Site icon Vistara News

Pulwama Attack: ಪುಲ್ವಾಮಾ ದಾಳಿಗೆ 5 ವರ್ಷ; ಹುತಾತ್ಮ ಯೋಧರಿಗೆ ಸೆಲ್ಯೂಟ್

Pulwama Attack

Pulwama Attack 5th Anniversary: Tribute to martyred soldiers and reflections on India’s military strength

ಐದು ವರ್ಷಕ್ಕಿಂತ ಮೊದಲು ಪ್ರತಿ ಬಾರಿ ಫೆಬ್ರವರಿ 14 ಬಂತೆಂದರೆ ಪ್ರೇಮಿಗಳ ದಿನ ಮಾತ್ರ ನೆನಪಾಗುತ್ತಿತ್ತು. ಆದರೆ, ಈ 5 ವರ್ಷಗಳಲ್ಲಿ ಪ್ರೇಮಿಗಳ ದಿನ ಬಂತೆಂದರೆ ಸಾಕು, ಮನಸ್ಸಲ್ಲೇನೋ ಕಸಿವಿಸಿಯಾಗುತ್ತದೆ. ಮನಸ್ಸು ಸರಿಯಾಗಿ 5 ವರ್ಷ ಹಿಂದಕ್ಕೆ ಅಂದರೆ, 2019ರ ಫೆಬ್ರವರಿ 14ಕ್ಕೆ ಹೋಗುತ್ತದೆ.‌ ಅದರಲ್ಲೂ, ಜಮ್ಮು-ಕಾಶ್ಮೀರದ ಪುಲ್ವಾಮಾಕ್ಕೇ ಹೋಗುತ್ತದೆ. ಭಾರತದ ವೀರ ಯೋಧರ ಮೇಲೆ ನಡೆದ ಉಗ್ರರ ದಾಳಿ, 40 ಯೋಧರು ಹುತಾತ್ಮರಾದ ರೀತಿ, ಪುಲ್ವಾಮಾದ ಹೆದ್ದಾರಿ ಮೇಲೆ ಹರಿದ ಯೋಧರ ನೆತ್ತರು, ಛಿದ್ರ ಛಿದ್ರವಾಗಿ ಬಿದ್ದ ದೇಹದ ಭಾಗಗಳು, ಸುಟ್ಟು ಕರಕಲಾದ ವಾಹನಗಳ ದೃಶ್ಯವೇ ಕಣ್ಣಿಗೆ ರಾಚುತ್ತದೆ.

ಹೌದು, ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿ ನಡೆದು ಇಂದಿಗೆ 5 ವರ್ಷ ತುಂಬಿದೆ. ದೇಶದ ಯೋಧರ ಮೇಲೆ ನಡೆದ ಭೀಕರ ದಾಳಿ ನಡೆದು 5 ವರ್ಷ ಕಳೆದರೂ ಇಂದಿಗೂ ದಾಳಿಯ ಕರಾಳತೆಯು ಮನಸ್ಸಿನಿಂದ ಮಾಸಿಲ್ಲ. ಹಾಗಾದರೆ, ಸರಿಯಾಗಿ 5 ವರ್ಷದ ಹಿಂದೆ ಏನಾಯಿತು? ದಾಳಿಯ ಬಳಿಕ ಭಾರತವು ಪಾಕಿಸ್ತಾನದ ಉಗ್ರರಿಗೆ ನೀಡಿದ ತಿರುಗೇಟು ಹೇಗಿತ್ತು? ಕುಕೃತ್ಯದ ಬಳಿಕದ ನಾಲ್ಕು 5 ಏನೇನಾಯಿತು ಎಂಬುದರ ಮಾಹಿತಿ ಇಲ್ಲಿದೆ. ‌

ಅಷ್ಟಕ್ಕೂ ಅಂದು ಏನಾಯಿತು?

ಅದು 2019ರ ಫೆಬ್ರವರಿ 14. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಇದೇ ವೇಳೆ 78 ಬಸ್‌ಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ಯ 2,500 ಯೋಧರು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದರು. ಆಗಷ್ಟೇ ಮಧ್ಯಾಹ್ನ 3 ಗಂಟೆಯಾಗಿತ್ತು. ಸೇನೆಯ ವಾಹನಗಳು ಪುಲ್ವಾಮಾ ಮಾರ್ಗವಾಗಿ ತೆರಳುತ್ತಿದ್ದವು. ಕಾಶ್ಮೀರದವನೇ ಆದ, ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯ ಆದಿಲ್‌ ಅಹ್ಮದ್‌ ದರ್‌ ಎಂಬ 22 ವರ್ಷದ ಯುವಕನು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ತುಂಬಿದ ಮಾರುತಿ ಇಕೊ ಕಾರನ್ನು ಸೇನೆಯ ವಾಹನಗಳಿಗೆ ಗುದ್ದಿಸಿದೆ. ಕೆಲವೇ ಕ್ಷಣಗಳಲ್ಲಿ ಸ್ಫೋಟವಾಗಿ, ಆಗಸದ ತುಂಬೆಲ್ಲ ಹೊಗೆ ಆವರಿಸಿ, ಯೋಧರು ಹುತಾತ್ಮರಾದರು. ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತು.

ಬೆಚ್ಚಿಬಿದ್ದ ದೇಶ, ಕಟ್ಟೆಯೊಡೆದ ಆಕ್ರೋಶ

ಪುಲ್ವಾಮಾ ದಾಳಿಯು ದೇಶವನ್ನೇ ಬೆಚ್ಚಿಬೀಳಿಸುವ ಜತೆಗೆ ಜನರ ಆಕ್ರೋಶ ಕಟ್ಟೆಯೊಡೆಯುವಂತೆ ಮಾಡಿತು. ಭದ್ರತಾ ವೈಫಲ್ಯದ ಕುರಿತು ಕೇಂದ್ರ ಸರ್ಕಾರವನ್ನು ಜನ ಟೀಕಿಸಿದರು. ಹುತಾತ್ಮ ಯೋಧರಿಗೆ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು. ನರೇಂದ್ರ ಮೋದಿ ಅವರು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು, ಯೋಧರ ಬಲಿದಾನ ವ್ಯರ್ಥವಾಗಬಾರದು, ಪ್ರತಿಕಾರ ತೀರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಭಾರತೀಯ ಯೋಧರ ನೆತ್ತರು ರಸ್ತೆ ಮೇಲೆ ಹರಿಯುತ್ತಿದ್ದರೆ, ಜಗತ್ತೇ ಭಾರತದ ಬೆಂಬಲಕ್ಕೆ ನಿಂತಿತು, ಯೋಧರ ಆತ್ಮಕ್ಕೆ ಬಹುತೇಕ ರಾಷ್ಟ್ರಗಳು ಶಾಂತಿ ಕೋರಿದವು. ದೇಶದ ಬೀದಿ ಬೀದಿಗಳಲ್ಲಿ ಜನ ಶ್ರದ್ಧಾಂಜಲಿ ಸಲ್ಲಿಸಿದರು. 2016ರಲ್ಲಿ ಉರಿ ದಾಳಿ ಬಳಿಕ ಕೈಗೊಂಡಂತೆ ಸರ್ಜಿಕಲ್‌ ಸ್ಟ್ರೈಕ್‌ ಮಾಡಿ ಎಂದು ಹಕ್ಕೊತ್ತಾಯ ಮಂಡಿಸಿದರು. ಅಷ್ಟರಮಟ್ಟಿಗೆ ದೇಶದ ಜನ ಭಾವನಾತ್ಮಕವಾಗಿ ಒಗ್ಗೂಡಿದ್ದರು.

ಪುಲ್ವಾಮಾ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಭಾವುಕರಾಗಿದ್ದರು. ಯೋಧರ ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಕೃತ್ಯವನ್ನು ಖಂಡಿಸಿ ದೇಶದ ಜನರ ಮುಂದೆ ನಿಂತ ಮೋದಿ, “ನಮ್ಮ ಯೋಧರು ಅಗಲಿರುವುದು ನಿಮ್ಮ ಹೃದಯವನ್ನು ಎಷ್ಟು ಕಲಕಿದೆಯೋ, ನನ್ನ ಹೃದಯವನ್ನೂ ಅಷ್ಟೇ ಕಲಕಿದೆ. ಆದರೆ, ಒಂದು ನೆನಪಿರಲಿ, ಇಂತಹ ಹೇಯ ಕೃತ್ಯ ಎಸಗಿದವರಿಗೆ ತಕ್ಕ ಶಾಸ್ತಿ ಮಾಡದೆ ಬಿಡುವುದಿಲ್ಲ” ಎಂದು ಹೇಳಿದರು. ಯೋಧರ ಮೇಲೆ ದಾಳಿ ಮಾಡಿದ ಉಗ್ರರಿಗೆ ಪಾಠ ಕಲಿಸುತ್ತೇವೆ ಎಂದು ಘೋಷಿಸಿದರು.

ಪುಲ್ವಾಮಾ ದಾಳಿಗೆ ಪ್ರತೀಕಾರ

ಭಾರತದ ಮೇಲೆ ಉಗ್ರರ ದಾಳಿ ನಡೆದರೆ, ಉಗ್ರರು ನುಗ್ಗಿ ದೇಶದ ಜನರನ್ನು ಹತ್ಯೆ ಮಾಡಿದರೆ, “ನಾವು ನಿಮ್ಮ ಜತೆ ಕ್ರಿಕೆಟ್‌ ಆಡುವುದಿಲ್ಲ” ಎಂದು ಪಾಕಿಸ್ತಾನಕ್ಕೆ ಒಣ ಬೆದರಿಕೆ ಹಾಕುವ ಸರ್ಕಾರಗಳು ಇದ್ದವು. ಆದರೆ, ಪುಲ್ವಾಮಾ ದಾಳಿ ಬಳಿಕ ಮೋದಿ ಸರ್ಕಾರ ಒಣ ಬೆದರಿಕೆ ಹಾಕಲಿಲ್ಲ, ಜಗತ್ತಿನ ಎದುರು ಅಳಲು ತೋಡಿಕೊಳ್ಳಲಿಲ್ಲ. ಪುಲ್ವಾಮಾ ದಾಳಿ ನಡೆದ 12 ದಿನದಲ್ಲಿಯೇ ಅಂದರೆ, ಫೆಬ್ರವರಿ 26ರಂದು ಭಾರತದ ವಾಯುಪಡೆಯು ಬಾಲಾಕೋಟ್‌ ಮೇಲೆ ವಾಯು ದಾಳಿ ನಡೆಸಿತು. ಜೈಶೆ ಮೊಹಮ್ಮದ್‌ ಉಗ್ರರ ನೆಲೆಯನ್ನು ಧ್ವಂಸಗೊಳಿಸಿ, ನೂರಾರು ಉಗ್ರರನ್ನು ಹತ್ಯೆಗೈಯಿತು. ಇದಕ್ಕೂ ಮೊದಲು ಭಾರತವು ಜಾಗತಿಕವಾಗಿ ರಾಜತಾಂತ್ರಿಕ ಬೆಂಬಲವನ್ನೂ ಪಡೆದಿತ್ತು. ಪಾಕಿಸ್ತಾನವು ಹೇಗೆ ಉಗ್ರರನ್ನು ಪೋಷಣೆ ಮಾಡುತ್ತಿದೆ. ಹೇಗೆ ಉಗ್ರರು ಭಾರತದ ಮೇಲೆ ದಾಳಿ ಮಾಡುತ್ತಿದ್ದಾರೆ, ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯನ್ನು ಪಾಕ್‌ ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂದು ಭಾರತ ವಿಶ್ವಸಂಸ್ಥೆಗೆ ಮನವರಿಕೆ ಮಾಡಿತ್ತು. ಹಾಗಾಗಿಯೇ, ಬಾಲಾಕೋಟ್‌ ದಾಳಿ ಬಳಿಕ ಜಗತ್ತಿನ ರಾಷ್ಟ್ರಗಳು ಭಾರತದ ಪರ ನಿಂತವು. ಅಷ್ಟರಮಟ್ಟಿಗೆ, ಮೋದಿ ಸರ್ಕಾರ ಚಾಣಾಕ್ಷತನ ಮೆರೆದಿತ್ತು.

ವಾಯುದಾಳಿ ಮಾಡುವಲ್ಲಿ ಪಾಕ್‌ ವಿಫಲ

ಪುಲ್ವಾಮಾ ದಾಳಿಗೆ ಭಾರತ ಸೇಡು ತೀರಿಸಿಕೊಂಡ ಬಳಿಕ ಜಾಗತಿಕವಾಗಿ ಮುಖಭಂಗ ಅನುಭವಿಸಿದ ಪಾಕಿಸ್ತಾನವು ಫೆಬ್ರವರಿ 27ರಂದು ಜಮ್ಮು-ಕಾಶ್ಮೀರದಲ್ಲಿರುವ ಭಾರತದ ವಾಯುನೆಲೆ ಮೇಲೆ ವಾಯು ದಾಳಿ ನಡೆಸಲು ಯತ್ನಿಸಿತು. ಆದರೆ, ಮಿಗ್‌-21 ಯುದ್ಧವಿಮಾನದ ವಿಂಗ್‌ ಕಮಾಂಡರ್‌ ಆಗಿದ್ದ ಅಭಿನಂದನ್‌ ವರ್ಧಮಾನ್‌ ಅವರು ಪಾಕಿಸ್ತಾನದ ಎಫ್‌-16 ಯುದ್ಧವಿಮಾನವನ್ನು ಹೊಡೆದುರುಳಿಸಿದರು. ಇದೇ ವೇಳೆ, ಅವರು ಪಾಕಿಸ್ತಾನದ ಯೋಧರ ಕೈಗೆ ಸಿಕ್ಕರೂ ಭಾರತವು ರಾಜತಾಂತ್ರಿಕ ಪ್ರಾಬಲ್ಯ ಬಳಸಿ ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆಸಿಕೊಂಡಿತು.

ಇದನ್ನೂ ಓದಿ: Houthi Attack: 22 ಭಾರತೀಯರಿದ್ದ ತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರ ದಾಳಿ; ರಕ್ಷಣೆಗೆ ಹರಸಾಹಸ

ಬಾಲಾಕೋಟ್‌ ದಾಳಿಗೆ ಸರ್ಜಿಕಲ್‌ ಸ್ಟ್ರೈಕ್‌ ಯಶಸ್ಸಿನ ಸ್ಫೂರ್ತಿ

ಪುಲ್ವಾಮಾ ದಾಳಿ ನಡೆದು ಕೇವಲ 12 ದಿನಗಳಲ್ಲಿಯೇ ಬಾಲಾಕೋಟ್‌ ದಾಳಿ ನಡೆಸಲು ಭಾರತಕ್ಕೆ 2016ರಲ್ಲಿ ಸಿಕ್ಕ ಸರ್ಜಿಕಲ್‌ ಸ್ಟ್ರೈಕ್‌ ಯಶಸ್ಸೇ ಸ್ಫೂರ್ತಿ ಎನ್ನಲಾಗಿದೆ. 2016ರ ಸೆಪ್ಟೆಂಬರ್‌ 18ರಂದು ಉರಿಯಲ್ಲಿ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಅದೇ ವರ್ಷದ ಸೆಪ್ಟೆಂಬರ್‌ 28ರಂದು ಸರ್ಜಿಕಲ್‌ ಸ್ಟ್ರೈಕ್‌ ಕೈಗೊಂಡು ಪಾಕಿಸ್ತಾನಿ ಉಗ್ರರನ್ನು ಸದೆಬಡಿದಿತ್ತು. ಇದೇ ಹುಮ್ಮಸ್ಸಿನಲ್ಲಿ 2019ರಲ್ಲಿ ನಡೆದ ವಾಯುದಾಳಿಯೂ ಯಶಸ್ವಿಯಾಯಿತು. ಎರಡೂ ಪ್ರತಿಕಾರ ದಾಳಿಗಳಲ್ಲಿ ಭಾರತದ ಯೋಧರು ತೋರಿದ ಶೌರ್ಯ, ಚಾಣಾಕ್ಷತನ ಸ್ಮರಣೀಯವಾದುದು. ಒಟ್ಟಿನಲ್ಲಿ ಪುಲ್ವಾಮಾ ದಾಳಿಗೆ 5 ವರ್ಷವಾದ ಹೊತ್ತಿನಲ್ಲಿ ಉಗ್ರರ ದಾಳಿಯಿಂದ ಹುತಾತ್ಮ ಯೋಧರು ಹಾಗೂ ಪ್ರತಿಕಾರದ ದಾಳಿಯಲ್ಲಿ ಶೌರ್ಯ ಮೆರೆದ ಯೋಧರಿಗೆ ಗೌರವ ಸಲ್ಲಿಸೋಣ. ಹಾಗೆಯೇ, ಇಂತಹ ದಾಳಿಗಳು ಎಂದಿಗೂ ನಡೆಯದಿರಲಿ ಎಂದು ಪ್ರಾರ್ಥಿಸೋಣ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version