Site icon Vistara News

ರಾಹುಲ್‌ ಗಾಂಧಿ ನಾಯಕನೇ ಅಲ್ಲ, ಅವರಿಗೆ ಜನಬೆಂಬಲವೇ ಇಲ್ಲ: ಗುಲಾಂ ನಬಿ ಆಜಾದ್‌ ಟೀಕೆ; ಅವರ ಹೊಸ ಪುಸ್ತಕದಲ್ಲೇನಿದೆ?

ghulam nabi azad book

ನವ ದೆಹಲಿ: ರಾಹುಲ್‌ ಗಾಂಧಿ ನಾಯಕನೇ ಅಲ್ಲ; ಅವರಿಗೆ ಜನಬೆಂಬಲವಿಲ್ಲ. ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ ಉದ್ಧಾರವಾಗದು ಎಂದು ಮಾಜಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಕಟುವಾಗಿ ಟೀಕಿಸಿದ್ದಾರೆ.

ತಮ್ಮ ಜೀವನ ಪಯಣ ಹಾಗೂ ಕಾಂಗ್ರೆಸ್‌ನಲ್ಲಿ ರಾಜಕೀಯ ವೃತ್ತಿಜೀವನದ ವಿವರಗಳನ್ನು ಒಳಗೊಂಡ ʼಆಜಾದ್‌ʼ ಕೃತಿಯನ್ನು ಅವರು ಬಿಡುಗಡೆ ಮಾಡಿದ್ದು, ಅದರಲ್ಲಿ ಇಂದಿರಾ ಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿಯವರೆಗಿನ ತಮ್ಮ ಜತೆಗಾರಿಕೆಯ ಪ್ರಯಾಣವನ್ನು ವಿವರಿಸಿದ್ದಾರೆ. ಇದರಲ್ಲಿ ಅನೇಕ ಸ್ಫೋಟಕ ವಿವರಗಳಿವೆ. ಕಾಂಗ್ರೆಸ್ ವಕ್ತಾರರು ಈ ಪುಸ್ತಕದ ಬಿಡುಗಡೆ ಸಮಯಸಾಧಕತನದಿಂದ ಕೂಡಿದ್ದು, ಇದು ಬಿಜೆಪಿ ಜತೆಗೆ ಕೈಸೇರಿಸುವ ಉದ್ದೇಶದ ಪ್ರಯತ್ನ ಎಂದು ಟೀಕಿಸಿದ್ದಾರೆ.

ಈ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್‌ ಅವರು ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹಲವು ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಪ್ರಮುಖ ವಿಚಾರಗಳು ಇಲ್ಲಿವೆ:

ರಾಜೀವ್‌ ನಾಯಕತ್ವ ಬದಲಾವಣೆ ಬಗ್ಗೆ

ನಾನೇನು ಹೇಳಲಿ? ಜಿ23 ಪ್ರಕರಣದ ಸಂದರ್ಭ ರಾಹುಲ್ ಗಾಂಧಿ ನನ್ನನ್ನು ಬಿಜೆಪಿ ಏಜೆಂಟ್ ಎಂದು ಕರೆದರು. ಪ್ರಧಾನಿ ಮೋದಿ ಈ ಪತ್ರವನ್ನು ಏಕೆ ಬರೆಯುತ್ತಾರೆ ಎಂದು ನಾನು ಅವರನ್ನು ಕೇಳಿದೆ. ನಾವು ಪಕ್ಷವನ್ನು ಬದಲಾಯಿಸಲು ಮತ್ತು ಅದನ್ನು ಸುಧಾರಿಸಲು ಬಯಸಿದ್ದೇವೆ. ಆದರೆ ರಾಹುಲ್ ಗಾಂಧಿ ಮತ್ತು ಅವರ ಹಿಂಬಾಲಕರು ಅದನ್ನು ಬಯಸುವುದಿಲ್ಲ. ಸಲಹೆ ನೀಡಿದವರ ಮೇಲೆ ದಾಳಿ ಮಾಡುತ್ತಾರೆ. ಒಳ್ಳೆಯ ನಾಯಕರು ನಾಯಕತ್ವವನ್ನು ನೀಡುತ್ತಾರೆ. ಅವರು ನಾಯಕರಲ್ಲ, ಆದ್ದರಿಂದಲೇ ಪಕ್ಷ ಹೀಗಿದೆ.

ನಾನು ಸಂಪುಟದ ಭಾಗವಾಗಿದ್ದಾಗ ಈ ಸುಗ್ರೀವಾಜ್ಞೆ ಮತ್ತು ಕಾನೂನು ತಪ್ಪು ಎಂದು ಸಲಹೆ ನೀಡಿದ್ದೆ. ರಾಜಕೀಯದಲ್ಲಿ ಈ ಮಾನಹಾನಿ ಕಾಯಿದೆಯನ್ನು ತೆಗೆದುಹಾಕಬೇಕು ಎಂದು ನಾನು ಭಾವಿಸುತ್ತೇನೆ. ಆದರೆ ರಾಹುಲ್ ಗಾಂಧಿ ಅದನ್ನು ಕೇಳಲು ನಿರಾಕರಿಸಿದರು. ಈಗ ಅದು ಕಾನೂನಾಗಿದೆ. ಈಗ ಅದನ್ನು ಅನುಸರಿಸಲೇಬೇಕು. ಸಂಸತ್ತಿಗೆ ಅಡ್ಡಿಪಡಿಸುವುದರಲ್ಲಿ ಅರ್ಥವಿಲ್ಲ.

ರಾಹುಲ್‌ ಗಾಂಧಿಗೆ ಜನಬೆಂಬಲವಿಲ್ಲ

ಇಂದಿರಾ ಗಾಂಧಿ ಅವರನ್ನು ಸೂರತ್‌ನಲ್ಲಿ ಬಂಧಿಸಿದ ಪ್ರಕರಣ ನನಗೆ ನೆನಪಿದೆ. ನಾವು ಅಲ್ಲಿಗೆ ತಲುಪಿದ ಕೆಲವೇ ಕ್ಷಣಗಳಲ್ಲಿ ಲಕ್ಷಗಟ್ಟಲೆ ಜನ ಸೇರಿದ್ದರು. ಇದು ಸ್ವಯಂಪ್ರೇರಿತವಾಗಿತ್ತು. ರಾಹುಲ್ ಗಾಂಧಿಗೆ ಸಾರ್ವಜನಿಕ ವಲಯದಲ್ಲಿ ಕಡಿಮೆ ಬೆಂಬಲವಿದೆ. ಕಾಂಗ್ರೆಸ್‌ ಸದಸ್ಯರು ಮತ್ತು ಸಿಎಂಗಳು ಸೂರತ್‌ಗೆ ಧಾವಿಸಲು, ಇಡಿ ಕಚೇರಿಗೆ ಹೋಗಲು ಬೇಡಿಕೊಳ್ಳಬೇಕಾಯಿತು. ಅಂದರೆ ರಾಹುಲ್‌ಗೆ ಯಾವುದೇ ಬೆಂಬಲವಿಲ್ಲ ಎಂದರ್ಥ.

ರಾಹುಲ್‌ ಅವರದೇ ತಂಡ ಮಾಡಿಕೊಳ್ಳುವ ಬಗ್ಗೆ ನನಗೆ ಆಕ್ಷೇಪವಿಲ್ಲ. ಆದರೆ ಈಗ ಅವರೂ ರಾಹುಲ್‌ ಜತೆಗೆ ಇಲ್ಲ. ಅವರು ಈಗ ಕೇವಲ ಸಲಹೆಗಾರರು ಮತ್ತು ತಳಹಂತದ ಅನುಭವವಿಲ್ಲದ ಜನರು ಅವರನ್ನು ಸುತ್ತುವರೆದಿದ್ದಾರೆ. ಅವರು ಜನನಾಯಕರಲ್ಲ. ಇದು ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಲ್ಲಿ ಕಂಡುಬರುತ್ತಿದೆ.

ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಮರಳುವ ವಿಚಾರ

ಅಂಥ ಆಲೋಚನೆ ಖಂಡಿತ ಇಲ್ಲ. ಅವರು ಮುಳುಗುತ್ತಿದ್ದಾರೆ. ಅಲ್ಲಿ ಕೊಡುವ ತೆಗೆದುಕೊಳ್ಳುವ ಭಾವನೆ ಇರಬೇಕು, ಅದು ಇಲ್ಲ. ʼಧನ್ಯವಾದʼ ಎಂದಷ್ಟೇ ಹೇಳುತ್ತೇನೆ. ಯಾಕೆಂದರೆ ನಾನು ʼಆಜಾದ್‌ʼ (ಸ್ವತಂತ್ರ).

ಮೋದಿಯವರು ನನ್ನ ಆತ್ಮೀಯರು ಎಂಬುದು ನಿಜ. ಆದರೆ ದಿಲ್ಲಿಯಲ್ಲಿ ನಾನು ಸರ್ಕಾರಿ ನಿವಾಸ ಉಳಿಸಿಕೊಂಡಿರುವುದಕ್ಕೂ ಅದಕ್ಕೂ ಸಂಬಂಧವಿಲ್ಲ. ನನಗೆ ಉಗ್ರಗಾಮಿಗಳ ಬೆದರಿಕೆ ಇದೆ. ಹೀಗಾಗಿ ಭದ್ರತೆ ಒದಗಿಸಲಾಗಿದೆ ಅಷ್ಟೆ.

Exit mobile version