ಹೊಸದಿಲ್ಲಿ: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯ (Assembly Election 2023) ಸೋಲಿನ ಬಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ (Rahul Gandhi) ಮುಟ್ಟಿದೆ. ಇಂಡಿಯಾ ಮೈತ್ರಿಕೂಟದ (INDIA bloc) ಒಳಗಿನ ಅಸಮಾಧಾನದ ಪರಿಣಾಮ, ಪೂರ್ವನಿಗದಿಯಾಗಿದ್ದ ತಮ್ಮ ವಿದೇಶ ಪ್ರವಾಸವನ್ನು ರಾಹುಲ್ ಗಾಂಧಿ ರದ್ದುಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪಂಚರಾಜ್ಯ ಚುನಾವಣೆಯ ಬಳಿಕ ಡಿಸೆಂಬರ್ 8ರಿಂದ ಡಿಸೆಂಬರ್ 15ರವರೆಗೆ 7 ದಿನಗಳ ಕಾಲ ಆಗ್ನೇಯ ಏಷ್ಯಾ ರಾಷ್ಟ್ರಗಳಾದ ಸಿಂಗಾಪುರ, ಮಲೇಷ್ಯಾ, ಬ್ರೂನಿ, ಇಂಡೋನೇಷ್ಯಾ ಮತ್ತು ವಿಯೆಟ್ನಾಂ ದೇಶಗಳಿಗೆ ರಾಹುಲ್ ಗಾಂಧಿ ಭೇಟಿ ಕೊಡುವವರಿದ್ದರು. ಅಲ್ಲಿನ ಅನಿವಾಸಿ ಭಾರತೀಯರ ಜೊತೆಗೂ ಸಭೆ ಹಾಗೂ ಮಾತುಕತೆ ನಿಗದಿಯಾಗಿತ್ತು. ಆದರೆ ಈಗ ರಾಹುಲ್ ಗಾಂಧಿ ಪ್ರವಾಸ ರದ್ದು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯ ಮುಂದೆ ಕಾಂಗ್ರೆಸ್ ಸೋತಿದೆ. ಎರಡು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದ್ದು, ಮೂರೂ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ, ಪಕ್ಷದ ಒಳಗಿನವರು ಮತ್ತು I.N.D.I.A ಮೈತ್ರಿಕೂಟದ ಪಾಲುದಾರರು ರಾಹುಲ್ ಗಾಂಧಿಯವರ ಆಗ್ನೇಯ ಏಷ್ಯಾ ಪ್ರವಾಸದ ಸಮಯವನ್ನು ಪ್ರಶ್ನಿಸಿದ್ದಾರೆ. ಈ ಹೊತ್ತಿನಲ್ಲಿ ಪಕ್ಷದ ಸೋಲಿನ ಆತ್ಮವಿಮರ್ಶೆ ಮಾಡುವ ಬದಲು ವಿದೇಶ ಪ್ರವಾಸ ಮಾಡುವುದು ಸರಿಯಾದ ಸಂದೇಶ ನೀಡುವುದಿಲ್ಲ ಎಂದು ನಾಯಕರು ಹೇಳಿದ್ದಾರೆ.
ಚುನಾವಣಾ ಫಲಿತಾಂಶ ಪ್ರಕಟವಾದ ಮರುದಿನ, ಡಿಸೆಂಬರ್ 4ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದಲ್ಲಿ ಆಡಳಿತ ಪಕ್ಷದ ಮೇಲೆ ಮುಗಿಬೀಳಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಹುಲ್ ಸಾಥ್ ಕೊಡಬೇಕು ಎಂಬುದು ಪಕ್ಷದೊಳಗಿನ ಅಭಿಪ್ರಾಯವಾಗಿತ್ತು. ತೆಲಂಗಾಣ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಹೈದರಾಬಾದ್‌ಗೆ ಆಗಮಿಸಿದ್ದರು.
ಇತ್ತೀಚೆಗೆ ತಮ್ಮ ತಂದೆ ಪ್ರಣಬ್ ಮುಖರ್ಜಿ ಅವರ ಬಗ್ಗೆ ಶರ್ಮಿಷ್ಠಾ ಮುಖರ್ಜಿ ಬರೆದ ಪುಸ್ತಕದಲ್ಲಿ ಪ್ರಣಬ್ ಅವರು ರಾಹುಲ್ ಗಾಂಧಿ ಬಗ್ಗೆ ತಿಳಿಸುತ್ತಿದ್ದ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ರಾಹುಲ್ ಅವರು ರಾಜಕೀಯವಾಗಿ ಇನ್ನೂ ಮಾಗಬೇಕು. ರಾಜಕೀಯದಿಂದ ಆಗಾಗ ಮಾಯವಾಗುವ ಅವರ ಅಭ್ಯಾಸ ತಮಗೆ ಇಷ್ಟವಿಲ್ಲ ಎಂದು ಪ್ರಣಬ್ ಹೇಳುತ್ತಿದ್ದರು ಎಂದು ಶರ್ಮಿಷ್ಠಾ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Danish Kaneria: ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?