ನವದೆಹಲಿ: ಭಾರತದ ವಿರೂಪಗೊಳಿಸಿದ ನಕ್ಷೆಯನ್ನು (Distorted map of India) ಷೇರ್ ಮಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿರುವ ಕೆನಡಾದ ಪಂಜಾಬಿ ಗಾಯಕ ಶುಭ್ (Singer Shubh) ಅವರ ಭಾರತದಲ್ಲಿ ಕೈಗೊಳ್ಳಬೇಕಿದ್ದ ಸಂಗೀತ ಕಾರ್ಯಕ್ರಮ ಪ್ರವಾಸವನ್ನು ರದ್ದುಗೊಳಿಸಲಾಗಿದೆ(India Tour). ಖಲಿಸ್ತಾನದ ಪರವಾಗಿ, ಭಾರತದ ನಕ್ಷೆಯನ್ನು ವಿರೂಪಗೊಳಿಸಿದ ಪೋಸ್ಟ್ ಮಾಡುವ ಮೂಲಕ ರ್ಯಾಪರ್, ಸಿಂಗರ್ ಶುಭ್ ವಿರುದ್ಧ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬುಕ್‌ಮೈಶೋ(BookMyShow), ಖಲಿಸ್ತಾನ (Khalistan) ಪರವಾಗಿ ಪೋಸ್ಟ್ ಮಾಡಿದ್ದಕ್ಕಾಗಿ ಶುಭ್ ಅವರ ಇಂಡಿಯಾ ಟೂರ್ ರದ್ದ ಮಾಡಲಾಗಿದೆ ಎಂದು ಹೇಳಿದೆ.
ಗಾಯಕ ಶುಭನೀತ್ ಸಿಂಗ್ ಅವರ ‘ಸ್ಟಿಲ್ ರೋಲಿನ್ ಟೂರ್ ಫಾರ್ ಇಂಡಿಯಾ’ ರದ್ದುಗೊಳಿಸಲಾಗಿದೆ. ಈ ಶೋಗಾಗಿ ಟಿಕೆಟ್‌ಗಳನ್ನು ಖರೀದಿಸಿದ ಎಲ್ಲಾ ಗ್ರಾಹಕರಿಗೆ ಟಿಕೆಟ್ ಮೊತ್ತವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುವುದು. ಈ ಪ್ರಕ್ರಿಯೆ ಆರಂಭವಾಗಿದೆ. ಮರುಪಾವತಿಗಳು ಮೂಲ ವಹಿವಾಟಿನ ಗ್ರಾಹಕರ ಮೂಲ ಖಾತೆಯಲ್ಲಿ 7-10 ಕೆಲಸದ ದಿನಗಳಲ್ಲಿ ಜಮೆಯಾಗಲಿದೆ ಎಂದು ಬುಕ್ ಮೈ ಶೋ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದೆ.
ಪಂಜಾಬ್ ಮೂಲದ ಕೆನಡಾದ 26 ವರ್ಷದ ಯುವ ರ್ಯಾಪರ್ ಮೂರು ತಿಂಗಳ ಕಾಲ ಭಾರತದ ಟೂರ್ ಕೈಗೊಳ್ಳಬೇಕಿತ್ತು. ಮುಂಬೈ, ಬೆಂಗಳೂರು, ದಿಲ್ಲಿ, ಹೈದ್ರಾಬಾದ್, ಕೋಲ್ಕೊತಾ ಸೇರಿದಂತೆ ದೇಶದ 11 ನಗರಗಳಲ್ಲಿ ಈ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಈಗ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ.
ಯಾರು ಈ ಪಂಜಾಬಿ ಗಾಯಕ ಶುಭ್? ಆತನಿಗೆ ಸುತ್ತಿಕೊಂಡ ವಿವಾದವೇನು?
ಶುಭ್ (Singer Shubh) ಎಂದು ಖ್ಯಾತರಾಗಿರುವ ಕೆನಡಾದ ಪಂಜಾಬಿ ಗಾಯಕ ಶುಭ್‌ನೀತ್ ಸಿಂಗ್ (Shubhneet Singh) ಮುಂಬೈನಲ್ಲಿ ಸೆಪ್ಟೆಂಬರ್ 23 ಮತ್ತು 25ರಂದು ಸಂಗೀತ ಕಾರ್ಯಕ್ರಮ ‘ಕ್ರೂಸ್ ಕಂಟ್ರೋಲ್ 4.0’ ನಡೆಸಿಕೊಡಬೇಕಿತ್ತು. ಆದರೆ, ಈಗ ಸ್ವತಃ ಗಾಯಕ ಶುಭ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಆಡಳಿತಾರೂಢ ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ (BJYM) ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಶುಭ್ ಅವರು ಖಲಿಸ್ತಾನ್‌ಗೆ (Khalistan) ಬೆಂಬಲ ನೀಡಿದ್ದಾರೆ ಮತ್ತು ಕಾಶ್ಮೀರದ ವಿರೂಪಗೊಳಿಸಿದ ನಕ್ಷೆಯನ್ನು ಪೋಸ್ಟ್ ಮಾಡಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ಯುವ ಘಟಕ ಆರೋಪಿಸಿದೆ(Distorted map of India).
ವಿರೂಪಗೊಳಿಸಿದ ಭಾರತದ ನಕ್ಷೆ
26 ಹರೆಯದ ತನ್ನ ಗಾಯನದ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ರಿಕಟರ್ ವಿರಾಟ್ ಕೊಹ್ಲಿಯಂಥವರು ಕೂಡ ಶುಭ್‌ನನ್ನು ಫಾಲೋ ಮಾಡುತ್ತಿದ್ದರು. ಆದರೆ, ಶುಭ್ ತಮ್ಮ ಇನ್‌ಸ್ಟಾದಲ್ಲಿ ಷೇರ್ ಮಾಡಿದ ಈ ಒಂದು ಪೋಸ್ಟ್ ಎಲ್ಲವನ್ನು ತಲೆ ಕೆಳಗು ಮಾಡಿದೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಹಾಗೂ ಈಶಾನ್ಯ ರಾಜ್ಯಗಳನ್ನು ಹೊರಾತದ ಭಾರತದ ನಕಾಶೆಯನ್ನು ಶುಭ್ ಷೇರ್ ಮಾಡಿದ್ದರು. ಅಲ್ಲಿಂದಲೇ ತೊಂದರೆ ಶುರುವಾಯಿತು. ಈ ವಿರೂಪಗೊಳಿಸಿದ ಭಾರತದ ನಕ್ಷೆ ಷೇರ್ ಮಾಡುವುದರ ಜತೆಗೆ, ಪಂಜಾಬ್‌ಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದು ಮತ್ತಷ್ಟು ವಿವಾದವನ್ನು ಹೆಚ್ಚಿಸಿತು. ವಿವಾದ ತೀವ್ರಗೊಳ್ಳುತ್ತಿದ್ದಂತೆ ಶುಭ್ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೆ, ಪಂಜಾಬ್‌ಕ್ಕಾಗಿ ಪ್ರಾರ್ಥಿಸಿ ಎಂಬ ಒಕ್ಕಣಿಕೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ವಿರಾಟ್, ರಾಹುಲ್, ಹಾರ್ದಿಕ್ ಅನ್‌ಫಾಲೋ
“ಎಲಿವೇಟೆಡ್,” “ಒಜಿ,” ಮತ್ತು “ಚೀಕ್ಸ್” ನಂತಹ ಹಿಟ್ ಗೀತೆಗಳೊಂದಿಗೆ ಸಂಗೀತ ಉದ್ಯಮದಲ್ಲಿ ಖ್ಯಾತಿಗೆ ಏರಿದ ಶುಭ್, ಜಾಗತಿಕವಾಗಿ ಅಭಿಮಾನಿಗಳನ್ನು ಹೊಂದಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ವೈರಲ್ ವೀಡಿಯೊದಲ್ಲಿ ಶುಭ್ ಅವರ ಟ್ಯೂನ್‌ಗೆ ನೃತ್ಯ ಮಾಡಿದ್ದನ್ನು ಕಾಣಬಹುದು. ಆದರೆ, ವಿರೂಪಗೊಳಿಸಿದ ನಕ್ಷೆ ವಿವಾದ ಹೆಚ್ಚಾಗುತ್ತಿದ್ದಂತೆ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ಶುಭ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Virat Kohli : ಖಲಿಸ್ತಾನಿಗಳಿಗೆ ಬೆಂಬಲ ಕೊಟ್ಟ ನೆಚ್ಚಿನ ಗಾಯಕನನ್ನು ಮುಲಾಜಿಲ್ಲದೇ ಅನ್‌ಫಾಲೋ ಮಾಡಿದ ವಿರಾಟ್
ಪ್ರಾಯೋಜಕತ್ವದಿಂದ ಹಿಂದೆ ಸರಿದ ಬೋಟ್ ಇಂಡಿಯಾ
ಬೆಂಗಳೂರು, ಹೈದರಾಬಾದ್, ನವದೆಹಲಿ ಮತ್ತು ಮುಂಬೈ ಸೇರಿದಂತೆ 12 ಪ್ರಮುಖ ಭಾರತೀಯ ನಗರಗಳನ್ನು ಒಳಗೊಂಡ ಮೂರು ತಿಂಗಳ ಅವಧಿಯ ಸಂಗೀತ ಪ್ರದರ್ಶನವನ್ನು ಶುಭ್ ಅವರು ನೀಡಲು ಮುಂದಾಗಿದ್ದರು. ಅದಕ್ಕೆ ಶುಭ್ ಅವರು ‘ಸ್ಟಿಲ್ ರೋಲಿನ್ ಇಂಡಿಯಾ ಟೂರ್’ಗೆ ಎಂದು ಹೆಸರಿಸಿದ್ದರು. ವಿವಾದ ಹೆಚ್ಚಾಗುತ್ತಿದ್ದಂತೆ ಈ ಕಾರ್ಯಕ್ರಮದ ಸ್ವಾನ್ಸರ್ ಕಂಪನಿಯಾಗಿದ್ದ ಬೋಟ್ ಇಂಡಿಯಾ ಈಗ ಹಿಂದೆ ಸರಿದಿದೆ.