Site icon Vistara News

Rahul Gandhi: ರಾಹುಲ್‌ ಗಾಂಧಿ ಈಗ ಪ್ರತಿಪಕ್ಷ ನಾಯಕ; ಅವರಿಗಿರುವ ಅಧಿಕಾರ ಯಾವವು? ಸಂಬಳ ಎಷ್ಟು?

Donald Trump Assassination Bid

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ (Leader Of The Opposition) ಆಯ್ಕೆಯಾಗಿದ್ದಾರೆ. ಕಳೆದ ಎರಡು (2014, 2019) ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷವೂ ಪ್ರತಿಪಕ್ಷವಾಗುವಷ್ಟು ಸೀಟುಗಳನ್ನು ಗೆದ್ದಿರದ ಕಾರಣ ಪ್ರತಿಪಕ್ಷ ನಾಯಕರೇ ಇರಲಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ 99 ಕ್ಷೇತ್ರಗಳನ್ನು ಗೆದ್ದಿದ್ದು, ಈಗ ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇವರು ಆಡಳಿತಾರೂಢ ಪಕ್ಷಕ್ಕೆ ಸೆಡ್ಡು ಹೊಡೆಯುವ ಜತೆಗೆ ಹಲವು ಅಧಿಕಾರಗಳು ಹಾಗೂ ಸವಲತ್ತುಗಳನ್ನು ಪಡೆಯಲಿದ್ದಾರೆ. ಅವುಗಳ ಕುರಿತ ಮಾಹಿತಿ ಹೀಗಿದೆ…

ರಾಹುಲ್‌ ಗಾಂಧಿ ಸಂಬಳ ಎಷ್ಟು?

ರಾಹುಲ್‌ ಗಾಂಧಿ ಅವರು ಸಂಸದನಾಗಿ ಪಡೆಯುವ ಸಂಬಳದ ಜತೆಗೆ ಪ್ರತಿಪಕ್ಷ ನಾಯಕರೂ ಆಗಿರುವ ಕಾರಣ ಅವರಿಗೆ ಮಾಸಿಕ 3.3 ಲಕ್ಷ ರೂ. ಸಂಬಳ ಸಿಗಲಿದೆ. ಅಲ್ಲದೆ, ಕ್ಯಾಬಿನೆಟ್‌ ದರ್ಜೆಯ ಸಚಿವರಿಗೆ ಸಿಗುವ ಸವಲತ್ತುಗಳು, ಭದ್ರತೆ (ಝಡ್‌ ಪ್ಲಸ್‌) ಸಿಗಲಿದೆ. ಕ್ಯಾಬಿನೆಟ್‌ ಸಚಿವರೊಬ್ಬರಿಗೆ ಸಿಗುವ ಬಂಗಲೆಯೇ ರಾಹುಲ್‌ ಗಾಂಧಿ ಅವರಿಗೂ ನೀಡಲಾಗುತ್ತದೆ. ಇದರ ಜತೆಗೆ ಹಲವು ಭತ್ಯೆಗಳು ಕೂಡ ರಾಹುಲ್‌ ಗಾಂಧಿ ಅವರಿಗೆ ಸಿಗಲಿವೆ.

Rahul Gandhi

ಅವರ ಅಧಿಕಾರ ವ್ಯಾಪ್ತಿ ಹೇಗಿರಲಿದೆ?

ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕನಾಗಿ ಹಲವು ಸಂಸದೀಯ ಸಮಿತಿಗಳ ಸದಸ್ಯರೂ ಆಗಿರುತ್ತಾರೆ. ಜಂಟಿ ಸಂಸದೀಯ ಸಮಿತಿಗಳು, ಪಬ್ಲಿಕ್‌ ಅಕೌಂಟ್ಸ್‌ ಸಮಿತಿ ಸದಸ್ಯರಾಗಿರುತ್ತಾರೆ. ಹಾಗೆಯೇ, ಸಿಬಿಐ ನಿರ್ದೇಶಕ, ಮುಖ್ಯ ಚುನಾವಣಾ ಆಯುಕ್ತರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಚೀಫ್‌ ವಿಜಿಲನ್ಸ್‌ ಕಮಿಷನರ್‌, ಕೇಂದ್ರೀಯ ಮಾಹಿತಿ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವಾಗ ರಾಹುಲ್‌ ಗಾಂಧಿ ಅವರು ಕೂಡ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.

ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕನಾಗಿ ಸದನದ ಮುಂದಿನ ಸಾಲಿನಲ್ಲಿರುವ ಆಸನದಲ್ಲಿ ಕುಳಿತುಕೊಳ್ಳಲಿದ್ದಾರೆ. ಹಾಗೆಯೇ, ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾತನಾಡುವಾಗ ಕೂಡ ಅವರಿಗೆ ಮುಂದಿನ ಸಾಲಿನಲ್ಲಿಯೇ ಆಸನದ ವ್ಯವಸ್ಥೆ ಮಾಡಲಾಗುತ್ತದೆ.

ಲೋಕಸಭೆಯ ಒಟ್ಟು ಕ್ಷೇತ್ರಗಳ ಶೇ.10ರಷ್ಟು ಅಂದರೆ 55 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಪಕ್ಷವು ಅಧಿಕೃತ ಪ್ರತಿಪಕ್ಷ ಸ್ಥಾನವನ್ನು ಪಡೆಯುತ್ತದೆ. ಆ ಪಕ್ಷದ ನಾಯಕ ಪ್ರತಿಪಕ್ಷ ನಾಯಕರಾಗುತ್ತಾರೆ. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 44 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ 52 ಕ್ಷೇತ್ರ ಗೆದ್ದ ಕಾರಣ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇತ್ತು. ಈ ಬಾರಿ 99 ಕ್ಷೇತ್ರಗಳನ್ನು ಗೆದ್ದಿರುವ ಕಾರಣ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: Rahul Gandhi: ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್;‌ ಸ್ಪೀಕರ್‌ ಮಾಡಿದ್ರಾ?

Exit mobile version