Site icon Vistara News

ಭಾರತ ಮೂಲದ ರಾಧಾ ಅಯ್ಯಂಗಾರ್‌ಗೆ ಅಮೆರಿಕದ ಪೆಂಟಗನ್‌ನಲ್ಲಿ ಪ್ರಮುಖ ಹುದ್ದೆ

Radha Iyengar Plumb

ವಾಷಿಂಗ್ಟನ್‌: ಭಾರತೀಯ ಮೂಲದ ರಾಧಾ ಅಯ್ಯಂಗಾರ್‌ ಪ್ಲಂಬ್‌ ಅವರನ್ನು ಅಮೆರಿಕದ ರಕ್ಷಣಾ ಸಚಿವಾಲಯದ ಮುಖ್ಯ ಕಚೇರಿ ಪೆಂಟಗನ್‌ನ ರಕ್ಷಣಾ ಉಪ ಕಾರ್ಯದರ್ಶಿ(ಸ್ವಾಧೀನ ಮತ್ತು ಸ್ಥಿರತೆ)ಯಾಗಿ ನೇಮಕ ಮಾಡಿ, ಅಧ್ಯಕ್ಷ ಜೋ ಬೈಡೆನ್‌ ಆದೇಶ ಹೊರಡಿಸಿದ್ದಾರೆ. ಜೋ ಬೈಡೆನ್‌ ಅಧ್ಯಕ್ಷರಾದ ಮೇಲೆ ಭಾರತೀಯ ಮೂಲದ ಹಲವರಿಗೆ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಅವಕಾಶ ನೀಡಲಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರೂ ಭಾರತೀಯ ಮೂಲದವರು. ಹೀಗೆ ಭಾರತ ಮೂಲದ ಮಹಿಳೆಯೊಬ್ಬರು ಯುಎಸ್‌ ಉಪಾಧ್ಯಕ್ಷೆಯಾಗಿದ್ದು ಇತಿಹಾಸದಲ್ಲೇ ಮೊದಲು.

ರಾಧಾ ಅಯ್ಯಂಗಾರ್‌ ಪ್ಲಂಬ್‌ ರಕ್ಷಣಾ ತಜ್ಞರಾಗಿದ್ದು, ಅಮೆರಿಕದಲ್ಲಿ ರಕ್ಷಣಾ ಉಪ ಕಾರ್ಯದರ್ಶಿ ಸಿಬ್ಬಂದಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೀಗ ಮತ್ತಷ್ಟು ಮೇಲ್ದರ್ಜೆಯ ಹುದ್ದೆ ಸಿಕ್ಕಿದೆ. ಸ್ವಾಧೀನ ಮತ್ತು ಸುಸ್ಥಿರತೆ ವಿಭಾಗದ ರಕ್ಷಣಾ ಉಪಕಾರ್ಯದರ್ಶಿಯಾಗಿ ಅವರು ನೇಮಕಗೊಂಡಿದ್ದಾರೆ. ರಾಧಾ ಅಯ್ಯಂಗಾರ್‌ ಅವರು ರಕ್ಷಣಾ ಉಪ ಕಾರ್ಯದರ್ಶಿ ಸಿಬ್ಬಂದಿ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಗೂಗಲ್‌ನ ʼವಿಶ್ವಾಸ ಮತ್ತು ಸುರಕ್ಷತೆಯ ಒಳನೋಟʼ ಹಾಗೂ ಸಂಶೋಧನೆ ವಿಭಾಗದ ನಿರ್ದೇಶಕರಾಗಿ, ವ್ಯಾಪಾರ ವಿಶ್ಲೇಷಣೆ, ಡೇಟಾ ವಿಜ್ಞಾನ ಮತ್ತು ತಾಂತ್ರಿಕ ಸಂಶೋಧನೆಯನ್ನು ಮುನ್ನಡೆಸಿದ್ದರು.

ಇದನ್ನೂ ಓದಿ: ಉಕ್ರೇನ್‌ಗೆ ಮತ್ತಷ್ಟು ಶಸ್ತ್ರಾಸ್ತ್ರ ಒದಗಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌

ಅದಕ್ಕೂ ಮೊದಲು ಫೇಸ್‌ಬುಕ್‌ನ ನೀತಿ ವಿಶ್ಲೇಷಣಾ ವಿಭಾಗದ ಜಾಗತಿಕ ಮುಖ್ಯಸ್ಥರಾಗಿದ್ದರು.‌ ಯುಎಸ್‌ನ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಸಂಶೋಧನೆಗಳನ್ನು ನಡೆಸಲು ಇರುವ ಒಂದು ಎನ್‌ಜಿಒವಾದ RAND ಕಾರ್ಪೋರೇಷನ್‌ನಲ್ಲಿ ಹಿರಿಯ ಆರ್ಥಿಕ ತಜ್ಞರಾಗಿಯೂ ಇವರು ಕೆಲಸ ಮಾಡಿದ್ದಾರೆ. ಇದರೊಂದಿಗೆ ರಕ್ಷಣಾ ಇಲಾಖೆ, ವೈಟ್‌ ಹೌಸ್‌ನ ನ್ಯಾಷನಲ್‌ ಕೌನ್ಸಿಲ್‌ ಸೇರಿದಂತೆ ಇನ್ನೂ ಹಲವು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ರಾಧಾ ಅಯ್ಯಂಗಾರ್‌ ಪ್ಲಂಬ್‌ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಎಸ್‌ ಪದವಿ ಪಡೆದಿದ್ದಾರೆ. ಹಾಗೆಯೇ, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮತ್ತು ಎಂಎಸ್‌ ಮಾಡಿದ್ದಾರೆ. ಇವರು ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕರೂ ಆಗಿದ್ದರು.

ಇದನ್ನೂ ಓದಿ: ಖಾಸಗಿ ವಿಮಾನದ ಎಡವಟ್ಟು; ಬೀಚ್‌ ಹೌಸ್‌ನಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸ್ಥಳಾಂತರ

Exit mobile version