Site icon Vistara News

MISSION SUCCESS: ಸಿಂಗಾಪುರದ ಮೂರು ಉಪಗ್ರಹಗಳನ್ನು ಕಕ್ಷೆ ಸೇರಿಸಿ ಬೀಗಿದ ISRO

ಚೆನ್ನೈ: ಸಿಂಗಾಪುರದ ಮೂರು ಉಪಗ್ರಹಗಳನ್ನು ಹೊತ್ತು ನಭಕ್ಕೇರಿದ ಪಿಎಸ್‌ಎಲ್‌ವಿ ಸಿ-೫೩ ಭಾರತೀಯ ಬಾಹ್ಯಾಕಾಶ ಸಂಶೋಧನಾ ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ಬರೆಯಿತು. ಗುರುವಾರ ಸಂಜೆ ೬.೦೨ಕ್ಕೆ ಶ್ರೀ ಹರಿ ಕೋಟಾದ ಉಪಗ್ರಹ ಉಡಾವಣಾ ಕೇಂದ್ರದಿಂದ ಬಂಗಾರದ ಬಣ್ಣದ ಧೂಮವನ್ನು ಚಿಮ್ಮುತ್ತಾ ನಭೋಮಂಡಲವನ್ನು ಭೇದಿಸುತ್ತಾ ಸಾಗಿದ ಕ್ಷಣವನ್ನು ಇಸ್ರೊದ ವಿಜ್ಞಾನಿಗಳು ಅತ್ಯಂತ ಭಾವುಕರಾಗಿ ವೀಕ್ಷಿಸಿ ಹೆಮ್ಮೆಯಿಂದ ಬೀಗಿದರು. ಇದು ಇಸ್ರೋ ಪಿಎಸ್‌ಎಲ್‌ವಿ ಮೂಲಕ ನಡೆಸಿದ ೫೫ನೇ ಉಡಾವಣೆಯಾಗಿದ್ದು, ಎರಡನೇ ಲಾಂಚ್‌ ಪ್ಯಾಡ್‌ನಿಂದ ನಡೆದ ೧೬ನೇ ಹಾರಾಟವಾಗಿದೆ.

ಸುಮಾರು ೨೫ ಗಂಟೆಗಳ ಕೌಂಟ್‌ಡೌನ್‌ ಬಳಿಕ ಸರಿಯಾಗಿ ೬.೦೨ಕ್ಕೆ ಆಕಾಶಕ್ಕೆ ನೆಗೆದ ಪಿಎಸ್‌ಎಲ್‌ವಿ ವಾಹಕ, ಸ್ವಲ್ಪವೇ ಹೊತ್ತಿನಲ್ಲಿ ಮೂರು ಉಪಗ್ರಹಗಳನ್ನು ನಿಗದಿತ ಕಕ್ಷೆಯಲ್ಲಿ ಅತ್ಯಂತ ಯಶಸ್ವಿಯಾಗಿ ಇಳಿಸಿ ಬಳಿಕ ತನ್ನ ನಾಲ್ಕನೇ ಹಂತದೊಂದಿಗೆ ಮತ್ತಷ್ಟು ದೂರ ಸಾಗಿ ಸ್ಥಿರಗೊಂಡಿತು. ಬೆಂಗಳೂರು, ಶ್ರೀಹರಿಕೋಟ ಮತ್ತು ಪೋರ್ಟ್‌ ಬ್ಲೇರ್‌ನಲ್ಲಿರುವ ಸಂವಹನ ಕೇಂದ್ರಗಳಿಗೆ ಯಶಸ್ವಿ ಕಾರ್ಯಾಚರಣೆಯನ್ನು ಅತ್ಯಂತ ಜತನದಿಂದ ಗಮನಿಸುತ್ತಿವೆ.

ಎರಡೂವರೆ ವರ್ಷದ ಬಳಿಕ ಸಾರ್ವಜನಿಕರಿಗೆ ಅವಕಾಶ

ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಪಿಎಸ್‌ಎಲ್‌ವಿ ಸಿ-೫೩ಯ ಸುತ್ತಲಿನ ಉಕ್ಕಿನ ಕೋಟೆಗಳು ನಿಧಾನವಾಗಿ ದೂರ ಸರಿಯುತ್ತಾ ಭೂಮಿಯಿಂದ ಒಡೆದಂತೆ ವಾಹಕ ನೌಕೆಯು ಬೆಂಕಿಯುಗುಳುತ್ತಾ ಆಕಾಶಮುಖಿಯಾಗಿ ಸಾಗುವ ದೃಶ್ಯವನ್ನು ಸಾವಿರಾರು ಜನರು ನೇರವಾಗಿ ವೀಕ್ಷಿಸಿದರು. ೨೦೧೯ರ ಬಳಿಕ ಇದೇ ಮೊದಲ ಬಾರಿಗೆ ಇಸ್ರೋ ಉಡಾವಣಾ ಪ್ರಕ್ರಿಯೆಯನ್ನು ಶ್ರೀ ಹರಿ ಕೋಟಾದ ವೈಜ್ಞಾನಿಕ ಕ್ಷೇತ್ರದಲ್ಲೇ ನಿಂತು ನೋಡುವ ಅವಕಾಶವನ್ನು ಕಲ್ಪಿಸಿತ್ತು. ಇಸ್ರೋ ಪಾಲಿಗೆ ಇದು ೨೦೨೨ರ ಮೊದಲ ಉಡಾವಣಾ ಸಂಭ್ರಮ. ೨೦೧೯ರ ಡಿಸೆಂಬರ್‌ ೧೧ರಂದು ಪಿಎಸ್‌ಎಲ್‌ವಿ ಸಿ೪೮ ಮೂಲಕ ರಿಸ್ಯಾಟ್‌-೨ ಬಿಆರ್‌೧ ಉಪಗ್ರಹವನ್ನು ಭೂಕಕ್ಷೆಗೆ ಉಡಾಯಿಸುವ ಕ್ಷಣವನ್ನು ಕಣ್ಣಾರೆ ಕಾಣಲು ಮಾಧ್ಯಮಗಳು ಮತ್ತು ಆಯ್ದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು.

ಎರಡನೇ ವಾಣಿಜ್ಯ ಹಾರಾಟ
ಜಗತ್ತಿನಲ್ಲಿ ಪ್ರಖ್ಯಾತಿ ಪಡೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೊ, ಪಿಎಸ್‌ಎಲ್‌ವಿಯನ್ನು ಬಳಸಿಕೊಂಡು ಖಾಸಗಿ ಉಪಗ್ರಹಗಳ ಉಡಾವಣೆಗಾಗಿ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್)‌ ಎಂಬ ವಾಣಿಜ್ಯ ವಿಭಾಗವನ್ನು ಆರಂಭಿಸಿದ ಬಳಿಕ ನಡೆದ ಎರಡನೇ ವಾಣಿಜ್ಯಾತ್ಮಕ ಉಡಾವಣೆ ಇದಾಗಿದೆ.

ಏನೇನು ಹೊತ್ತು ಹೋಯಿತು ಪಿಎಸ್‌ಎಲ್‌ವಿ?
ಡಿಎಸ್‌-ಇಒ, ನ್ಯೂಸಾರ್‌ ಮತ್ತು ಸ್ಕೂಬ್‌-೧ ಇವು ಪಿಎಸ್‌ಎಲ್‌ವಿ ಹೊತ್ತು ಸಾಗಿದ ಮೂರು ಉಪಗ್ರಹಗಳು. ಡಿಎಸ್‌-ಇಒ ಮತ್ತು ನ್ಯೂಸಾರ್‌ ಎನ್ನುವುದು ಸಿಂಗಪುರಕ್ಕೆ ಸೇರಿದ, ಕೊರಿಯಾದ ಸ್ಟಾರ್ಟೆಕ್‌ ಕಂಪನಿ ತಯಾರಿಸಿಕೊಟ್ಟ ಉಪಗ್ರಹ. ೨.೮ ಕೆಜಿ ತೂಗುವ ಸ್ಕೂಬ್‌-೧ ಸಿಂಗಾಪುರದ ನನ್ಯಾಂಗ್‌ ಟೆಕ್ನಾಲಜಿಕಲ್‌ ಯುನಿವರ್ಸಿಟಿಯಲ್ಲಿ ತಯಾರಾದ ಉಪಗ್ರಹ.

ಏನೇನು ವಿಶೇಷ?
ಡಿಎಸ್‌-ಇಒ ಉಪಗ್ರಹವು ೦.೫ ಮಿ.ಮೀ.ನಷ್ಟು ಸೂಕ್ಷ್ಮವಾದ ಸಣ್ಣ ಚಿತ್ರಗಳನ್ನು ಆಕಾಶದಿಂದಲೇ ತೆಗೆಯಬಲ್ಲ ಸಾಮರ್ಥ್ಯವನ್ನು ಹೊಂದಿರುವ ಎಲೆಕ್ಟ್ರೋ ಆಪ್ಟಿಕ್‌ ಕ್ಯಾಮೆರಾವನ್ನು ಹೊತ್ತಿದೆ.
ನ್ಯೂಸಾರ್‌ ಇದು ಸಿಂಗಾಪುರದ ಮೊದಲ ಸಣ್ಣ ವಾಣಿಜ್ಯ ಉಪಗ್ರಹ. ಇದು ದಿನದ ೨೪ ಗಂಟೆಯೂ, ಎಲ್ಲ ಹವಾಮಾನದಲ್ಲೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸಬಲ್ಲ ಶಕ್ತಿಯನ್ನು ಹೊಂದಿರುವ ಸ್ಯಾಟಲೈಟ್‌.
ಸ್ಕೂಬ್‌-೧ ಇದು ಕಾಲೆಜು ವಿದ್ಯಾರ್ಥಿಗಳು ತಯಾರಿಸುವ ಉಪಗ್ರಹ ಸರಣಿ (ಎಸ್‌ಎಸ್‌ಎಸ್‌)ಐಲ್ಲಿ ಮೊದಲ ಉಪಗ್ರಹ. ಇದನ್ನು ಎಸ್‌೩-೧ ಎಂದು ಹೆಸರಿಸಲಾಗಿದೆ. ಎನ್‌ಟಿಯುನ ಉಪಗ್ರಹ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ತರಬೇತಿ ಅವಧಿಯಲ್ಲಿ ತಯಾರಿಸಿದ ಉಪಗ್ರಹವಿದು.

ಹೊಸ ಪ್ರಯೋಗ
ಇದರ ಜತೆಗೆ ಪಿಎಸ್‌ಎಲ್‌ವಿ ಕಕ್ಷಾ ಪ್ರಯೋಗಾತ್ಮಕ ಮಾದರಿ(ಪಿಒಇಎಂ)ಯನ್ನು ಕೂಡ ಉಡಾಯಿಸಲಾಗಿದೆ. ಇದು ಭೂಮಿಯನ್ನು ಒಂದು ಸ್ಥಿರವಾದ ಕಕ್ಷೆಯಲ್ಲಿ ಸ್ಥಾಪಿತವಾಗಿ ಸುತ್ತಲಿದೆ. ಪಿಎಸ್‌ಎಲ್‌ವಿ ವಾಹಕದ ನಾಲ್ಕನೇ ಭಾಗದಲ್ಲಿ ಇದನ್ನು ಸ್ಥಾಪಿಸಲಾಗಿದೆ.(ಅಂದರೆ ವಾಹಕ ಮೇಲೇರುವಾಗ ಸುಡದೆ ಉಳಿಯುವ ಕೊನೆಯ ಹಂತ). ಸಾಮಾನ್ಯವಾಗಿ ಈ ಭಾಗವನ್ನು ಯಾರೂ ಬಳಸಿಕೊಳ್ಳುವುದಿಲ್ಲ. ಇದೇ ಮೊದಲ ಬಾರಿಗೆ ಇಸ್ರೋ ಅದು ಒಂದು ಸುಸ್ಥಿರ ವೇದಿಕೆಯಾಗಿ ಕಕ್ಷೆಯಲ್ಲಿ ಸುತ್ತುವಂತೆ ವ್ಯವಸ್ಥೆ ಮಾಡಿದೆ.

ವರ್ಷದ ಎರಡನೇ ಉಡಾವಣೆ
ಅಂದ ಹಾಗೆ ಇಸ್ರೊ ಆಯೋಜಿಸಿದ ಈ ವರ್ಷದ ಎರಡನೇ ಪಿಎಸ್‌ಎಲ್‌ವಿ ಉಡಾವಣೆ ಇದು. ಕಳೆದ ಮಾರ್ಚ್‌ನಲ್ಲಿ ಪಿಎಸ್‌ಎಲ್‌ವಿ-ಸಿ೫೨ ವಾಹಕದ ಮೂಲಕ ಇಸ್ರೋ ಇಒಎಸ್‌-೦೪ ಎಂಬ ಭೂ ಸರ್ವೇಕ್ಷಣಾ ಉಪಗ್ರಹ ಮತ್ತು ಅದೇ ಮಾದರಿಯ ಇತರ ಎರಡು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೇರಿಸಿತ್ತು.


Exit mobile version