ನವ ದೆಹಲಿ: 2022ನೇ ವರ್ಷದ ಭುವನ ಸುಂದರಿಯಾಗಿ (Miss Universe 2022) ಯುಎಸ್ನ ಆರ್ ಬೋನಿ ಗೇಬ್ರಿಯಲ್ ಹೊರಹೊಮ್ಮಿದ್ದಾರೆ. ಯುನೈಟೆಡ್ ಸ್ಟೇಟಸ್ನ ಲೂಸಿಯಾನಾದಲ್ಲಿರುವ ನ್ಯೂ ಓರ್ಲಿಯನ್ಸ್ ಮೋರಿಯಲ್ ಕನ್ವೆನ್ಷನ್ ಸೆಂಟರ್ನಲ್ಲಿ ಈ ಬಾರಿಯ ಭುವನ ಸುಂದರಿ ಸ್ಪರ್ಧೆ ನಡೆದಿತ್ತು. ಈ ಸಲ 84ಕ್ಕೂ ಹೆಚ್ಚು ದೇಶಗಳಿಂದ ಯುವತಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಂತಿಮವಾಗಿ ಆರ್ ಬೋನಿ ಗೇಬ್ರಿಯಲ್ ವಿನ್ನರ್ ಆಗುವ ಮೂಲಕ ಭುವನ ಸುಂದರಿ ಕಿರೀಟ ತೊಟ್ಟರು.
ಬೋನಿ ಗೇಬ್ರಿಯಲ್ ಅವರು 2022ರಲ್ಲಿ ಮಿಸ್ ಯುಎಸ್ಎ ಆದವರು. ಅಷ್ಟೇ ಅಲ್ಲ, ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಗೆದ್ದವರು. ಮೂಲತಃ ಫ್ಯಾಶನ್ ಡಿಸೈನರ್, ಮಾಡೆಲ್ ಮತ್ತು ಹೊಲಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಶಾಲಾದಿನಗಳಿಂದಲೂ ಉಡುಪು ವಿನ್ಯಾಸದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಬೋನಿ, ಮುಂದೆ ಅದನ್ನೇ ಅಧ್ಯಯನದ ವಿಷಯವನ್ನಾಗಿ ಕೈಗೆತ್ತಿಕೊಂಡರು. 2018ರಲ್ಲಿ ಉತ್ತರ ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಫ್ಯಾಶನ್ ಡಿಸೈನ್ನಲ್ಲಿ ಪದವೀಧರರೂ ಆದರು. ಸದ್ಯ ಅವರದ್ದೇ ಒಂದು ಉಡುಪು ವಿನ್ಯಾಸ ಕಂಪನಿಯ ಸಿಇಒ ಆಗಿದ್ದಾರೆ.
ಹಾಗೇ, ಮೊದಲ ರನ್ನರ್ ಅಪ್ ಆಗಿ ವೆನೆಜುವೆಲಾದ ಅಮಂಡಾ ಡುಡಾಮೆಲ್ ಮತ್ತು ಎರಡನೇ ರನ್ನರ್ ಅಪ್ ಆಗಿ ಡೊಮಿನಿಕನ್ ಗಣರಾಜ್ಯದ ಆಂಡ್ರೇನಾ ಮಾರ್ಟಿನೆಜ್ ಆಯ್ಕೆಯಾದರು. ಭಾರತದಿಂದ ಸ್ಪರ್ಧಿಸಿದ್ದ ಮಂಗಳೂರು ಮೂಲದ ದಿವಿತಾ ರೈ ಅವರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಅಂದಹಾಗೇ, 2021ರಲ್ಲಿ ಭುವನ ಸುಂದರಿ ಪಟ್ಟವನ್ನು ಭಾರತದ ಹರ್ನಾಜ್ ಸಂಧು ಗೆದ್ದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: Miss Universe | ಕಸದಿಂದ ರಸ; ಉರ್ಫಿ ಜಾವೇದ್‌ರಂತೆಯೇ ಸ್ಪೆಷಲ್ ಉಡುಗೆ ತೊಟ್ಟ ಥಾಯ್ಲೆಂಡ್‌ನ ಭುವನ ಸುಂದರಿ