Site icon Vistara News

ನೌಕಾಪಡೆ ಅಧಿಕಾರಿಗಳಿಗೆ ಗಲ್ಲು; ಭಾರತದ ಮನವಿಗೆ ಒಪ್ಪಿದ ಕತಾರ್‌, ಕಾನೂನು ಹೋರಾಟಕ್ಕೆ ಮುನ್ನಡೆ

Arindam Bagchi

Qatar accepts India's appeal against death penalty to 8 Navy veterans

ನವದೆಹಲಿ/ದೋಹಾ: ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು (Spying For Israel) ಆರೋಪಿಸಿ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಭಾರತ ಮಾಡಿದ ಮನವಿಗೆ ಕತಾರ್‌ ಅನುಮತಿ ನೀಡಿದೆ. ಭಾರತದ ಮನವಿಯನ್ನು ಕತಾರ್‌ ಒಪ್ಪಿದೆ. ಎಂಟೂ ಮಾಜಿ ಅಧಿಕಾರಿಗಳಿಗೆ ರಾಯಭಾರ ಸಂಪರ್ಕಕ್ಕೆ (Consular Access) ಅನುಮತಿ ನೀಡಲಾಗಿದೆ” ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಹಾಗೆಯೇ, ಭಾರತದ ಅರ್ಜಿಯನ್ನು ಕತಾರ್‌ ನ್ಯಾಯಾಲಯವು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ತಿಳಿದುಬಂದಿದೆ.

“ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಗೆ ಕತಾರ್‌ ಮತ್ತೊಂದು ರಾಯಭಾರ ಸಂಪರ್ಕಕ್ಕೆ ಅನುಮತಿ ನೀಡಿದೆ. ಇದರಿಂದ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಕಾನೂನು ನೆರವು ಹಾಗೂ ರಾಯಭಾರ ಸಹಕಾರ ನೀಡಲು ಸಾಧ್ಯವಾಗಲಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ತಿಳಿಸಿದ್ದಾರೆ. ಕತಾರ್‌ನಲ್ಲಿ ಬಂಧನಕ್ಕೀಡಾಗಿ, ಗಲ್ಲುಶಿಕ್ಷೆಗೆ ಗುರಿಯಾಗಿರುವ ಮಾಜಿ ಅಧಿಕಾರಿಗಳ ಬಿಡುಗಡೆಗೆ ಭಾರತ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?

ಭಾರತ ನೌಕಾಪಡೆಯ ಮಾಜಿ ಅಧಿಕಾರಿಗಳು ಕತಾರ್‌ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈಗ ಶಿಕ್ಷೆಗೆ ಗುರಿಯಾಗಿರುವ ಎಂಟೂ ಅಧಿಕಾರಿಗಳನ್ನು 2022ರ ಆಗಸ್ಟ್‌ನಲ್ಲಿ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು. ಅವರ ವಿರುದ್ಧ ಬೇಹುಗಾರಿಕೆ ಮತ್ತು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯ ಆರೋಪ ಹೊರಿಸಲಾಗಿತ್ತು. ಕತಾರ್‌ನ ರಹಸ್ಯ ನೌಕಾ ಯೋಜನೆಗೆ ಸಂಬಂಧಿಸಿದಂತೆ ಬೇಹುಗಾರಿಕೆ ಮಾಡುತ್ತಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ. ಇಸ್ರೇಲ್‌ಗಾಗಿ ಕತಾರ್‌ನ ಸುಧಾರಿತ ಜಲಾಂತರ್ಗಾಮಿ ನೌಕೆಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಎಂಬ ಆರೋಪವಿದೆ.

ಇದನ್ನೂ ಓದಿ: Death Sentence: 8 ಮಾಜಿ ಭಾರತೀಯ ನೌಕಾ ಪಡೆ ಅಧಿಕಾರಿಗಳಿಗೆ ಕತಾರ್‌ನಲ್ಲಿ ಗಲ್ಲು ಶಿಕ್ಷೆ! ಕಾರಣ ಏನು?

ನೌಕಾಪಡೆಯಲ್ಲಿ ಇವರು ಏನಾಗಿದ್ದರು?

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಾಕಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಗೋಪಕುಮಾರ್ ಶಿಕ್ಷೆಗೊಳಗಾದ ನೌಕಾ ಪಡೆಯ ಮಾಜಿ ಅಧಿಕಾರಿಗಳಾಗಿದ್ದಾರೆ. ಅವರು ಖಾಸಗಿ ಸಂಸ್ಥೆಯಾದ ದಾಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್‌ಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಇದು ಕತಾರ್‌ನ ಸಶಸ್ತ್ರ ಪಡೆಗಳಿಗೆ ತರಬೇತಿ ಮತ್ತು ಇತರ ಸೇವೆಗಳನ್ನು ಒದಗಿಸುವ ಕಂಪನಿಯಾಗಿದೆ.

Exit mobile version