ಚಂಡೀಗಢ: ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ (Banwarilal Purohit) ಅವರ ಮಧ್ಯೆ ಶೀತಲ ಸಮರ ಏರ್ಪಟ್ಟಿರುವ ಮಧ್ಯೆಯೇ ಬನ್ವಾರಿಲಾಲ್ ಪುರೋಹಿತ್ ಅವರು ತಮ್ಮ ಸ್ಥಾನಕ್ಕೆ (Punjab Governor) ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಅವರು ರಾಜ್ಯಪಾಲ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದಾರೆ. ಆದರೆ, ಅವರ ರಾಜೀನಾಮೆಗೆ ನಿಖರ ಕಾರಣ ತಿಳಿದುಬಂದಿಲ್ಲ.
“ನನ್ನ ವೈಯಕ್ತಿಕ ಕಾರಣಗಳು ಹಾಗೂ ಇತರ ಜವಾಬ್ದಾರಿಗಳಿಂದಾಗಿ ಪಂಜಾಬ್ ರಾಜ್ಯಪಾಲ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಆಡಳಿತಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ದಯಮಾಡಿ ನನ್ನ ರಾಜೀನಾಮೆಯನ್ನು ಸ್ವೀಕರಿಸಿ” ಎಂಬುದಾಗಿ ಬನ್ವಾರಿಲಾಲ್ ಪುರೋಹಿತ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Punjab Governor and Chandigarh Administrator Banwarilal Purohit resigns due to "personal reasons and certain other commitments." pic.twitter.com/0o05k6Hn6p
— ANI (@ANI) February 3, 2024
ರಾಷ್ಟ್ರಪತಿ ಆಡಳಿತದ ಎಚ್ಚರಿಕೆ ನೀಡಿದ್ದರು
ಪಂಜಾಬ್‌ನಲ್ಲಿ ಬನ್ವಾರಿಲಾಲ್ ಪುರೋಹಿತ್ ಹಾಗೂ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಮಧ್ಯೆ ಮುಸುಕಿನ ಗುದ್ದಾಟ ಏರ್ಪಟ್ಟಿತ್ತು. ಕಳೆದ ವರ್ಷದ ಆಗಷ್ಟ್‌ನಲ್ಲಂತೂ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕಾಗುತ್ತದೆ ಎಂದು ಬನ್ವಾರಿಲಾಲ್ ಪುರೋಹಿತ್ ಎಚ್ಚರಿಕೆ ನೀಡಿದ್ದರು. “ರಾಜಭವನದ ಪತ್ರಗಳಿಗೆ ನಿಯಮಿತ ಕಾಲಾವಧಿಯಲ್ಲಿ ಉತ್ತರ ನೀಡದಿದ್ದರೆ ಸಂವಿಧಾನದ 356ನೇ ವಿಧಿ ಅಡಿಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಶಿಫಾರಸು ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದರು.
ಪಂಜಾಬ್‌ನಲ್ಲಿ ಮಾದಕ ದ್ರವ್ಯದ ಕಳ್ಳ ಸಾಗಣೆ, ನಕಲಿ ಮೆಡಿಕಲ್ ಸ್ಟೋರ್‌ಗಳು ಹಾಗೂ ನಕಲಿ ಮದ್ಯದ ಅಂಗಡಿಗಳ ಹಾವಳಿ ಜಾಸ್ತಿಯಾಗುತ್ತಿದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಹಾಗೂ ಡ್ರಗ್ಸ್ ಮಾಫಿಯಾ ವಿರುದ್ಧ ಕ್ರಮ ತೆಗೆದುಕೊಂಡಿರುವ ಕುರಿತು ವರದಿ ನೀಡಬೇಕು ಎಂದು ಬನ್ವಾರಿಲಾಲ್ ಪುರೋಹಿತ್ ಅವರು ಪತ್ರ ಬರೆದಿದ್ದರು. ಆದರೆ, ರಾಜ್ಯಪಾಲರ ಪತ್ರಕ್ಕೆ ಮುಖ್ಯಮಂತ್ರಿ ಕಚೇರಿಯಾಗಲಿ, ಸರ್ಕಾರವಾಗಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ, ಅವರು ರಾಷ್ಟ್ರಪತಿ ಆಡಳಿತದ ಜಾರಿ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: BJP Karnataka: ಬಿಜೆಪಿ ಮಾದರಿ ಕೂಡಲೇ ಪರಿಹಾರ ಕೊಡಿ, ಇಲ್ಲವಾದರೆ ರಾಜೀನಾಮೆ ಕೊಡಿ: ಆರ್. ಅಶೋಕ್ ಸವಾಲು
ಅಷ್ಟೇ ಅಲ್ಲ, ರಾಜ್ಯ ಸರ್ಕಾರದ ಮಸೂದೆಗಳಿಗೆ ಅಂಗೀಕಾರ ನೀಡಲು ಬನ್ವಾರಿಲಾಲ್ ಪುರೋಹಿತ್ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆಗ, ಸುಪ್ರೀಂ ಕೋರ್ಟ್, ಬನ್ವಾರಿಲಾಲ್ ಪುರೋಹಿತ್ ಅವರಿಗೆ ಛೀಮಾರಿ ಹಾಕಿತ್ತು. “ನೀವು ಯಾವುದೇ ಮಸೂದೆಗಳಿಗೆ ಅಂಗೀಕಾರ ನೀಡಲು ವಿಳಂಬ ನೀತಿ ಅನುಸರಿಸುವಂತಿಲ್ಲ” ಎಂದು ಸೂಚಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ