ನವದೆಹಲಿ: ನವದೆಹಲಿಯ ಮಾದರಿಯಲ್ಲಿ ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ಪಂಜಾಬ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮನ್ ತಿಳಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯಾಗಿ ಮಾರ್ಚ್ 16ರಂದು ಅಧಿಕಾರ ಸ್ವೀಕರಿಸಿದ ನಂತರ, ಈ ಹಿಂದೆಯೇ ಹೇಳಿದ್ದಂತೆ ಅವರು ನವದೆಹಲಿಗೆ ಭೇಟಿ ನೀಡಿದರು. ಆಮ್ ಆದ್ಮಿ ಪಕ್ಷ ಈಗಾಗಲೆ ನವದೆಹಲಿಯಲ್ಲಿ ಅಧಿಕಾರದಲ್ಲಿದ್ದು, ಅಲ್ಲಿನ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಉತ್ತಮಗೊಳಿಸಿದ ಹೆಗ್ಗಳಿಕೆ ಹೊಂದಿದೆ. ಖಾಸಗಿ ಶಾಲೆಗಳಿಂದ ಮಕ್ಕಳು ಸರ್ಕಾರಿ ಶಾಲೆಗೆ ಪ್ರವೇಶ ಪಡೆಯುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳುತ್ತಾರೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲೂ ಇದೇ ಮಾತನ್ನು ಪ್ರಸ್ತಾಪಿಸಿದ್ದರು. ಶಾಲೆಗಳ ಜತೆಗೆ ಸರ್ಕಾರಿ ಆಸ್ಪತ್ರೆಗಳನ್ನು ಉತ್ತಮಗೊಳಿಸಲಾಗಿದ್ದು, ಸಾಮಾನ್ಯ ಚಿಕಿತ್ಸೆಗಳಿಗೆ ಜನರು ಪರದಾಡುವ ಸ್ಥಿತಿ ಎಲ್ಲ ಎಂದೂ ಹೇಳಿದ್ದರು.
ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೇ, ದೆಹಲಿ ಸರ್ಕಾರದಿಂದ ಸಲಹೆಗಳನ್ನು ಪಡೆಯಲಾಗುತ್ತದೆ ಎಂದು ಮನ್ ಹೇಳಿದ್ದರು. ಅದರಂತೆ ಸೋಮವಾರ ನವದೆಹಲಿಯ ಶಾಲೆ ಹಾಗೂ ಆಸ್ಪತ್ರೆಗೆ ಪಂಜಾಬ್‌ನ ಶಿಕ್ಷಣ ಸಚಿವ ಮತ್ತು ಆರೋಗ್ಯ ಸಚಿವರ ಜತೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮನ್, ಸರ್ಕಾರಗಳು ಇತರೆ ಸರ್ಕಾರದಲ್ಲಿರುವ ಉತ್ತಮ ಅಂಶಗಳನ್ನು ಅಳವಡಿಸಿಕೊಂಡಾಗ ಮಾತ್ರವೇ ಅಭಿವೃದ್ಧಿ ಸಾಧ್ಯ. ಪಂಜಾಬ್ ಅಭಿವೃದ್ಧಿಗಾಗಿ ನಾವು ಕೇಜ್ರಿವಾಲ್ ಅವರ ಮಾದರಿ ಹಾಗೂ ಮಾರ್ಗವನ್ನು ಅನುಸರಿಸುತ್ತೇವೆ. ಬಡವರು ಹಾಗೂ ಶ್ರೀಮಂತರ ಮಕ್ಕಳಿಬ್ಬರೂ ಒಂದೇ ಶಾಲೆಯಲ್ಲಿ ಓದುವ ವಾತಾವರಣವನ್ನು ನಾವು ನಿರ್ಮಾಣ ಮಾಡುತ್ತೇವೆ ಎಂದರು.
ಇಂತಹ ಅತ್ಯಾಧುನಿಕ ಸೌಲಭ್ಯಗಳುಳ್ಳ ಸರ್ಕಾರಿ ಶಾಲೆಗಳು ಕೇವಲ ಅಮೆರಿಕ ಹಾಗೂ ಕೆನಡದಲ್ಲಿ ಮಾತ್ರ ಇರಬಹುದು ಎಂದುಕೊಂಡಿದ್ದೆ ಎಂದು ಅಚ್ಚರಿ ವ್ಯಕ್ತಪಡಿಸಿದ ಮನ್, ಶಾಲಾ ಮೂಲಸೌಕರ್ಯ ಅಭಿವೃದ್ಧಿ ಜತೆಗೆ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೂ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ಮನ್ ಹಾಗೂ ಅವರ ನಿಯೋಗಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹಾಗೂ ಸಮಾಜ ಕಲ್ಯಾಣ ಸಚಿವ ರಾಜೇಂದ್ರಪಾಲ್ ಗೌತಮ್ ಮಾರ್ಗದರ್ಶನ ಮಾಡಿದರು.
ಕಲ್ಕಾಜಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕ್ಸಲೆನ್ಸ್‌ನಿಂದ ಭೇಟಿ ಆರಂಭಿಸಿದ ನಿಯೋಗ ನಂತರದಲ್ಲಿ ಕೌಟಿಲ್ಯ ಸರ್ಕಾರಿ ಕೋ ಎಡ್ ವಿದ್ಯಾಲಯ ಚಿರಾಗ್ ಎನ್‌ಕ್ಲೇವ್‌ನಲ್ಲಿರುವ ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡಿದರು. ಸಂಪೂರ್ಣ ಕೋವಿಡ್ ಚಿಕಿತ್ಸಾ ವ್ಯವಸ್ಥೆಯನ್ನಾಗಿ ಪರಿವರ್ತಿಸಿರುವ ತಾಹಿರ್‌ಪುರದಲ್ಲಿರುವ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ತಮ್ಮ ಭೇಟಿಯನ್ನು ಮುಕ್ತಾಯಗೊಳಿಸಿದರು.
ಇದನ್ನೂ ಓದಿ | ಪ್ರತಿ ಪ್ರಧಾನಿಯನ್ನೂ ಸ್ಮರಿಸುವ ಪ್ರಯತ್ನ: ‘ಮನ್ ಕಿ ಬಾತ್’ ನಲ್ಲಿ PM ಸಂಗ್ರಹಾಲಯ ಪ್ರಸ್ತಾಪಿಸಿದ ಮೋದಿ