ಚಂಡೀಗಢ: ಯಾವುದೇ ಮದುವೆ ಮುರಿಯಲು ಏನು ಕಾರಣಗಳಿರುತ್ತವೆ? ಗಂಡನ ದುರ್ವರ್ತನೆ ಸಹಿಸದೆಯೋ, ಹೆಂಡತಿಯ ಅಹಂಕಾರ ತಾಳದೆಯೋ, ಅಕ್ರಮ ಸಂಬಂಧವೋ ಕಾರಣವಾಗುತ್ತದೆ. ಆದರೆ, ಪಂಜಾಬ್‌ನಲ್ಲಿ ಮದುವೆಯಾದ ಬಳಿಕ ಮಹಿಳೆಗೆ ಗಡ್ಡ ಹಾಗೂ ಮೀಸೆ ಬೆಳೆದಿದ್ದು, ಇದರಿಂದ ಬೇಸತ್ತ ಪತಿಯು ವಿಚ್ಛೇದನ ನೀಡಿದ್ದಾನೆ. ಇದೆಲ್ಲ ನೋವು, ಅವಮಾನದ ಬಳಿಕವೂ ಮಹಿಳೆ ಎದೆಗುಂದದೆ ಜೀವನ ಸಾಗಿಸುತ್ತಿರುವುದು ಸ್ಫೂರ್ತಿದಾಯಕವಾಗಿದೆ.
ಮನ್‌ದೀಪ್ ಕೌರ್ ಎಂಬ ಮಹಿಳೆಯ ಜೀವನದಲ್ಲಿ 2012ರಲ್ಲಿ ಎಲ್ಲವೂ ಸರಿಯಾಗಿತ್ತು. ಆಗಷ್ಟೇ ಮದುವೆಯಾಗಿತ್ತು. ಗಂಡನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ದಾಂಪತ್ಯ ಜೀವನವು ಎಲ್ಲರಂತೆಯೇ ಸುಮಧುರವಾಗಿ ಇತ್ತು. ಆದರೆ, ಮನ್‌ದೀಪ್ ಕೌರ್ ಜೀವನದಲ್ಲಿ ಏಕಾಏಕಿ ಬಿರುಗಾಳಿ ಬೀಸಿತು. ಇದ್ದಕ್ಕಿದ್ದಂತೆಯೇ ಮುಖದ ಮೇಲೆ ಮೀಸೆ, ಗಡ್ಡ ಬೆಳೆಯತೊಡಗಿತು. ಗಂಡನ ವರ್ತನೆ ದಿನೇದಿನೆ ಬದಲಾಯಿತು. ಆದರೆ, ಕೊನೆಗೆ ಗಂಡ ವಿಚ್ಛೇದನ ನೀಡಿದ. ಅದಾದ ನಂತರ ಮನ್‌ದೀಪ್ ಕೌರ್‌ಗೆ ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ.
ಖಿನ್ನತೆಗೊಳಗಾದ ಮನ್‌ದೀಪ್
ಪ್ರೀತಿಸುತ್ತಿದ್ದ ಗಂಡ ಮದುವೆಯಾದ ಕೆಲವೇ ವರ್ಷದಲ್ಲಿ ವಿಚ್ಛೇದನ ನೀಡಿದ ಬಳಿಕ ಮನ್‌ದೀಪ್ ಕೌರ್ ಖಿನ್ನತೆಗೊಳಗಾದರು. ಕನ್ನಡಿಯಲ್ಲಿ ನಿಂತು ಆಕೆಯ ಮುಖವೇ ನೋಡಿಕೊಳ್ಳಲು ಆಗುತ್ತಿರಲಿಲ್ಲ. “ನಾನು ಖಿನ್ನತೆಗೊಳಗಾದೆ. ಇದನ್ನು ಮೀರಿ ಬದುಕಲು ತೀರ್ಮಾನಿಸಿ, ಮಾನಸಿಕ ನೆಮ್ಮದಿಗಾಗಿ ಗುರುದ್ವಾರಕ್ಕೆ ತೆರಳಲು ಆರಂಭಿಸಿದೆ. ಧರ್ಮಗ್ರಂಥವನ್ನು ಓದಲು ಶುರು ಮಾಡಿದೆ. ಇದಾದ ಬಳಿಕ ನನ್ನನ್ನು ನಾನೇ ಪ್ರೀತಿಸಲು ಶುರು ಮಾಡಿದೆ” ಎಂಬುದಾಗಿ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ದಿಟ್ಟ ಮಹಿಳೆಯ ಜೀವನಗಾಥೆ
ಈಗ ಹೇಗಿದ್ದಾರೆ ಮನ್‌ದೀಪ್?
ಪತಿ ಬಿಟ್ಟು ಹೋದರೇನಂತೆ, ಮನ್‌ದೀಪ್ ಕೌರ್ ಅವರಲ್ಲಿನ ಆತ್ಮವಿಶ್ವಾಸ ಹಾಗೆಯೇ ಇತ್ತು. ಹಾಗಾಗಿ, ಅವರು ಸಹೋದರರ ಜತೆಗೂಡಿ ಜಮೀನಿಗೆ ಹೋಗಲು ಶುರು ಮಾಡಿದರು. ಯಾರು ಏನಾದರೂ ಎಂದುಕೊಳ್ಳಲಿ ಎಂದು ಗಡ್ಡ, ಮೀಸೆ ಬೋಳಿಸುವುದನ್ನು ಬಿಟ್ಟರು. ತಮ್ಮನ್ನೇ ತಾವು ಪ್ರೀತಿಸಲು ಶುರು ಮಾಡಿದರು. ದಿನೇದಿನೆ ಗಂಡ ಬಿಟ್ಟುಹೋದ ದುಃಖ ಮರೆಯಾಯಿತು. ಈಗವರು ಕೃಷಿ ಮಾಡಿಕೊಂಡು ಆರಾಮವಾಗಿ ಇದ್ದಾರೆ.
ಇದನ್ನೂ ಓದಿ: Kareena Kapoor: ಜ್ಯೂನಿಯರ್ ಕರೀನಾ ಕಪೂರ್ ರೀಲ್ಸ್ ವೈರಲ್: ಸೈಫ್ ಮುಂದೆ ಕಾಣಿಸಿಕೊಳ್ಳಬೇಡಿ ಅಂದ್ರು ನೆಟ್ಟಿಗರು
“ನನ್ನ ಗಂಡ ಬಿಟ್ಟು ಹೋದದ್ದೇ ಒಳ್ಳೆಯದಾಯಿತು. ನನಗೀಗ ಚೆನ್ನಾಗಿ ಬದುಕಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿದೆ. ಕುಟುಂಬಸ್ಥರ ನೆರವಿನಿಂದ ನಾನು ಸ್ವಾಭಿಮಾನದ ಜೀವನ ಸಾಗಿಸುತ್ತೇನೆ” ಎಂದು ಹೇಳಿದ್ದಾರೆ. ಈಗ ಮನ್‌ದೀಪ್ ಕೌರ್ ಅವರು ಬೈಕ್ ರೈಡ್ ಮಾಡುವುದನ್ನು ಕಲಿತಿದ್ದಾರೆ. ತಮ್ಮ ಇಷ್ಟದ ಆಸಕ್ತಿಗಳಲ್ಲಿ ತೊಡಗಿಸಿಕೊಂಡು ಲವಲವಿಕೆಯಿಂದ ಇದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.