Site icon Vistara News

Rahul Gandhi Controversy: ಹಿಂದೂಗಳು ಹಿಂಸಾವಾದಿ ಹೇಳಿಕೆ; ರಾಹುಲ್‌ ಗಾಂಧಿಗೆ ಶಂಕರಾಚಾರ್ಯರ ಬೆಂಬಲ

Rahul Gandhi Controversy

ಹೊಸದಿಲ್ಲಿ: ಇತ್ತೀಚೆಗೆ ನಡೆದ ಸಂಸತ್‌ ಅಧಿವೇಶನ(Parliament Sessions)ದಲ್ಲಿ ವಿಪಕ್ಷ ನಾಕಯ ರಾಹುಲ್‌ ಗಾಂಧಿ(Rahul Gandhi Controversy) ಹಿಂದೂಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಅವರ ಹೇಳಿಕೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ರಾಹುಲ್‌ ಪರ ಉತ್ತರಾಖಂಡದ ಜ್ಯೋತಿರ್ ಮಠದ 46ನೇ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ(Swami Avimukteshwarananda) ಬೆಂಬಲ ಸೂಚಿಸಿದ್ದಾರೆ.

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದೇನು?

ರಾಹುಲ್‌ ಹೇಳಿಕೆಗೆ ವಿರೋದ ವ್ಯಕ್ತವಾಗಿರುವ ಬೆನ್ನಲ್ಲೇ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಅವರು ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಕೇಳಿದಾಗ, ನಾನು ರಾಹುಲ್ ಗಾಂಧಿ ಅವರ ಸಂಪೂರ್ಣ ವಿಡಿಯೋವನ್ನು ಕಂಡು, ಭಾಷಣವನ್ನು ಬಹಳ ಗಮನವಿಟ್ಟು ಆಲಿಸಿದ್ದೇನೆ. ಅವರು ಯಾವುದೇ ತಪ್ಪು ಹೇಳಿಲ್ಲ ಎನ್ನುವುದು ಕಂಡುಬಂದಿದೆ. ಹಿಂದುತ್ವವು ಹಿಂಸೆಯನ್ನು ತಿರಸ್ಕರಿಸುತ್ತದೆ ಎಂದು ರಾಹುಲ್ ಗಾಂಧಿ ಅವರು ಬಹಳ ಸ್ಪಷ್ಟವಾಗಿ ಒತ್ತಿ ಹೇಳಿರುವುದು ತುಂಬಾ ಸರಿಯಾಗಿದೆ ಎಂದು ಜ್ಯೋತಿರ್‌ ಮಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಭಾನುವಾರ ಹೇಳಿದ್ದಾರೆ.

“ರಾಹುಲ್ ಗಾಂಧಿಯವರ ಭಾಷಣವು ಹಿಂದೂ ಧರ್ಮಕ್ಕೆ ವಿರುದ್ಧವಾಗಿಲ್ಲ; ಅವರ ಸಂಪೂರ್ಣ ಭಾಷಣವನ್ನು ನಾವು ಕೇಳಿದ್ದೇವೆ. ಅವರು ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದಾರೆ” ಎಂದು ಹೇಳಿದರು. ಗಾಂಧಿಯವರ ಹೇಳಿಕೆಯ ಒಂದು ಭಾಗವನ್ನು ಮಾತ್ರ ಹರಡುವುದು ಸರಿಯಲ್ಲ ಮತ್ತು ಅದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಮಠಾಧೀಶರು ಒತ್ತಾಯಿಸಿದರು.

ರಾಹುಲ್‌ ಹೇಳಿಕೆ ಏನು?

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಕುರಿತಾದ ಚರ್ಚೆ ವೇಳೆ, ಕೋಮು ಆಧಾರದಲ್ಲಿ ಬಿಜೆಪಿ ನಾಯಕರು ಜನರನ್ನು ವಿಭಜಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆಗ ಅವರು ‘ಹಿಂಸಾತ್ಮಕ ಹಿಂದೂಗಳು’ ಎಂಬ ಪದ ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯನ್ನು ಖಂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಅವರು ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು. ಇದು ಸಂಸತ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವ ಐಎನ್‌ಡಿಐಎ ಬಣಗಳ ಸಂಸದರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿತ್ತು. ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಸ್ಪೀಕರ್ ಓಂ ಬಿರ್ಲಾ ಅವರು ಕಡತದಿಂದ ತೆಗೆಸಿದ್ದರು.

ಪ್ರತಿಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ ಅವರು ಹಿಂದುಗಳ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸಂಸತ್‌ನಲ್ಲಿ ರಾಹುಲ್‌ ಗಾಂಧಿ ಹೇಳಿಕೆಯನ್ನು ಖಂಡಿಸಿದ್ದಾರೆ. ಇದರ ಬೆನ್ನಲ್ಲೇ, ಹಿಂದುಗಳ ಕುರಿತು ರಾಹುಲ್‌ ಗಾಂಧಿ ನೀಡಿದ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರದ ದೇಗುಲದ ಡೋರ್‌ ಮ್ಯಾಟ್‌ಗೆ ರಾಹುಲ್‌ ಗಾಂಧಿ ಅವರ ಫೋಟೊವನ್ನು ಅಳವಡಿಸಲಾಗಿದೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಹಿಂದುಗಳ ಕುರಿತು ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿ ದೇವಾಲಯದ ಆಡಳಿತ ಮಂಡಳಿಯು ಡೋರ್‌ಮ್ಯಾಟ್‌ಗೆ ರಾಹುಲ್‌ ಗಾಂಧಿ ಅವರ ಫೋಟೊವನ್ನು ಅಳವಡಿಸಿದೆ. ದೇಗುಲಕ್ಕೆ ತೆರಳುವ ಭಕ್ತರು ರಾಹುಲ್‌ ಗಾಂಧಿ ಅವರ ಫೋಟೊ ಇರುವ ಡೋರ್‌ಮ್ಯಾಟ್‌ಅನ್ನು ತುಳಿದುಕೊಂಡು ಹೋಗುತ್ತಿರುವ ವಿಡಿಯೊ ಲಭ್ಯವಾಗಿದೆ. ಅಷ್ಟೇ ಅಲ್ಲ, ಡೋರ್‌ ಮ್ಯಾಟ್‌ ಮೇಲೆ, “ಹಿಂದುಗಳನ್ನು ಹಿಂಸಾವಾದಿಗಳು ಎಂಬುದಾಗಿ ಕರೆಯಲು ನಿಮಗೆ ಎಷ್ಟು ಧೈರ್ಯ” ಎಂದು ಕೂಡ ಬರೆಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್‌ ಆಗುತ್ತಲೇ ಪರ-ವಿರೋಧ ಚರ್ಚೆಯಾಗುತ್ತಿದೆ.

ಇದನ್ನೂ ಓದಿ:PM Modi Russia Visit: ದೇಶ, ಜನರಿಗಾಗಿ ನಿಮ್ಮ ಜೀವನವೇ ಮುಡಿಪು ಎಂದು ಮೋದಿಯನ್ನು ಹೊಗಳಿದ ಪುಟಿನ್

Exit mobile version