Site icon Vistara News

Rahul Gandhi in UK: ರಾಹುಲ್‌ ಜತೆಗೆ ʼಭಾರತದ ದುಃಸ್ಥಿತಿʼ ಬಗ್ಗೆ ಮಾತನಾಡಿದ ʼಆರ್‌ಎಸ್‌ಎಸ್‌ ಸದಸ್ಯನ ಮಗಳುʼ: ಯಾರೀಕೆ?

malini nehra

ಲಂಡನ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲಂಡನ್‌ ಪ್ರವಾಸ ಹಲವು ವಿವಾದಗಳಿಗೆ ಒಳಗಾಗಿದೆ. ವಿವಾದಗಳ ಸಾಲಿಗೆ ಇನ್ನೊಂದು ಸೇರಿಕೊಂಡಿದೆ. ʼತಾನು ಆರ್‌ಎಸ್‌ಎಸ್‌ ಸದಸ್ಯರಾಗಿದ್ದವರೊಬ್ಬರ ಮಗಳುʼ ಎಂದು ಹೇಳಿಕೊಂಡಿರುವ ಅನಿವಾಸಿ ಮಹಿಳೆಯೊಬ್ಬರು ʼಭಾರತೀಯ ಪ್ರಜಾಪ್ರಭುತ್ವ ತಲುಪಿರುವ ದುಃಸ್ಥಿತಿʼಯ ಬಗ್ಗೆ ಖೇದ ವ್ಯಕ್ತಪಡಿಸಿ ಈಗ ಟ್ರೋಲ್‌ಗೆ ಗುರಿಯಾಗಿದ್ದಾರೆ.

ರಾಹುಲ್‌ ಗಾಂಧಿ ಅವರ ಜತೆ ಚಾತಂ ಹೌಸ್‌ನಲ್ಲಿ ನಡೆದ ಸಂವಾದದಲ್ಲಿ ಈ ಮಹಿಳೆ ಭಾಗವಹಿಸಿದ್ದರು. ಇವರ ಹೆಸರು ಮಾಲಿನಿ ನೆಹ್ರಾ. ಲಂಡನ್‌ ಮೂಲದ ಕಂಪನಿಯೊಂದರ ಸಿಇಒ ಆಗಿರುವ ಮಾಲಿನಿ, ರಾಹುಲ್‌ ಗಾಂಧಿ ಜತೆ ಆಡಿದ ಮಾತು ಹೀಗಿದೆ- ʼʼನನ್ನ ದೇಶದ ದುಃಸ್ಥಿತಿಯ ಬಗೆಗ ನಾನು ಹತಾಶಳಾಗಿದ್ದೇನೆ. ನನ್ನ ತಂದೆ ಆರ್‌ಎಸ್‌ಎಸ್‌ ಸದಸ್ಯರಾಗಿದ್ದರು. ಅದರ ಬಗೆಗೆ ಹೆಮ್ಮೆ ಹೊಂದಿದ್ದರು. ಅವರು ಈಗ ದೇಶವನ್ನು ಗುರುತಿಸಲಾರರು. ನಾನು ಹುಟ್ಟಿ ಬೆಳೆದ ದೇಶವನ್ನು ಇಂದು ಗುರುತಿಸಲಾಗದ ಲಕ್ಷಾಂತರ ಮಂದಿಯಲ್ಲಿ ನಾನೂ ಒಬ್ಬಳು. ನಾವು ಹೇಗೆ ನಮ್ಮ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಬಹುದು?ʼʼ ಎಂದು ರಾಹುಲ್‌ಗೆ ಪ್ರಶ್ನೆ ಕೇಳಿದ್ದರು.

ʼʼನಿಮ್ಮ ದೇಶದ ಬಗ್ಗೆ, ನೀವು ಅನುಭವಿಸಿದ ಹತಾಶೆಯ ಹೀಗೆ ನಿಮ್ಮನ್ನು ಅಭಿವ್ಯಕ್ತಿಸಿಕೊಳ್ಳುವುದೇ ಒಂದು ಸಶಕ್ತವಾದ ಅಭಿವ್ಯಕ್ತಿ. ಹೀಗೆ ಹೇಳುವ ಮೂಲಕ ಅದು ಪರಿಣಾಮ ಬೀರುತ್ತದೆ. ನೀವು ಅಭಿವ್ಯಕ್ತಿಸುವ ಮೌಲ್ಯಗಳು, ನೀವು ರಕ್ಷಿಸಬಯಸುವ ಹಾಗೂ ಭಾರತೀಯ ಮೌಲ್ಯಗಳಿಗೆ ನಾವು ಹಿಂದಿರುಗಬೇಕಾದ ಅಗತ್ಯದ ಬಗ್ಗೆ ಜಗತ್ತಿನ ಇತರರಿಗೂ ನೀವು ಹೇಳುವುದು ಪರಿಣಾಮಕಾರಿಯಾಗುತ್ತದೆʼʼ ಎಂದು ರಾಹುಲ್‌ ಗಾಂಧಿ ಇದಕ್ಕೆ ಉತ್ತರಿಸಿದ್ದಾರೆ.

ಇದಕ್ಕೆ ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಟುವಾದ ಟೀಕೆ ವ್ಯಕ್ತವಾಗಿದೆ. ಐಟಿ ಉದ್ಯಮಿ ಮೋಹನದಾಸ್‌ ಪೈ ಅವರು ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ʼʼರಬ್ಬಿಶ್!‌ ಈ ಆರ್ಥಿಕ ನಿರಾಶ್ರಿತರು ಭಾರತವನ್ನು ಎಷ್ಟೋ ವರ್ಷಗಳ ಹಿಂದೆಯೇ ತೊರೆದಿದ್ದಾರೆ. ನಾವು ಇಲ್ಲಿದ್ದು, ಕಠಿಣ ಪರಿಶ್ರಮದಿಂದ ತೆರಿಗೆ ಕಟ್ಟಿ, ದೇಶವನ್ನು ರೂಪಿಸಿದ್ದೇವೆ. ಈಗ ಇವರು ನಾನ್‌ಸೆನ್ಸ್‌ ಮಾತಾಡುತ್ತಿದ್ದಾರೆ. ಭಾರತವನ್ನು ನಿಂದಿಸುವ ಇವರು ನಮಗೆ ಬೇಕಿಲ್ಲ. ನೀವಿಲ್ಲದೇ ನಾವು ಚೆನ್ನಾಗಿದ್ದೇವೆ. ನಿಮ್ಮ ನಿಂದನೆ ನಿಲ್ಲಿಸಿʼʼ ಎಂದು ಮಾಲಿನಿ ನೆಹ್ರಾರನ್ನು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: Rahul Gandhi In UK Parliament: ಭಾರತದಲ್ಲಿ ಪ್ರತಿಪಕ್ಷಗಳ ಧ್ವನಿ ದಮನ, ಬ್ರಿಟನ್‌ ಸಂಸತ್ತಲ್ಲಿ ರಾಹುಲ್‌ ಗಾಂಧಿ ಹೇಳಿಕೆ

ʼʼಮಾಲಿನಿ ನೆಹ್ರಾ ಅವರ ತಂದೆ ಡಾ.ಮಾಧವ ನೆಹ್ರಾ ಅವರು ಐಎಎಸ್‌ ಅಧಿಕಾರಿಯಾಗಿದ್ದರು. ಇನ್‌ಸ್ಟಿಟ್ಯೂಟ್‌ ಆಫ್‌ ಡೈರೆಕ್ಟರ್ಸ್‌ ಅನ್ನು ಸ್ಥಾಪಿಸಿದವರು. ಆದರೆ ಆರ್‌ಎಸ್‌ಎಸ್‌ ಜತೆಗೆ ಅವರಿಗೆ ಯಾವ ಸಂಪರ್ಕವೂ ಇರಲಿಲ್ಲʼʼ ಎಂದು ಟ್ವಿಟರಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

ʼʼಈಕೆ ನನ್ನ ದೇಶ ಎಂದಿದ್ದಾಳೆ. ಆದರೆ ಈಕೆ ಭಾರತವನ್ನು ಲೂಟಿ ಹೊಡೆದಿರುವ ಬ್ರಿಟನ್‌ನ ಪ್ರಜೆ. ಈಕೆಗೆ ಭಾರತದ ಬಗ್ಗೆ ಮಾತನಾಡಲು ಏನು ಹಕ್ಕಿದೆ?ʼʼ ಎಂದು ಇನ್ನೊಬ್ಬರು ಕಟುವಾಗಿ ಟೀಕಿಸಿದ್ದಾರೆ. ʼʼಇಂಥ ಪ್ರಾಯೋಜಿತ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿʼʼ ಎಂದಿದ್ದಾರೆ ಇನ್ನೊಬ್ಬರು. ʼʼಈ ಪ್ರಶ್ನೆ ಕೇಳಲು ಜಾರ್ಜ್‌ ಸೋರೋಸ್‌ ನಿಮಗೆ ಎಷ್ಟು ಕೊಟ್ಟಿದ್ದಾರೆ?ʼʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

ಮಾಲಿನಿ ಬಯಾಗ್ರಫಿ ತಿಳಿಸುವ ಪ್ರಕಾರ ಇವರು ಸಣ್ಣ ವಯಸ್ಸಿನಲ್ಲೇ ಭಾರತವನ್ನು ತೊರೆದಿದ್ದಾರೆ. ಜಗತ್ತಿನ ಹಲವು ಕಡೆ ದುಡಿದು ಈಗ ಲಂಡನ್‌ನಲ್ಲಿ ನೆಲೆಸಿದ್ದಾರೆ. 2017ರವರೆಗೆ ಲಂಡನ್‌ನ ಮೇಯರ್‌ಗೆ ಸುಸ್ಥಿರ ಅಭಿವೃದ್ಧಿ ಕಮಿಷನರ್‌ ಆಗಿ ಸೇವೆ ಸಲ್ಲಿಸಿದ್ದರು. ಲಂಡನ್‌ ಹವಾಮಾನ ಕ್ರಿಯಾ ತಂಡದ ರಾಯಭಾರಿಯಾಗಿದ್ದರು.

ಇದನ್ನೂ ಓದಿ: Rahul Gandhi In UK:‌ ಆರ್‌ಎಸ್‌ಎಸ್‌ ಮೂಲಭೂತವಾದಿ, ಸರ್ವಾಧಿಕಾರಿ: ಲಂಡನ್‌ನಲ್ಲಿ ಕಿಡಿ ಕಾರಿದ ರಾಹುಲ್‌ ಗಾಂಧಿ

Exit mobile version