Site icon Vistara News

Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

Hindenburg Report

ನವದೆಹಲಿ: ಸೆಬಿ ಅಧ್ಯಕ್ಷೆ ಮಾಧಾಬಿ ಬುಚ್ ವಿರುದ್ಧ ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್​ಬರ್ಗ್​​ ರಿಸರ್ಚ್ ಮಾಡಿರುವ ಹೊಸ ವರದಿ (Hindenburg Report) ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಭಾನುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಸೆಕ್ಯುರಿಟೀಸ್ ನಿಯಂತ್ರಕದ ಸಮಗ್ರತೆಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆರೋಪಗಳ ವಿರುದ್ಧ ಜಂಟಿ ಸಂಸದೀಯ ಸಮಿತಿ (JPC) ತನಿಖೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಏಕೆ ಹೆದರುತ್ತಾರೆ ಎಂಬುದನ್ನು ಈ ವರದಿ ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಹಿಂಡೆನ್​ಬರ್ಗ್​​ ರಿಸರ್ಚ್ ಶನಿವಾರ ರಾತ್ರಿ ಹೊಸ ವರದಿ ಬಿಡುಗಡೆ ಮಾಡಿದ್ದು, ಅದಾನಿ ಗ್ರೂಪ್ ವಿರುದ್ಧ ಕ್ರಮ ಕೈಗೊಳ್ಳಲು ಸೆಬಿ ಸಿದ್ಧರಿಲ್ಲ ಎಂದು ಶಂಕಿಸಿದೆ. “ಸಣ್ಣ ಚಿಲ್ಲರೆ ಹೂಡಿಕೆದಾರರ ಸಂಪತ್ತನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ಸೆಕ್ಯುರಿಟೀಸ್ ನಿಯಂತ್ರಕ ಸೆಬಿಯು ಅದರ ಅಧ್ಯಕ್ಷರ ವಿರುದ್ಧದ ಆರೋಪಗಳನ್ನು ನಿರ್ಲಕ್ಷಿಸುತ್ತಿದೆ ” ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಸೆಬಿ ಅಧ್ಯಕ್ಷರು ಇನ್ನೂ ಏಕೆ ರಾಜೀನಾಮೆ ನೀಡಿಲ್ಲ ಎಂದು ದೇಶಾದ್ಯಂತದ ಹೂಡಿಕೆದಾರರು ತಿಳಿಯಲು ಬಯಸುತ್ತಾರೆ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ. “ದೇಶಾದ್ಯಂತದ ಪ್ರಾಮಾಣಿಕ ಹೂಡಿಕೆದಾರರು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸೆಬಿ ಅಧ್ಯಕ್ಷೆ ಮಾಧಾಬಿ ಪುರಿ ಬುಚ್ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ? ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ ಯಾರು ಜವಾಬ್ದಾರರು. ಪ್ರಧಾನಿ ಮೋದಿ, ಸೆಬಿ ಅಧ್ಯಕ್ಷರು ಅಥವಾ ಗೌತಮ್ ಅದಾನಿಯೇ? ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಮತ್ತೊಮ್ಮೆ ಸ್ವಯಂಪ್ರೇರಿತವಾಗಿ ಪರಿಶೀಲಿಸುತ್ತದೆಯೇ ಎಂದು ರಾಹುಲ್​ ಹೇಳಿದ್ದಾರೆ.

“ಜೆಪಿಸಿ ತನಿಖೆಗೆ ಪ್ರಧಾನಿ ಮೋದಿ ಏಕೆ ಹೆದರುತ್ತಾರೆ ಎಂಬುದು ಸ್ಪಷ್ಟವಾಗಿದೆ. ಅದು ಸತ್ಯ ಬಹಿರಂಗಪಡಿಸಬಹುದು ಎಂಬುದು ಸ್ಪಷ್ಟವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: Hindenburg Report : ಹುರುಳಿಲ್ಲದ ಆರೋಪ; ಹಿಂಡೆನ್​ಬರ್ಗ್​ ವರದಿ ಬಗ್ಗೆ ಸೆಬಿ ಸ್ಪಷ್ಟನೆ

ಬುಚ್ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್ ಮೂಲದ ವಿದೇಶಗಳ ನಿಧಿಗಳಲ್ಲಿ ರಹಸ್ಯವಾಗಿ ಹೂಡಿಕೆ ಮಾಡಿದ್ದಾರೆ ಎಂದು ಹಿಂಡೆನ್ಬರ್ಗ್ ರಿಸರ್ಚ್ ಆರೋಪಿಸಿದೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರು ರೌಂಡ್ ಟ್ರಿಪ್ಪಿಂಗ್ ಫಂಡ್​ಗಳ ಮೂಲಕ ಷೇರು ಬೆಲೆಗಳನ್ನು ಹೆಚ್ಚಿಸಲು ಬಳಸುತ್ತಿದ್ದರು ಎಂದು ವರದಿಯಲ್ಲಿದೆ.

ವರದಿಯನ್ನು ‘ಪಿತೂರಿ’ ಎಂದ ಬಿಜೆಪಿ

ಭಾರತದಲ್ಲಿ ಆರ್ಥಿಕ ಅಸ್ಥಿರತೆ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸಲು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪಿತೂರಿ ನಡೆಸುತ್ತಿವೆ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದೆ. ಸೆಬಿ ಅಧ್ಯಕ್ಷರ ವಿರುದ್ಧದ ಹಿಂಡೆನ್​ಬರ್ಗ್​​ ಅವರ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಇದು ಹಣಕಾಸು ಕಾವಲುಗಾರನ ವಿಶ್ವಾಸಾರ್ಹತೆ ದುರ್ಬಲಗೊಳಿಸುವ ಪ್ರಯತ್ನ ಎಂದಿದೆ.

“ಕಳೆದ ವರ್ಷ ಅದಾನಿ ಗ್ರೂಪ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಹಿಂಡೆನ್​ಬರ್ಗ್​​. ಭಾರತೀಯ ತನಿಖಾ ಸಂಸ್ಥೆಗಳಿಂದ ವಿಚಾರಣೆ ಎದುರಿಸುತ್ತಿದೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ತಿಳಿಸಿದ್ದಾರೆ.

“ವಿರೋಧ ಪಕ್ಷಗಳು ಅದರ ಆರೋಪವನ್ನು ಪ್ರತಿಧ್ವನಿಸುತ್ತಿವೆ. ಪಿತೂರಿ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರು ಅವ್ಯವಸ್ಥೆ ಮತ್ತು ಅಸ್ಥಿರತೆ ಸೃಷ್ಟಿಸಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.

Exit mobile version