಂಬುದನ್ನು ಈ ಯೋಜನೆಯಲ್ಲಿ ಸ್ಪಷ್ಟಪಡಿಸಿಲ್ಲ ಎಂದು ಪ್ರತಿಭಟನೆ ಶುರುವಾಗಿದೆ. 4 ವರ್ಷಗಳ ಬಳಿಕ ಕೇವಲ 25%ರಷ್ಟು ಮಂದಿ ಮಾತ್ರ ಶಾಶ್ವತ ಸೇವೆಗೆ ಅರ್ಹರಾಗುತ್ತಾರೆ. ಉಳಿದವರಿಗೆ ಉದ್ಯೋಗ ಭದ್ರತೆಯಾಗಲೀ ಅಥವಾ ಪೆನ್ಷನ್‌ ವ್ಯವಸ್ಥೆಯಾಗಲೀ ಇಲ್ಲಿ ಉಲ್ಲೇಖಿಸಿಲ್ಲ. ಹಾಗಾದರೆ, ಉಳಿದವರ ಮುಂದಿನ ಭವಿಷ್ಯದ ಗತಿ ಏನು ಎಂದು ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.

ಎಲ್ಲೆಲ್ಲಿ ಪ್ರತಿಭಟನೆ?

ಬಿಹಾರ: ಬಕ್ಸರ್‌ ಜಿಲ್ಲೆಯ ರೈಲ್ವೆ ನಿಲ್ದಾಣದ ಹಳಿಯಲ್ಲಿ ನೂರಾರು ಯುವಕರು ಸೇರಿ ಪ್ರತಿಭಟನೆ ನಡೆಸಿದರು. ಇದರಿಂದ ಪಟಣಾಗೆ ತೆರಳುತ್ತಿದ್ದ ರೈಲು ಸುಮಾರು 30 ನಿಮಿಷ ಕಾಲ ತಡವಾಯಿತು. ಪ್ರಯಾಣಿಕರು ಪ್ರಯಾಸ ಪಡಬೇಕಾಯಿತು. ರೈಲ್ವೆ ಅಧಿಕಾರಿ ದೀಪಕ್‌ ಕುಮಾರ್‌ ಹಾಗೂ ರಮಶಿಶ್‌ ಪ್ರಸಾದ್‌ ರೈಲು ಸಂಚಾರಕ್ಕೆ ತೊಂದರೆ ಮಾಡಬೇಡಿ ಎಂದು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರು. ಆದರೆ, ಇದೀಗ ನೂರಾರು ಯುವಕರು ಸೇರಿ ರೈಲಿಗೆ ಬೆಂಕಿ ಹಚ್ಚಿ ಹಿಂಸಾಚಾರ ನಡೆಸಿದ್ದಾರೆ. ಪೊಲೀಸರು ಅಶ್ರುವಾಯು ಮೂಲಕ ಈ ಹಿಂಸಾಚಾರ ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಮುಜಫರ್‌ಪುರ್‌ನ ʼಚಕ್ಕರ್‌ ಮೈದಾನʼದ ಸುತ್ತ ಸೇನಾ ಉದ್ಯೋಗ ಆಕಾಂಕ್ಷಿಗಳು ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ಜೈಪುರ: ಅಜ್ಮೀರ್‌ ಹಾಗೂ ದೆಹಲಿ ಹೈವೆಯಲ್ಲಿ ನೂರಾರು ಜನ ಸೇರಿ ಪ್ರತಿಭಟಿಸಿದರು. ಹೆದ್ದಾರಿಯನ್ನು ಸಂಪೂರ್ಣ ಬ್ಲಾಕ್‌ ಮಾಡಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ʼಅಗ್ನಿಪಥ್‌ ಯೋಜನೆಯನ್ನು ಜಾರಿಗೊಳಿಸಬಾರದು. ಈ ಹಿಂದೆ ಸೇನೆಗೆ ನೇಮಕಾತಿ ನಡೆಯುತ್ತಿದ್ದ ಮಾದರಿಯಲ್ಲಿಯೇ ಮುಂದೆಯೂ ಭರ್ತಿ ನಡೆಯಬೇಕುʼ ಎಂದು ಜನರು ಸರಕಾರವನ್ನು ಒತ್ತಾಯಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರಸ್ತೆಯನ್ನು ತೆರವುಗೊಳಿಸಿದರು. ಪ್ರತಿಭಟನೆ ನಡೆಸಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ 10 ಜನರನ್ನು ಬಂಧಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Agnipath : ಸೇನೆ ಸೇರಲು ಯುವಕರಿಗೆ ಸುವರ್ಣ ಅವಕಾಶ; ಅಗ್ನಿಪಥ್‌ ಯೋಜನೆಗೆ ಕೇಂದ್ರದ ಅನುಮೋದನೆ

Exit mobile version