ನವದೆಹಲಿ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ಬುಧವಾರ (ಜೂನ್ 19) 54ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಅವರು ವೈಟ್ ಟಿ ಷರ್ಟ್ ಅಭಿಯಾನ (‘White T-shirt’ campaign)ಕ್ಕೆ ಚಾಲನೆ ನೀಡಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗಾದರೆ ಏನಿದು ಅಭಿಯಾನ? ರಾಹುಲ್ ಗಾಂಧಿ ಯಾಕೆ ಯಾವತ್ತು ಬಿಳಿ ಟಿ ಷರ್ಟ್ ಅನ್ನು ಧರಿಸುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ʼʼನಾನು ಯಾವಾಗಲೂ ‘ಬಿಳಿ ಟಿ ಷರ್ಟ್’ ಏಕೆ ಧರಿಸುತ್ತೇನೆ ಎಂದು ಹಲವರು ಆಗಾಗ್ಗೆ ಕೇಳುತ್ತಾರೆ. ಈ ಬಿಳಿ ಟಿ ಷರ್ಟ್ ಪಾರದರ್ಶಕತೆ, ದೃಢತೆ ಮತ್ತು ಸರಳತೆಯನ್ನು ಸಂಕೇತಿಸುತ್ತದೆ. ಈ ಮೌಲ್ಯಗಳು ನಿಮ್ಮ ಜೀವನದಲ್ಲಿ ಎಲ್ಲಿ ಮತ್ತು ಎಷ್ಟು ಉಪಯುಕ್ತವಾಗಿವೆ? #WhiteTshirtArmy ಹ್ಯಾಶ್ ಟ್ಯಾಗ್ ಬಳಸಿ ವಿಡಿಯೊ ಮೂಲಕ ನನಗೆ ತಿಳಿಸಿ. ನಾನು ನಿಮಗೆ ಬಿಳಿ ಟಿ ಷರ್ಟ್ ಅನ್ನು ಉಡುಗೊರೆಯಾಗಿ ನೀಡುತ್ತೇನೆʼʼ ಎಂದು ಅವರು ಬರೆದುಕೊಂಡಿದ್ದಾರೆ.
जन्मदिन की शुभकामनाओं के लिए आप सभी का दिल से धन्यवाद।
— Rahul Gandhi (@RahulGandhi) June 19, 2024
मुझसे अक्सर पूछा जाता है कि मैं हमेशा 'सफेद T-shirt' क्यों पहनता हूं – यह T-shirt मेरे लिए पारदर्शिता, दृढ़ता और सरलता का प्रतीक है।
आपके जीवन में ये मूल्य कहां और कितनी उपयोगी हैं ये #WhiteTshirtArmy इस्तेमाल कर मुझे एक… pic.twitter.com/B89cI2zDEu
ಹುಟ್ಟುಹಬ್ಬದ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ದೆಹಲಿಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು. ದೆಹಲಿಯ 10 ಜನಪಥ್ (ಸೋನಿಯಾ ಗಾಂಧಿ ಅವರ ನಿವಾಸ) ಮತ್ತು ಪಕ್ಷದ ಪ್ರಧಾನ ಕಚೇರಿಯ ಸುತ್ತಲೂ ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಹೋರ್ಡಿಂಗ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.
1970ರ ಜೂನ್ 19ರಂದು ಜನಿಸಿದ ರಾಹುಲ್ ಗಾಂಧಿ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಅವರು ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಸ್ಪರ್ಧಿಸಿ ಎರಡೂ ಕಡೆ 3 ಲಕ್ಷಕ್ಕಿಂತ ಅಧಿಕ ಮತಗಳಿಂದ ಜಯ ಗಳಿಸಿದ್ದಾರೆ. 2019ರಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿದ್ದ ಅವರು ಅಮೇಥಿಯಲ್ಲಿ ಬಿಜೆಪಿಯ ಸ್ಲೃತಿ ಇರಾನಿ ವಿರುದ್ಧ ಸೋತಿದ್ದರು.
ವಯನಾಡು ಕ್ಷೇತ್ರವನ್ನು ಸಹೋದರಿಗೆ ಬಿಟ್ಟುಕೊಟ್ಟ ರಾಹುಲ್ ಗಾಂಧಿ
ಎರಡು ಕಡೆ ಗೆದ್ದಿರುವ ರಾಹುಲ್ ಗಾಂಧಿ ನಿಯಮ ಪ್ರಕಾರ ಒಂದು ಸ್ಥಾನವನ್ನು ಬಿಟ್ಟು ಕೊಡಬೇಕಿದೆ. ಇದೀಗ ಅವರು ರಾಯ್ ಬರೇಲಿಯನ್ನು ಉಳಿಸಿಕೊಂಡು ವಯನಾಡು ಕ್ಷೇತ್ರವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಈ ಸ್ಥಾನದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ. ಹಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಪ್ರಿಯಾಂಕಾ ಗಾಂಧಿ ಇದೇ ಮೊದಲ ಬಾರಿ ಕಣಕ್ಕಿಳಿಯಲಿದ್ದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನಾನು ವಯನಾಡಿನ ಜನತೆ ಜತೆ ಕಳೆದ ಐದು ವರ್ಷಗಳಿಂದ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಕಳೆದ ಐದು ವರ್ಷಗಳಿಂದ ವಯನಾಡು ಸಂಸದನಾಗಿದ್ದ ನನಗೆ ಅಲ್ಲಿನ ಜನ ತೋರಿಸಿದ ಪ್ರೀತಿ, ಬೆಂಬಲ ಅಪಾರವಾದುದು. ಈಗ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಲಿದ್ದಾರೆ. ನಾನು ಕೂಡ ವಯನಾಡಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ. ಇನ್ನು ವಯನಾಡಿಗೆ ಇಬ್ಬರು ಸಂಸದರು ಇರಲಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: Rahul Gandhi: ರಾಯ್‌ಬರೇಲಿಯನ್ನೇ ಆಯ್ಕೆ ಮಾಡಿಕೊಂಡ ರಾಹುಲ್ ಗಾಂಧಿ; ವಯನಾಡಿನಲ್ಲಿ ಪ್ರಿಯಾಂಕಾ ಸ್ಪರ್ಧೆ!