ನವದೆಹಲಿ: ಪುಲ್ವಾಮಾ ದಾಳಿ(Pulwama Attack), ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ (Jammu and Kashmir), ಅದಾನಿ (Adani Group) ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ (Satya Pal Malik) ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಿಶೇಷ ಎಂದರೆ, ಈ ಸಂದರ್ಶನವನ್ನು ಯಾವುದೇ ಪತ್ರಕರ್ತ ಮಾಡಿಲ್ಲ. ಬದಲಿಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರೇ ಸಂದರ್ಶನ ನಡೆಸಿದ್ದಾರೆ. ರಾಹುಲ್ ಗಾಂಧಿ ಪತ್ರಕರ್ತರಾಗಿಯೂ ಬದಲಾಗಿದ್ದಾರೆ! ಪುಲ್ವಾಮಾ ದಾಳಿ ಕುರಿತು ಈ ಹಿಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದ ಮಾಹಿತಿಯನ್ನು ಸತ್ಯಪಾಲ್ ಪಾಲ್ ಮಲಿಕ್ ಅವರು ರಾಹುಲ್ ಗಾಂಧಿ ಅವರಿಗೆ ನೀಡಿದ ಸಂದರ್ಶನದಲ್ಲಿ ಪುನರುಚ್ಚರಿಸಿದ್ದಾರೆ.
”ನಮ್ಮ ತಪ್ಪಿನಿಂದಾಗಿಯೇ ಪುಲ್ವಾಮಾ ದಾಳಿ ನಡೆಯಿತು. ತಪ್ಪಿನ ಬಗ್ಗೆಯೂ ಎಲ್ಲಿಯೂ ಮಾತನಾಡದಂತೆ ನನಗೆ ತಿಳಿಸಲಾಯಿತು. ಬಹುಶಃ ತನಿಖೆಯ ಕಾರಣಕ್ಕೆ ಹೀಗೆ ಹೇಳಿಬೇಕೆಂದು ನಾನು ಅಂದುಕೊಂಡಿದ್ದೆ. ಆದರೆ, ಯಾವ ತನಿಖೆಯೂ ನಡೆಯಲಿಲ್ಲ. ಆ ದಾಳಿಯನ್ನು ಚುನಾವಣೆಯ ಉದ್ದೇಶಕ್ಕೆ ಬಳಸಿಕೊಳ್ಳಲಾಯಿತು. ದಾಳಿ ನಡೆದ ಮೂರನೇ ದಿನಕ್ಕೆ ಭಾಷಣ ಮಾಡಿದ ಪ್ರಧಾನಿ ಮೋದಿ, ದಾಳಿಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡರು,” ಎಂದು ಸತ್ಯಪಾಲ್ ಮಲಿಕ್ ಮತ್ತೊಮ್ಮೆ ಹೇಳಿದ್ದಾರೆ.
ಪುಲ್ವಾಮಾ ದಾಳಿ ಯಾಕಾಗಿ ನಡೆಯಿತು. ಅವರು(ಸಿಆರ್‌ಪಿಎಫ್) ಐದು ವಿಮಾನಗಳನ್ನು ಕೇಳಿದ್ದರು. ಒಂದೊಮ್ಮೆ ನನಗೆ ಕೇಳಿದ್ದರೆ ನಾನು ಕೊಡುತ್ತಿದ್ದೆ. ಹಿಮದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆಗೆ ವಿಮಾನ ಒದಗಿಸಿದ್ದೇನೆ ನಾನು. ದಿಲ್ಲಿಯಿಂದ ಬಾಡಿಗೆ ಮೂಲಕ ವಿಮಾನಗಳನ್ನು ಪಡೆದುಕೊಳ್ಳುವುದು ತುಂಬ ಸುಲಭವಿತ್ತು. ಆದರೆ, ಇದಕ್ಕೆ ಸಂಬಂಧಿಸಿದ ಅರ್ಜಿ ಗೃಹ ಸಚಿವಾಲಯದಲ್ಲಿ ನಾಲ್ಕು ತಿಂಗಳವರೆಗೆ ಧೂಳು ಹಿಡಿದಿತ್ತು. ಬಳಿಕ, ಅರ್ಜಿಯನ್ನು ತಿರಸ್ಕರಿಸಲಾಯಿತು. ಅನಿವಾರ್ಯವಾಗಿ ಸಿಆರ್‌ಪಿಎಫ್ ಸಿಬ್ಬಂದಿ, ಅಸುರಕ್ಷಿತವಾಗಿರುವ ರಸ್ತೆ ಮಾರ್ಗ ಮೂಲಕ ಬರಬೇಕಾಯಿತು ಎಂದು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಸತ್ಯಪಾಲ್ ಜತೆಗಿನ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡಿರುವ ರಾಹುಲ್ ಗಾಂಧಿ ಅವರು, ”ಈ ಸಂದರ್ಶನವು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮಧ್ಯೆ ಸ್ಪರ್ಧೆಗೆ ಕಾರಣವಾಗುತ್ತಾ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದಿಂದ ಸ್ಫೋಟಕಗಳನ್ನು ಕಳುಹಿಸಲಾಗಿತ್ತು ಮತ್ತು ಈ ಸ್ಪೋಟಕಗಳನ್ನು ತುಂಬಿದ್ದ ವಾಹನ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಸಂಚರಿಸುತ್ತಲೇ ಇತ್ತು. ಆ ವಾಹನದ ಚಾಲಕ ಮತ್ತು ಮಾಲೀಕನಿಗೆ ಭಯೋತ್ಪಾದನೆಯ ನಂಟಿತ್ತು. ಅವರನ್ನು ಈ ಹಿಂದೆ ಅನೇಕ ಬಾರಿ ಬಂಧಿಸಿ, ಬಿಡುಗಡೆ ಮಾಡಲಾಗಿತ್ತು. ಹಾಗಿದ್ದೂ, ಅವರು ಗುಪ್ತಚರ ಸಂಸ್ಥೆಗಳ ನಿಗಾದ ವ್ಯಾಪ್ತಿಯಲ್ಲೇ ಇರಲಿಲ್ಲ ಎಂದು ಸತ್ಯಪಾಲ್ ಮಲಿಕ್ ಅವರು ಆಶ್ಚರ್ಯ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ: Amit Shah: ಪುಲ್ವಾಮಾ ದಾಳಿ ಬಗ್ಗೆ ಸತ್ಯಪಾಲ್ ಮಲಿಕ್ ಹೇಳಿದ್ದು ನಿಜವೇ ಆಗಿದ್ದರೆ..; ಅಮಿತ್ ಶಾ ಕೇಳಿದ ಪ್ರಶ್ನೆ ಏನು?
ನನ್ನನ್ನು ರೂಮಿನಲ್ಲಿ ಕೂಡಿ ಹಾಕಿದರು!
ನಾನು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹೋದಾಗ, ಪ್ರಧಾನಿ ಮೋದಿ ಇದ್ದಾರೆಂಬ ಕಾರಣಕ್ಕೆ ಏರ್‌ಪೋರ್ಟ್ ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಿದರು. ಆಗ ನನಗೆ ಇದೊಂದು ಕಾರ್ಯಕ್ರಮವೇ ಅನ್ನಿಸಲಾರಂಭಿಸಿತು. ರೂಮಿನಿಂದ ಹೊರ ಬಂದು ಶ್ರದ್ಧಾಂಜಲಿ ಸಲ್ಲಿಸಲು ಭಾರೀ ಕಷ್ಟಪಟ್ಟೆ. ಇದೊಂದು ಅಗೌರವದ ನಡುವಳಿಕೆಯಾಗಿತ್ತು ಎಂದು ರಾಹುಲ್ ಗಾಂಧಿ ಅವರು ಇದೇ ವೇಳೆ ಹೇಳಿದರು.
ಅದಾನಿ ಬಗ್ಗೆ ಸತ್ಯಪಾಲ್ ಮಲಿಕ್ ಅವರು, ಎಂಎಸ್‌ಪಿ ಕುರಿತು ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಸರ್ಕಾರ ವಿಫಲವಾಗಿದೆ ಎಂಬ ಸಂಗತಿಯನ್ನು ರಾಹುಲ್ ಗಾಂಧಿ ಅವರೊಂದಿಗೆ ಹಂಚಿಕೊಂಡರು. ಅದಾನಿ ಬೃಹತ್ ಗೋಡೌನ್‌ಗಳನ್ನು ನಿರ್ಮಿಸಿದ್ದಾರೆ, ಬೆಳೆಗಳನ್ನು ಖರೀದಿಸಿದ್ದಾರೆ. ಮುಂದಿನ ವರ್ಷ, ಅವುಗಳ ಬೆಲೆಗಳು ಹೆಚ್ಚಾಗುತ್ತವೆ ಮತ್ತು ಅದಾನಿ, ಆಗ ಖರೀದಿಸದ ಉತ್ಪನ್ನಗಳನ್ನು ಮಾರಾಟ ಮಾಡುತ್ತಾನೆ. ಒಂದೊಮ್ಮೆ ಎಂಎಸ್‌ಪಿ ಜಾರಿಗೊಳಿಸಿದರೆ, ಒಬ್ಬ ರೈತನೂ ತನ್ನ ಉತ್ಪನ್ನಗಳನ್ನು ಅದಾನಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುವುದಿಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳಿದರು.