ಮುಂಬೈ: ರಾಮಾಯಣದ ಕುರಿತ ನಾಟಕ (Ramleela) ಪ್ರದರ್ಶನದ ವೇಳೆ ಸೀತೆ ಪಾತ್ರಧಾರಿಯು ಧೂಮಪಾನ ಮಾಡುವುದು ಸೇರಿ ಹಲವು ಆಕ್ಷೇಪಾರ್ಹ ದೃಶ್ಯಗಳನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ (Savitribai Phule Pune University) ಪ್ರೊಫೆಸರ್ ಹಾಗೂ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಟಕ ಪ್ರದರ್ಶನದ ವೇಳೆ ರಾಮ (Lord Ram), ಸೀತೆಗೆ ಅವಮಾನ ಮಾಡಲಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬಳಿಕ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ (ಫೆಬ್ರವರಿ 2) ಸಂಜೆ ರಾಮಲೀಲಾ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಇದೇ ವೇಳೆ ಸೀತೆ ಪಾತ್ರಧಾರಿಯು ಧೂಮಪಾನ ಮಾಡುವ, ರಾಮ, ಸೀತೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ದೃಶ್ಯಗಳು ಪ್ರೇಕ್ಷಕರನ್ನು ಕೆರಳಿಸಿವೆ. ಇದಾದ ಬಳಿಕ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಹಿಂದು ದೇವತೆಗಳಿಗೆ ನಾಟಕದ ಹೆಸರಿನಲ್ಲಿ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ವಿವಿ ಆವರಣದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಇಲ್ಲಿದೆ ಸೀತೆ ಧೂಮಪಾನ ಮಾಡುವ ದೃಶ್ಯ
Savitribai Phule Pune University portrays Mata Sita smoking. Leftists will justify this blasphemy in the name of creative freedom.
— BALA (@erbmjha) February 3, 2024
Degenerates have been given too much freedom. @CMOMaharashtra kindly take action ! pic.twitter.com/EJweINPZ2t
ಹಿಂದು ದೇವತೆಗಳಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಲೇ ವಿವಿಯ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್ ವಿಭಾಗದ ನಿರ್ದೇಶಕ ಡಾ. ಪ್ರವೀಣ್ ಭೋಲೆ, ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳು, ಬರಹಗಾರ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ. ಪ್ರತಿಭಟನೆ ಜತೆಗೆ ಎಬಿವಿಪಿ ಪುಣೆ ನಗರ ಅಧ್ಯಕ್ಷ ಹರ್ಷವರ್ಧನ್ ಹರ್ಪುಡೆ ಅವರು ಚತುರ್‌ಶ್ರಿಂಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 295 A (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು), 147 (ಗಲಭೆಗೆ ಪ್ರಚೋದನೆ) ಸೇರಿ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: PFI Links | ನಿಷೇಧಿತ ಪಿಎಫ್‌ಐ ಮುಖಂಡರಿಗೆ ಅಲ್ ಖೈದಾ, ಐಸಿಸ್ ಜತೆ ಲಿಂಕ್: ವಿಶೇಷ ಕೋರ್ಟ್‌ಗೆ ಎನ್‌ಐಎ ವರದಿ
“ಆಕ್ಷೇಪಾರ್ಹ ದೃಶ್ಯಗಳು ಹಾಗೂ ಸಂಭಾಷಣೆಗಳು ಇರುವ ನಾಟಕದ ಸ್ಕ್ರಿಪ್ಟ್‌ಗೆ ಡಾ.ಪ್ರವೀಣ್ ಭೋಲೆ ಅವರು ಅನುಮತಿ ನೀಡಿದ್ದಾರೆ. ಸೀತೆ ಧೂಮಪಾನ ಮಾಡುವುದು, ಅವಾಚ್ಯ ಶಬ್ದಗಳಿಂದ ರಾಮನನ್ನು ನಿಂದಿಸುವುದು ಸೇರಿ ಹಲವು ದೃಶ್ಯಗಳು, ಸಂಭಾಷಣೆಗಳು ಇವೆ. ಈ ಕುರಿತು ಮಾಹಿತಿ ಪಡೆದು, ಡಾ. ಪ್ರವೀಣ್ ಭೋಲೆ ಹಾಗೂ ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದೇವೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಬಾಲಾಜಿ ಪಾಂಧ್ರೆ ಮಾಹಿತಿ ನೀಡಿದ್ದಾರೆ. ಇಂತಹ ನಾಟಕಗಳಿಗೆ ಅವಕಾಶ ನೀಡಬಾರದು ಎಂದು ವಿದ್ಯಾರ್ಥಿಗಳು ಕೂಡ ಒತ್ತಾಯಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ