Site icon Vistara News

Pakistan Economic Crisis : ಪಾಕ್​ನಲ್ಲಿ ಗೋಧಿಗಾಗಿ ಗುದ್ದಾಟ; ಕಾಲ್ತುಳಿತದಲ್ಲಿ ನಾಲ್ವರ ಸಾವು

Push for wheat in Pakistan

#image_title

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ (Pakistan Economic Crisis ) ಆ ದೇಶದ ನಾಗರಿಕರಿಗೆ ಆಹಾರದ ಕೊರತೆ ಉಂಟಾಗುವಂತೆ ಮಾಡಿದೆ. ಜನರು ಅಗತ್ಯ ವಸ್ತುಗಳಿಗಾಗಿ ಪಡಿಪಾಟಲು ಪಡುತ್ತಿದ್ದಾರೆ. ಹೀಗಾಗಿ ಸರಕಾರವೇ ಧಾನ್ಯಗಳು ಹಾಗೂ ಹಿಟ್ಟನ್ನು ವಿತರಣೆ ಮಾಡುತ್ತಿದೆ. ಅಂತೆಯೇ ಅಲ್ಲಿನ ಪಂಜಾಬ್​ ಪ್ರಾಂತ್ಯದಲ್ಲಿ ಸರ್ಕಾರ ಗೋಧಿ ಹಿಟ್ಟು ವಿತರಣೆ ಮಾಡುವ ವೇಳೆ ಕಾಲ್ತುಳಿತ ಉಂಟಾಗಿ ನಾಲ್ವರು ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಉಂಟಾದ ನೂಕುನುಗ್ಗಲಿನಲ್ಲಿ ಸಾವು ಸಂಭವಿಸಿದೆ ಎಂದು ಶನಿವಾರ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಉಂಟಾದ ನೆರೆ ಹಾಗೂ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಜನರು ಅತಂತ್ರರಾಗಿದ್ದಾರೆ. ರಾಜಕೀಯ ಕ್ಷೋಭೆ ಹಾಗೂ ಭಯೋತ್ಪಾನೆಯ ಚಟುವಟಿಕೆಗಳೂ ಅಲ್ಲಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ವಿದೇಶಿ ಸಾಲವನ್ನೇ ನೆಚ್ಚಿಕೊಂಡಿದ್ದ ಆ ದೇಶಕ್ಕೆ ಹಣದ ಕೊರತೆ ಉಂಟಾಗಿದೆ. ಈ ಎಲ್ಲ ಸಮಸ್ಯೆ ಹಿನ್ನೆಲೆಯಲ್ಲಿ ಸರಕಾರವೇ ಜನರಿಗೆ ಗೋಧಿ ಹಿಟ್ಟು ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡುವ ಯೋಜನೆ ಅರಂಭಿಸಿದೆ. ಮುಲ್ತಾನ್​, ಮುಜಫ್ಫರ್​ಗಢ ಮತ್ತು ಪೈಸಲಾಬಾದ್​ ವಿತರಣಾ ಕೇಂದ್ರಗಳಿಂದ ಗೋಧಿ ಹಿಟ್ಟು ನೀಡಲಾಗುತ್ತಿದೆ. ಈ ಸ್ಥಳದಲ್ಲಿ ಉಂಟಾಗಿರುವ ಕಾಲ್ತುಳಿತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಪಂಜಾಬ್​ ಸರಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ : Pakistan Economic Crisis: ಚುನಾವಣೆ ನಡೆಸಲೂ ಕಾಸಿಲ್ಲ ನಮ್ಮ ಬಳಿ ಎಂದ ಪಾಕಿಸ್ತಾನ ರಕ್ಷಣಾ ಸಚಿವ

ತೀವ್ರ ನೂಕು ನುಗ್ಗಲಿಗೆ ವಿತರಣಾ ಕೇಂದ್ರದಲ್ಲಿನ ಅಶಿಸ್ತು ಕೂಡ ಕಾರಣ. ಏಕಕಾಲಕ್ಕೆ ಜನರು ಆಹಾರ ವಸ್ತುಗಳಿಗಾಗಿ ನುಗ್ಗಿದ್ದಾರೆ. ಅಲ್ಲಿನ ಸಿಬ್ಬಂದಿಯ ಮಾತು ಕೇಳದೇ ಒಬ್ಬರಿಗೊಬ್ಬರು ತಳ್ಳಾಟ ನಡೆಸಿದ್ದಾರೆ. ಜನರನ್ನು ನಿಯಂತ್ರಣ ಮಾಡುವುದಕ್ಕಾಗಿ ಪೊಲೀಸರು ಲಾಠಿ ಚಾರ್ಜ್​ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ವಿತರಣಾ ಕೇಂದ್ರ ಅವ್ಯವಸ್ಥೆ ಬಗ್ಗೆ ಜನರು ಸರಕಾರವನ್ನು ಟೀಕೆ ಮಾಡುತ್ತಿದ್ದಾರೆ.

ಇಮ್ರಾನ್​ ಪಕ್ಷ ಖಂಡನೆ

ಆಹಾರ ವಸ್ತುಗಳ ವಿತರಣೆ ಸಂದರ್ಭದಲ್ಲಿ ಜನ ಸಾಯುತ್ತಿರುವುದನ್ನು ಇಮ್ರಾನ್​ ಖಾನ್​ ನೇತೃತ್ವದ ತೆಹ್ರಿಕ್- ಇ- ಇನ್ಸಾಫ್​ ಪಕ್ಷ ಖಂಡಿಸಿದೆ. ಉಚಿತ ಹಿಟ್ಟು ಪಡೆಯಲು ಹೋಗಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಸರಕಾರದ ಲೂಟಿಕೋರತನದಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಪಕ್ಷದ ಮುಖಂಡರು ದೂರಿದ್ದಾರೆ.

ಜನರ ಟೀಕೆಗೆ ಬೆದರಿರುವ ಪಾಕಿಸ್ತಾನ ಪ್ರಧಾನಿ ಶಹಬಾಜ್​ ಷರೀಫ್​ ಅವರು ಗೋಧಿ ಹಿಟ್ಟು ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

Exit mobile version