Site icon Vistara News

ದೇಶಕ್ಕಾಗಿ ರಾಹುಲ್‌ ಗಾಂಧಿ ಪ್ರಾಣತ್ಯಾಗ ಮಾಡಿದ್ದಾರೆ ಎಂದ ಮಲ್ಲಿಕಾರ್ಜುನ ಖರ್ಗೆ!

Mallikarjun Kharge

Rahul Gandhi died for country: Mallikarjun Kharge's Tongue Slips, BJP Taunts

ನವದೆಹಲಿ: ಯಾರಿಗೇ ಆಗಲಿ, ವೇದಿಕೆ ಮೇಲೆ ಭಾಷಣ ಮಾಡುವಾಗ ಕೆಲವೊಮ್ಮೆ ನಾಲಗೆ ತೊದಲುತ್ತದೆ. ಯಾವುದೋ ಪದದ ಬದಲಾಗಿ ಇನ್ನಾವುದೋ ಪದ ಬಳಕೆ, ಯಾರದ್ದೋ ವ್ಯಕ್ತಿಯ ಹೆಸರಿನ ಬದಲಾಗಿ, ಬೇರೆಯವರ ಹೆಸರು ಪ್ರಸ್ತಾಪವಾಗುತ್ತದೆ. ಇಂತಹ ಪ್ರಮಾದ ಅಥವಾ ಬಾಯ್ತಪ್ಪಿ ಹೇಳುವ ನಿದರ್ಶನಗಳು ರಾಜಕಾರಣಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು, “ದೇಶಕ್ಕಾಗಿ ರಾಹುಲ್‌ ಗಾಂಧಿ (Rahul Gandhi) ಅವರು ಪ್ರಾಣ ತ್ಯಾಗ ಮಾಡಿದ್ದಾರೆ” ಎಂದು ಬಾಯ್ತಪಿ ಹೇಳಿದ್ದಾರೆ. ಇದಕ್ಕೆ ಬಿಜೆಪಿ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದೆ.

ರಾಜಸ್ಥಾನದ ಅನೂಪ್‌ಗಢದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ರಾಹುಲ್‌ ಗಾಂಧಿ ಅವರಂತಹ ಹಲವಾರು ನಾಯಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ” ಎಂದರು. ಕೂಡಲೇ ವೇದಿಕೆಯಲ್ಲಿ ಇದ್ದವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಮಾದವನ್ನು ಮನವರಿಕೆ ಮಾಡಿದರು. ಆಗ ಮಲ್ಲಿಕಾರ್ಜುನ ಖರ್ಗೆ, “ಕ್ಷಮೆ ಇರಲಿ. ನಾನು ರಾಜೀವ್‌ ಗಾಂಧಿ ಎಂದು ಹೇಳುವ ಬದಲು ಬಾಯ್ತಪ್ಪಿನಿಂದಾಗಿ ರಾಹುಲ್‌ ಗಾಂಧಿ ಎಂಬುದಾಗಿ ಹೇಳಿದೆ” ಎಂದು ಸ್ಪಷ್ಟನೆ ನೀಡಿದರು.

ಖರ್ಗೆ ಹೇಳಿಕೆಗೆ ಬಿಜೆಪಿಗೆ ವ್ಯಂಗ್ಯ

“ಕಾಂಗ್ರೆಸ್‌ನ ಹಲವು ನಾಯಕರು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರೆ, ಬಿಜೆಪಿ ನಾಯಕರು ಜನರ ಪ್ರಾಣವನ್ನೇ ಬಲಿ ತೆಗೆದುಕೊಳ್ಳುತ್ತಾರೆ” ಎಂದು ಟೀಕಿಸಿದರು. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರ ಪ್ರಮಾದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಬಿಜೆಪಿಯು, “ಇದೆಲ್ಲ ಯಾವಾಗ ಆಯಿತು” ಎಂದು ಟಾಂಗ್‌ ನೀಡಿದೆ. ರಾಜಸ್ಥಾನದಲ್ಲಿ ನವೆಂಬರ್‌ 25ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಕಾಂಗ್ರೆಸ್‌ ಸಾಲು ಸಾಲು ರ‍್ಯಾಲಿ, ಅಬ್ಬರದ ಪ್ರಚಾರ ಕೈಗೊಳ್ಳುತ್ತಿದೆ. ಬಿಜೆಪಿಯೂ ಪ್ರಚಾರದಲ್ಲಿ ನಿರತವಾಗಿದೆ. ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: Monsoon Parliament Session: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಲೋಕಸಭೆಯಿಂದ ಸಸ್ಪೆಂಡ್!

ರಾಷ್ಟ್ರಪತ್ನಿ ಎಂದಿದ್ದ ಚೌಧರಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅಧೀರ್‌ ರಂಜನ್‌ ಚೌಧರಿ ಅವರು ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದು ಕಳೆದ ವರ್ಷ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿಯವರು ನಾಯಕರು ಲೋಕಸಭೆಯಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಅಧೀರ್‌ ರಂಜನ್‌ ಚೌಧರಿ ಅವರು ದ್ರೌಪದಿ ಮುರ್ಮು ಅವರ ಕ್ಷಮೆಯಾಚಿಸಿದ್ದರು. ʻʻನಿಮ್ಮ ಸ್ಥಾನದ ಬಗ್ಗೆ ವಿವರಿಸುವಾಗ ತಪ್ಪಾದ ಪದವನ್ನು ಪ್ರಮಾದವಶಾತ್‌ ಬಳಸಿದ್ದಕ್ಕೆ ವಿಷಾದ ವ್ಯಕ್ತಪಡಿಸುವುದಕ್ಕಾಗಿ ಈ ಪತ್ರ ಬರೆಯುತ್ತಿದ್ದೇನೆ. ಇದು ಬಾಯ್ತಪ್ಪಿನಿಂದ ಬಂದುರುವ ಮಾತು ಎಂದು ನಾನು ನಿಮಗೆ ಭರವಸೆ ಕೊಡುತ್ತೇನೆ. ಈ ಬಗ್ಗೆ ಕ್ಷಮೆ ಯಾಚಿಸುತ್ತೇನೆ ಮತ್ತು ಇದನ್ನು ಸ್ವೀಕರಿಸಿ ಕ್ಷಮೆ ನೀಡಬೇಕುʼʼ ಎಂದು ಅಧೀರ್‌ ರಂಜನ್‌ ಚೌಧರಿ ಅವರು ಮುರ್ಮು ಅವರಿಗೆ ಪತ್ರ ಬರೆದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version