Site icon Vistara News

Rahul Gandhi: ರಾಹುಲ್‌ ಗಾಂಧಿಗೆ ದೇವಾಲಯ ಪ್ರವೇಶ ನಿರಾಕರಣೆ; “ನಾನೇನು ಅಪರಾಧ ಮಾಡಿದ್ದೇನೆ?” ಎಂದ ರಾಹುಲ್

rahul gandhi nyay yatra

ಹೊಸದಿಲ್ಲಿ: ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿರುವ (Bharat Jodo Nyay Yatra) ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಅಸ್ಸಾಮಿನ ದೇವಾಲಯವೊಂದರ ಒಳಗೆ ಪ್ರವೇಶ ನಿರಾಕರಿಸಲಾಗಿದೆ. ʼʼನಾನೇನು ಅಪರಾಧ ಮಾಡಿದ್ದೇನೆ?ʼʼ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

15ನೇ ಶತಮಾನದ ಅಸ್ಸಾಮಿ ಸಂತ ಮತ್ತು ವಿದ್ವಾಂಸರಾದ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ನಾಗಾಂವ್‌ನಲ್ಲಿರುವ ಬಟದ್ರವ ಸತ್ರ ದೇವಸ್ಥಾನಕ್ಕೆ ತಾನು ಭೇಟಿ ನೀಡದಂತೆ ಅಸ್ಸಾಂನ ಅಧಿಕಾರಿಗಳು ತಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪ್ರವೇಶಕ್ಕೆ ತಮ್ಮ ಮೇಲೆ ಹೇರಿರುವ ನಿರ್ಬಂಧಗಳನ್ನು ಅವರು ಪ್ರಶ್ನಿಸಿದ್ದು, “ನಾವು ದೇವಾಲಯಕ್ಕೆ ಭೇಟಿ ನೀಡಲು ಬಯಸುತ್ತೇವೆ. ದೇವಾಲಯಕ್ಕೆ ಭೇಟಿ ನೀಡಲಾಗದಂಥ ಯಾವ ಅಪರಾಧವನ್ನು ನಾನು ಮಾಡಿದ್ದೇನೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಇಂದು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಿಮಿತ್ತದ ಕಾರ್ಯಕ್ರಮಗಳ ಜೊತೆಗೆ ಘರ್ಷಣೆ ಉಂಟಾಗಬಹುದಾದ ಹಿನ್ನೆಲೆಯಲ್ಲಿ, ನಿನ್ನೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಾರ್ಗವನ್ನು ಮರುಪರಿಶೀಲಿಸುವಂತೆ ರಾಹುಲ್‌ ಗಾಂಧಿಯವರನ್ನು ಒತ್ತಾಯಿಸಿದ್ದರು.

“ನಾವು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸಲು ಬಂದಿಲ್ಲ. ನಾವು ಕೇವಲ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಬಯಸುತ್ತೇವೆ” ಎಂದು ಅವರು ಹೇಳಿದರು. “ದೇವಾಲಯಕ್ಕೆ ಯಾರು ಭೇಟಿ ನೀಡಬೇಕೆಂದು ಈಗ ಪ್ರಧಾನಿ ನರೇಂದ್ರ ಮೋದಿಯವರು ನಿರ್ಧರಿಸುತ್ತಿದ್ದಾರೆ. ಅವರೊಬ್ಬರು ಮಾತ್ರ ಈಗ ದೇವಾಲಯಕ್ಕೆ ಪ್ರವೇಶಿಸಬಹುದು” ಎಂದು ರಾಹುಲ್‌ ಟೀಕಿಸಿದ್ದಾರೆ. ಘಟನೆಯ ನಂತರ ಕಾಂಗ್ರೆಸ್ ನಾಯಕರು ಮತ್ತು ರಾಹುಲ್‌ ಗಾಂಧಿ ನಾಗಾಂವ್‌ನಲ್ಲಿ ಧರಣಿ ಪ್ರತಿಭಟನೆಯನ್ನು ಪ್ರಾರಂಭಿಸಿದರು.

ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮದ ಬಳಿಕ, ಅಂದರೆ ಮಧ್ಯಾಹ್ನ ಮೂರು ಗಂಟೆಯ ಬಳಿಕ ಅಸ್ಸಾಂನ ಬಟದ್ರವ ಥಾಣಕ್ಕೆ ಪ್ರವೇಶಿಸಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಭಾನುವಾರ ಥಾಣ ನಿರ್ವಹಣಾ ಸಮಿತಿ ಅನುಮತಿ ನೀಡಿತ್ತು. “ಜನವರಿ 22 ರಾಮ ಮಂದಿರದ ಪ್ರಾಣಪ್ರತಿಷ್ಠೆಯಾಗಿದ್ದು, ಅನೇಕ ಭಕ್ತರು ಥಾಣೆಗೆ ಬರುತ್ತಾರೆ. ಥಾಣದ ಆವರಣದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಹಸ್ರಾರು ಭಕ್ತರು ಸೇರುತ್ತಿದ್ದಾರೆ. ಆ ಕಾರಣಕ್ಕೆ ರಾಹುಲ್ ಗಾಂಧಿ ಭೇಟಿ ಕಾರ್ಯಕ್ರಮ ಮಧ್ಯಾಹ್ನ 3ರ ನಂತರ ನಡೆಯಬೇಕೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ’’ ಎಂದು ದೇವಾಲಯ ಸಮಿತಿ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ರಾಜ್ಯ ಸರ್ಕಾರದ ಒತ್ತಡದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. “ರಾಹುಲ್ ಗಾಂಧಿ ಬಟದ್ರವ ಥಾನಕ್ಕೆ ಹೋಗಲು ಬಯಸಿದ್ದು, ನಾವು ಜನವರಿ 11ರಿಂದ ಇದಕ್ಕಾಗಿ ಪ್ರಯತ್ನಿಸುತ್ತಿದ್ದೆವು. ನಮ್ಮ ಇಬ್ಬರು ಶಾಸಕರು ಇದಕ್ಕಾಗಿ ಮ್ಯಾನೇಜ್‌ಮೆಂಟ್ ಅನ್ನು ಭೇಟಿಯಾಗಿದ್ದಾರೆ. ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ಅಲ್ಲಿಗೆ ಬರುತ್ತೇವೆ ಎಂದು ತಿಳಿಸಲಾಗಿತ್ತು. ಅದಕ್ಕೆ ದೇವಾಲಯ ಒಪ್ಪಿತ್ತು. ನಿನ್ನೆ ಇದ್ದಕ್ಕಿದ್ದಂತೆ ಆ ಒಪ್ಪಿಗೆಯನ್ನು ಹಿಂಪಡೆಯಲಾಗಿದೆ. ಇದು ರಾಕ್ಯ ಸರ್ಕಾರದ ಒತ್ತಡದಿಂದ ಆಗಿದೆ” ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Rahul Gandhi: ರಾಮ ಮಂದಿರ ಉದ್ಘಾಟನೆಗೆ ಬಹಿಷ್ಕಾರ; ರಾಹುಲ್ ಗಾಂಧಿ ಸಮರ್ಥನೆ ಏನು?

ರಾಮ ಮಂದಿರದ ಪ್ರತಿಷ್ಠಾಪನೆ ಮತ್ತು ಬಟದ್ರವದಲ್ಲಿರುವ ಶ್ರೀಮಂತ ಶಂಕರದೇವರ ಜನ್ಮಸ್ಥಳಕ್ಕೆ ಭೇಟಿಯ ನಡುವೆ ಅನಗತ್ಯ ಚಕಮಕಿಯನ್ನು ತಪ್ಪಿಸುವ ಅಗತ್ಯವನ್ನು ಮುಖ್ಯಮಂತ್ರಿ ಶರ್ಮಾ ನಿನ್ನೆ ಹೇಳಿದ್ದರು.

ನಿನ್ನೆ ನ್ಯಾಯ ಯಾತ್ರೆಯ ರೋಡ್ ಶೋನಲ್ಲಿ, ರಾಹುಲ್‌ ಗಾಂಧಿಯವರು ನಾಗಾಂವ್‌ನ ರಸ್ತೆಬದಿಯ ಉಪಾಹಾರ ಗೃಹದಲ್ಲಿದ್ದಾಗ ವಿರೋಧಿ ಗುಂಪೊಂದು ಅವರ ವಿರುದ್ಧ ಘೋಷಣೆಗಳನ್ನು ಕೂಗಿತ್ತು. ʻಅನ್ಯಾಯ್ ಯಾತ್ರಾ’ ಮತ್ತು ʻರಾಕಿಬುಲ್ ಗೋ ಬ್ಯಾಕ್’ ಎಂಬ ಸಂದೇಶಗಳ ಫಲಕಗಳನ್ನು ಪ್ರದರ್ಶಿಸಲಾಗಿತ್ತು. ರಾಕಿಬುಲ್ ಹುಸೇನ್ ಸಮಗುರಿ ಕಾಂಗ್ರೆಸ್ ಶಾಸಕನಾಗಿದ್ದಾನೆ. ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮೇಲೆ ಬಿಜೆಪಿಯ ಬೆಂಗಾವಲು ಪಡೆಗಳ “ಯೋಜಿತ ದಾಳಿ” ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಇಂದು ಸಂಜೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಘೋಷಿಸಿದೆ.

ಇದನ್ನೂ ಓದಿ: Bharat Jodo Yatra 2: ಗಾಂಧೀಜಿ ಜನ್ಮಸ್ಥಳದಿಂದ ರಾಹುಲ್‌ ಗಾಂಧಿ ಭಾರತ್‌ ಜೋಡೋ 2; ಡೇಟ್‌ ಫಿಕ್ಸ್

Exit mobile version